ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿ ದೇಣಿಗೆ

BIJAPUR NEWS

BI ಬಿಜಾಪುರ : ಕೋವಿಡ್-19 ಸಂಕಷ್ಟದ ಪರಿಸ್ಥಿತಿಯಲ್ಲಿ ಜನರಿಗೆ ನೆರವಾಗಲು ವಿಜಯಪುರ ಜಿಲ್ಲಾ ಸಹಕಾರಿ ಮದ್ಯವರ್ತಿಗಳ ಬ್ಯಾಂಕ್ ಮೂಲಕ ಒಂದು ಕೋಟಿ ರೂಪಾಯಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುತ್ತಿದೆ ಎಂದು ಶಾಸಕ ಶಿವಾನಂದ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲಾ ಸಹಕಾರಿ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿಂದು ಈ ವಿಷಯ ತಿಳಿಸಿದ ಅವರು ರಾಜ್ಯದಲ್ಲಿಯೇ ಅತೀ ಹೆಚ್ಚಿನ ದೇಣಿಗೆಯನ್ನು ಬೆಳಗಾವಿ ಹಾಗೂ ವಿಜಯಪುರ ಮದ್ಯವರ್ತಿ ಸಹಕಾರಿ ಬ್ಯಾಂಕ್‌ಗಳ ಮೂಲಕ ಒದಗಿಸಲಾಗುತ್ತಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಇನ್ನೂ ಹೆಚ್ಚಿನ ದೇಣಿಗೆ ನೀಡಲು ಅವಕಾಶ ಬಂದಲ್ಲಿ ಸಂತ್ರಸ್ತರಿಗೆ ನೆರವಾಗುವುದಾಗಿ ಅವರು ತಿಳಿಸಿದರು.

ದೇಶದ ಅನೇಕ ಗಂಡಾಂತರ ಪರಿಸ್ಥಿತಿಯಲ್ಲಿ ವಿಶೇಷವಾಗಿ ಕಾರ್ಗಿಲ್ ಯುದ್ಧ, ಸುನಾಮಿ ಮತ್ತು ಇಂದು ಕೋವಿಡ್-19 ಸಂಕಷ್ಟ ಮತ್ತು ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯದ ಜನತೆಯೊಂದಿಗೆ ತಾವಿದ್ದು, ಜಿಲ್ಲೆಯ ಸಂತ್ರಸ್ತರಿಗೂ ತಾವು ಸದಾ ಬೆಂಬಲವಾಗಿ ನಿಲ್ಲುವುದಾಗಿ ತಿಳಿಸಿದ್ದಾರೆ. ಅದರಂತೆ ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ಇತರೆ ಸಹಕಾರ ಸಂಘಗಳ ಮೂಲಕ ಜಿಲ್ಲಾ ನಿಬಂಧಕರ ಮುಖಾಂತರ ಒಟ್ಟು 58 ಲಕ್ಷ ರೂಪಾಯಿಗಳ ದೇಣಿಗೆಯನ್ನು ಸಹ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒದಗಿಸುತ್ತಿರುವುದಾಗಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಸಂಯುಕ್ತಾ ಪಾಟೀಲ, ಎಸ್.ಎಸ್ ಸಿಂಧೆ, ಎಮ್.ಜಿ ಪಾಟೀಲ, ಜಿ.ಟಿ ಗಚಿ ಸೇರಿದಂತೆ ಇತರ ನಿರ್ದೇಶಕರು, ಜನಪ್ರತಿನಿಧಿಗಳು ಇದ್ದರು.