ಕಂಟೇನ್ಮೆಂಟ್ ಪ್ರದೇಶದಲ್ಲಿ ಅನಾವಶ್ಯಕ ಓಡಾಡುವವರನ್ನು ಸಹ 28 ದಿನಗಳ ಕಾಲ ಹೋಮ್ ಕ್ವಾರಂಟೈನ್ ಮಾಡಲಾಗುವುದು : ಡಿಸಿ ವೈ.ಎಸ್ ಪಾಟೀಲ

BIJAPUR NEWS

BI ಬಿಜಾಪುರ : ನಗರದಲ್ಲಿ ಕೋವಿಡ್-19 ಸೋಂಕಿತರು ದಾಖಲಾದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಘೋಷಿಸಿದ ಕಂಟೇನ್ಮೆಂಟ್ ವಲಯದಲ್ಲಿ ಅನಾವಶ್ಯಕವಾಗಿ ಓಡಾಡುವವರು ಕಂಡುಬಂದಲ್ಲಿ ಅಂತಹವರನ್ನು ಕೂಡ ಹೋಮ್ ಕ್ವಾರಂಟೈನ್ ಮಾಡುವಂತಹ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿಂದು ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು ಕೋವಿಡ್-19 ಮುನ್ನೆಚ್ಚರಿಕೆಯಾಗಿ ಲಾಕ್‌ಡೌನ್ ಜಾರಿ ಹಿನ್ನೆಲೆಯಲ್ಲಿ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಮುಂದೆ ಕಂಟೇನ್ಮೆಂಟ್ ಏರಿಯಾದಲ್ಲಿ ಅನಾವಶ್ಯಕವಾಗಿ (ವೈದ್ಯಕೀಯ ಕಾರಣ ಹೊರತು ಪಡಿಸಿ) ಓಡಾಡುವುದು ಕಂಡುಬಂದಲ್ಲಿ ಅಂತಹವರನ್ನು 28 ದಿನಗಳ ಕಾಲ ಹೋಮ್ ಕ್ವಾರಂಟೈನ್ ಮಾಡುವಂತಹ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅದರಂತೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಮತ್ತು 50 ವರ್ಷ ವಯೋಮಾನ ಮೇಲ್ಪಟ್ಟವರು ಯಾವುದೇ ರೀತಿಯ ತೀವ್ರತರಹದ ಉಸಿರಾಟದ ತೊಂದರೆ, ನೆಗಡಿ, ಜ್ವರ, ಕೆಮ್ಮು ಕಂಡು ಬಂದ ತಕ್ಷಣ ಗಮನಕ್ಕೆ ತರುವಂತೆ ತಿಳಿಸಿದ ಅವರು ಇದಕ್ಕೆ ನಿರ್ಲಕ್ಷ್ಯ ತೋರಿದ್ದಲ್ಲಿ ರೋಗ ಬಾಧಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅವಶ್ಯಕ ಮುನ್ನೆಚ್ಚರಿಕೆ ಮತ್ತು ಸಕಾಲಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಈ ರೋಗದಿಂದ ದೂರ ಇರುವಂತೆ ಸಲಹೆ ನೀಡಿದ್ದಾರೆ.

ಕೊರೋನಾ ವೈರಸ್ ವಿರುದ್ಧ ನಾವು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ, ಗಂಭೀರ ಕಾಯಿಲೆ ಇರುವವರು ಮತ್ತು ಮಕ್ಕಳಿಗೆ ಇದು ಶೀಘ್ರ ಅಪಾಯ ಒಡ್ಡುವುದರಿಂದ ಅವಶ್ಯಕ ಮುಂಜಾಗ್ರತೆ ಮತ್ತು ಕಾಳಜಿಯಿಂದ ಇರುವಂತೆ ತಿಳಿಸಿದ ಅವರು ಈ ರೋಗದ ಬಗ್ಗೆ ಭಯ ಬೇಡ, ಎಚ್ಚರಿಕೆ ವಹಿಸುವಂತೆ ಮತ್ತು ರೋಗ ಲಕ್ಷಣಗಳ ಬಗ್ಗೆ ಸೂಕ್ತ ಜಾಗೃತಿ ವಹಿಸುವಂತೆ ಅವರು ತಿಳಿಸಿದ್ದಾರೆ.