BIJAPUR INFO

ಮಹಾರಾಷ್ಟ್ರ ಹೊರತುಪಡಿಸಿ ಇತರ ಕಡೆಗಳಿಂದ ಬರುವ ಕಾರ್ಮಿಕರ ಬಗ್ಗೆ ತೀವ್ರ ನಿಗಾ ಇಡಲು – ತಪಾಸಣೆಗೆ ಒಳಪಡಿಸಲು ಜಿಲ್ಲಾಧಿಕಾರಿಗಳ ಸೂಚನೆ

BI ಬಿಜಾಪುರ : ಮಹಾರಾಷ್ಟ್ರ ರಾಜ್ಯದ ಕಾರ್ಮಿಕರನ್ನು ಹೊರತುಪಡಿಸಿ ಇತರ ರಾಜ್ಯಗಳಿಂದ ಜಿಲ್ಲೆಗೆ ಬರುವ ಕಾರ್ಮಿಕರನ್ನು ಪ್ರವೇಶಾವಕಾಶ ಇದೇ ಮೇ 04 ರಿಂದ ನೀಡಲಾಗುತ್ತದೆ. ಸೂಕ್ತ ತಪಾಸಣೆ ಮೂಲಕ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲೆಯ ತಾಲೂಕಾ ಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಗೋವಾ, ರಾಜಸ್ಥಾನ, ಹರಿಯಾಣ ಮತ್ತು ಮಧ್ಯ ಪ್ರದೇಶಗಳಿಂದ ಜಿಲ್ಲೆಗೆ ಮರಳುವ ಕಾರ್ಮಿಕರಿಗೆ ಪ್ರವೇಶಕಾವಕಾಶ ನೀಡುವ ಸಂದರ್ಭದಲ್ಲಿ ನಿಗದಿ ಪಡಿಸಿದ ಸಮಿತಿಯಿಂದ ಸೂಕ್ತ ತಪಾಣೆಗೆ ಒಳಪಡಿಸಬೇಕು. ಕ್ವಾರಂಟೈನ್ ಅಗತ್ಯವಿದ್ದಲ್ಲಿ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಕಂಟೇನ್ಮೆಂಟ್ ವಲಯಗಳು ಮತ್ತು ವಿಜಯಪುರ ನಗರಗಳಲ್ಲಿ ನಿರ್ಬಂಧಗಳನ್ನು ಮುಂದುವರೆಸಲಾಗುತ್ತಿದ್ದು, ಕಂಟೇನ್ಮೆಂಟ್ ವ್ಯಾಪ್ತಿ ಹೊರಗಡೆ ಜಿಲ್ಲೆಯಾದ್ಯಂತ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ದ್ವಿಚಕ್ರ ವಾಹನ ಕಡ್ಡಾಯವಾಗಿ ಮಾಸ್ಕ್ದೊಂದಿಗೆ, ನಾಲ್ಕು ಚಕ್ರ ಟ್ಯಾಕ್ಸಿ, ಕ್ಯಾಬ್ ಅಗ್ರಿಗೇರ‍್ಸ್ಗಳಲ್ಲಿ ಮಾಸ್ಕ್ದೊಂದಿಗೆ ಡ್ರೈವರ್ ಮತ್ತು ಇಬ್ಬರು ಪ್ರಯಾಣಿಕರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಬಸ್‌ಗಳಿಗೆ, ಪ್ರಯಾಣಿಕರ ಸಾಗಾಣಿಕೆ ವಾಹನಗಳಿಗೆ ಅವಕಾಶವಿರುವುದಿಲ್ಲ. ವಿಶೇಷವಾಗಿ ಇಂಡಿ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿ ಭಾಗದಲ್ಲಿರುವ ವಾಹನಗಳ ಮೇಲೆ ತೀವ್ರ ನಿಗಾ ಇಡುವಂತೆ ಸೂಚಿಸಿರುವ ಅವರು ಇತರೆ ವ್ಯಾಪಾರ ಮತ್ತು ವಹಿವಾಟು, ಕೃಷಿ, ತೋಟಗಾರಿಕೆ, ಎಪಿಎಮ್‌ಸಿ, ಸಂತೆಗಳು, ಅಂಗಡಿಗಳು ಸಾಮಾಜಿಕ ಅಂತರದೊಂದಿಗೆ ಕಾರ್ಯ ನಿರ್ವಹಿಸಬೇಕು. ಈ ನಿಯಮ ಉಲ್ಲಂಘಿಸಿದ್ದಲ್ಲಿ ಕಾನೂನಿನ ರೀತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣಕ್ಕೆ ಅವಕಾಶವಿದ್ದು, ಶಾಪಿಂಗ್ ಕಾಂಪ್ಲೇಕ್ಸ್, ಮಾಲ್‌ಗಳು, ಥೀಯೇಟರ್‌ಗಳು ಸಾರ್ವಜನಿಕ ಮನರಂಜನಾ ಸ್ಥಳಗಳು, ಪ್ರಾರ್ಥನಾ ಸ್ಥಳಗಳಲ್ಲಿ ಎಂದಿನಂತೆ ನಿರ್ಬಂಧ ಇರಲಿದ್ದು, ಹೊಟೇಲ್‌ಗಳ ಮೂಲಕ ಪಾರ್ಸಲ್ ಮಾತ್ರ ಪಡೆಯಲು ಅವಕಾಶ ಕಲ್ಪಿಸುವಂತೆ ಅವರು ಸೂಚನೆ ನೀಡಿದರು.

