ಕೊರೋನಾ ಪಾಸಿಟಿವ್ ಪ್ರಕರಣ ಕಂಡುಬಂದ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಘೋಷಿಸಿ ಆದೇಶ

BIJAPUR NEWS

BI ಬಿಜಾಪುರ : ನೊವೇಲ್ ಕೊರೋನಾ ಪಾಸಿಟಿವ್ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ವಿಜಯಪುರ ನಗರದ ಹಕೀಮ್ ಚೌಕ್, ಕಾಮತ್ ಹೊಟೇಲ್ ಮುಂಭಾಗದ ಹರಣಶಿಖಾರಿ ಓಣಿ, ಕೊಂಚಿಕೊರವರ ಓಣಿ, ಬಡಿ ಕಮಾನ, ಚಪ್ಪರ್ ಬಂದ್ ಓಣಿ, ಜುಮ್ಮಾ ಮಸೀದಿಯ ಹಿಂದೆ ಇರುವ ಕೆ.ಎಚ್.ಬಿ ಕಾಲನಿ, ಪೈಲ್ವಾನ್ ನಗರ, ಮಹೀಬೂಬ್ ನಗರ, ಬೆಂಡಿಗೇರಿ ಓಣಿ, ಸುಭಾಸ್ ಕಾಲನಿ, ಶಾಂತಿ ನಗರ ಈ ಭೌಗೋಳಿಕ ಪ್ರದೇಶವನ್ನು ನಿಷೇಧಿತ ಪ್ರದೇಶ ಮತ್ತು ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.

ಈ ಕಂಟೇನ್ಮೆಂಟ್ ಜೋನ್ ಹೊರಗಿನ ಸುತ್ತಮುತ್ತಲಿನ 100 ಮೀಟರ್ ಪ್ರದೇಶದ ವ್ಯಾಪ್ತಿಯ ಭೌಗೋಳಿಕ ಪ್ರದೇಶವನ್ನು ಬಫರ್ ಜೋನ್ ಎಂದು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಈ ಪ್ರದೇಶದ ವ್ಯಾಪ್ತಿಯಲ್ಲಿ ಯಾವದೇ ವ್ಯಕ್ತಿ ಜನರ ಕಾಲ್ನಡಿಗೆ/ ವಾಹನದ ಮೂಲಕ ಅಥವಾ ಇನ್ನಾವುದೇ ರೀತಿಯಿಂದ ಸದರಿ ಪ್ರದೇಶದಲ್ಲಿ ಆಗಮನ ಮತ್ತು ನಿರ್ಗಮನವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಈ ಆದೇಶ ಕರ್ತವ್ಯನಿರತ ವಾಹನಗಳಿಗೆ ಅನ್ವಯಿಸುವುದಿಲ್ಲ, ನಿರ್ಬಂಧಿತ ಪ್ರದೇಶಕ್ಕೆ ಒಂದೇ ಆಗಮನ-ನಿರ್ಗಮನ ಇರಬೇಕು. ಯಾವುದೇ ವಾಹನವು ಈ ನಿರ್ಬಂಧಿತ ಪ್ರದೇಶದಿಂದ ನಿರ್ಗಮಿಸುವ ಪೂರ್ವದಲ್ಲಿ ಕಡ್ಡಾಯವಾಗಿ ಸ್ಯಾನಿಟೈಜೇಶನ್ ಮಾಡಿ ನಿರ್ಗಮಿಸಬೇಕು. ಸದರಿ ಪ್ರದೇಶದ ಶುಚಿತ್ವವನ್ನು ಮಹಾನಗರ ಪಾಲಿಕೆಯಿಂದ ಕಾಪಾಡಬೇಕು.

ಈ ನಿಷೇಧಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಎಲ್ಲ ನಿವಾಸಿಗಳು ಮುಂದಿನ ಆದೇಶದ ವರೆಗೆ ತಮ್ಮ ಮನೆಯಲ್ಲಿದ್ದುಕೊಂಡು ಆರೋಗ್ಯ ಇಲಾಖೆ ಅಧಿಕಾರಿಗಳು ನೀಡುವ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ತಂಡಗಳನ್ನು ರಚಿಸಿ ಪ್ರತಿನಿತ್ಯ ಈ ಪ್ರದೇಶದಲ್ಲಿ ವಾಸಿಸುತ್ತಿರುವವರ ಆರೋಗ್ಯ ತಪಾಸಣೆ ಕೈಗೊಂಡು ತೀವ್ರ ನಿಗಾ ವಹಿಸಬೇಕು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮ ಕೈಗೊಳ್ಳುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಐಇಸಿ/ಬಿಬಿಸಿ ಚಟುವಟಿಕೆ ಕೈಗೊಳ್ಳಬೇಕು. ಕಂಟೇನ್ಮೆಂಟ್ ಮತ್ತು ಬಫರ್ ಜೋನ್‌ಗಳಲ್ಲಿ ಪೊಲೀಸ್ ಬಂದೋಬಸ್ತ್ ಮತ್ತು ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡಬೇಕು ಎಂದು ಅವರು ಆದೇಶ ನೀಡಿದ್ದಾರೆ.

ಅದರಂತೆ ನಾಲ್ಕಕ್ಕಿಂತ ಹೆಚ್ಚಿನ ಜನರು ಈ ಪ್ರದೇಶ ವ್ಯಾಪ್ತಿಯಲ್ಲಿ ಗುಂಪು ಸೇರುವುದು, ಜನಸಂದಣಿಯಾಗುವ ಮೆರವಣಿಗೆ, ಸಭೆ, ಧಾರ್ಮಿಕ ಉತ್ಸವ, ಮದುವೆ, ಕ್ರೀಡೆ, ಉರುಸು, ಸಂತೆ, ಜಾತ್ರೆ, ಸಮ್ಮೇಳನ ಸಂಪೂರ್ಣ ನಿಷೇಧಿಸಲಾಗಿದೆ. ಎಲ್ಲಾ ಮನೆಗಳಲ್ಲಿನ ಸದಸ್ಯರು ಅವರ ಮನೆಬಿಟ್ಟು ಹೊರಗಡೆ ತಿರುಗಾಡುವಂತಿಲ್ಲ. ಇತರರ ಮನೆಗಳಿಗೆ ಹೋಗುವಂತಿಲ್ಲ. ಸದರಿ ಪ್ರದೇಶಗಳಲ್ಲಿನ ಎಲ್ಲ ಮನೆಗಳ ಸದಸ್ಯರು (ಗೃಹ ಸಂಪರ್ಕ ತಡೆ) ಹೋಮ್‌ಕ್ವಾರಂಟೈನ್‌ದಲ್ಲಿರಬೇಕು. ಈ ಆದೇಶ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ಕಾರ್ಯಗತಗೊಳಿಸಲು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಪೊಲೀಸ್ ಉಪವಿಭಾಗ ಅಧೀಕ್ಷಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಅವರು ಆದೇಶ ನೀಡಿದ್ದು, ಈ ಆದೇಶ ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ -188 ರನ್ವಯ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.