ಇಂದಿನಿಂದ ಎಲ್ಲಾ ತಾಲೂಕಾ ಕೇಂದ್ರಗಳಿಂದ ಬೆಂಗಳೂರಿಗೆ ಬಸ್‌ಗಳು ಕಾರ್ಮಿಕರನ್ನು ಕರೆತರಲು ಹೋಗುತ್ತಿದ್ದು, ಜಿಲ್ಲೆಗೆ ಬರುವ ಮತ್ತು ಹೋಗುವ ಕಾರ್ಮಿಕರು ಕಡ್ಡಾಯವಾಗಿ ಸೇವಾಸಿಂಧು ವೆಬ್‌ಸೈಟ್ ಮೂಲಕ ನೋಂದಾಯಿಸಬೇಕು. ಅದರಂತೆ ಮಹಾರಾಷ್ಟ್ರ ಹೊರತು ಪಡಿಸಿ ಇತರ ರಾಜ್ಯಗಳಿಗೆ ಹೋಗಲು ನಿಗದಿತ ಟಿಕೆಟ್ ದರ ನಿಗದಿಪಡಿಸಲಾಗಿದೆ. ಅದೇ ರೀತಿ ಬೇರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಕಾರ್ಮಿಕರ ಬಗ್ಗೆ ತಕ್ಷಣ ಮಾಹಿತಿ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅದರಂತೆ ನಾಳೆಯಿಂದ ಜಿಲ್ಲೆಯಾದ್ಯಂತ ಪಡಿತರ ವಿತರಿಸಲಾಗುತ್ತಿದ್ದು, ಸಾಮಾಜಿಕ ಅಂತರ ನಿಯಮ ಪಾಲಿಸಬೇಕು. ಜಿಲ್ಲೆಯ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಡ್ಡಾಯವಾಗಿ ತಲಾ 2000 ರೂಪಾಯಿ ಸಹಾಯಧನ ದೊರಕಿಸಬೇಕು. ಅದರಂತೆ ಕಂಟೇನ್ಮೆಂಟ್ ವಲಯದ ಕಾರ್ಮಿಕರಿಗೂ ನೀಡುವಂತೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಅವರು ಮಾತನಾಡಿ ಸರಕು ಸಾಗಾಣಿಕೆಗೆ ಅವಕಾಶವಿದೆ. ಹೊರ ರಾಜ್ಯಗಳಿಂದ ಬರುವ ಕಾರ್ಮಿಕರ ಬಗ್ಗೆ ತೀವ್ರ ನಿಗಾ ಇಡಬೇಕು. 30 ಚೆಕ್‌ಪೋಸ್ಟ್ಗಳಲ್ಲಿ ತೀವ್ರ ನಿಗಾ ಇಡಬೇಕು. ಆಗಮಿಸುವ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಬೇಕು. ಆರೋಗ್ಯ ಸೇತು ಆ್ಯಪ್ ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಸಬೇಕು. ವ್ಯಾಪಾರ ವಹಿವಾಟು ನಡೆಯುವ ಸ್ಥಳಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು. ಅಂತರ್ ಜಿಲ್ಲಾ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ. ಕಂಟೇನ್ಮೆಂಟ್ ವಲಯದ ಹೊರಗಡೆ ಜನರ ಓಡಾಟಕ್ಕೆ ಅವಕಾಶವಿದ್ದರೂ ಕೂಡ ಕಡ್ಡಾಯವಾಗಿ ಸಾಮಾಜಿಕ ಅಂತರ ನಿಯಮ ಪಾಲಿಸಬೇಕು. ಕಂಟೇನ್ಮೆಂಟ್ ವಲಯದಿಂದ ತುರ್ತು ತೀವ್ರತರ ಕಾಯಿಲೆ, ಗರ್ಭಿಣಿಯರಿಗೆ ಮಾತ್ರ ಹೋಗಿ ಬರಲು ಅವಕಾಶವಿದ್ದು, ಬೇರೆಯವರು ಹೋಗಿ ವಾಪಸ್ ಕಂಟೇನ್ಮೆಂಟ್ ವಲಯಕ್ಕೆ ಬರದೇ ಇದ್ದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ. ಅದರಂತೆ ಈ ಹಿಂದಿನಂತೆ ಅಗತ್ಯ ವಸ್ತುಗಳ ಸಾಗಾಣಿಕೆಗೆ ಅವಕಾಶವಿದ್ದು, ಜನರ ಅನಾವಶ್ಯಕ ಓಡಾಟಕ್ಕೆ ನಿರ್ಬಂಧವಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಮಾತನಾಡಿ ವಿಜಯಪುರ ಮಹಾನಗರ ಪಾಲಿಕೆ ಹೊರತುಪಡಿಸಿ ಆಯಾ ಗ್ರಾಮ ಪಂಚಾಯತ ವ್ಯಾಪ್ತಿಗಳಲ್ಲಿ ವಿವಿಧ ಚಟುವಟಿಕೆಗಳಿಗೆ ಅವಕಾಶವಿದೆ. ಕಟ್ಟಡ ಕಾರ್ಮಿಕರಿಗೆ ಸೇರಿದಂತೆ ಇತರ ಚಟುವಟಿಕೆಗಳಿಗೆ ಅವಕಾಶವಿದ್ದು, ಅಂತರ್ ರಾಜ್ಯ ಪ್ರಯಾಣಕ್ಕೆ ನಿರ್ಬಂಧವಿದೆ. ಸಾಮಾಜಿಕ ಅಂತರದೊಂದಿಗೆ ಎಲ್ಲ ಚಟುವಟಿಕೆ ನಡೆಸಲು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!