BIJAPUR INFO

ನನ್ನನ್ನು ಸೋಲಿಸಲು ಮೋದಿ ಕರೆ ನೀಡಿದ ಗ್ರಾಮಸ್ಥರೆ ನನಗೆ ಅತ್ಯಧಿಕ ಮತ ನೀಡಿದ್ದಾರೆ: ಎಂಬಿಪಿ

ಬಿಜಾಪುರ : Feb, 9- ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನನ್ನನ್ನು ಸೋಲಿಸಲು ಯಾರ್ಲಿ ನಡೆಸಿದ ಗ್ರಾಮದಿಂದಲೇ ನಾನು ಇಂದು ಈ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದೇನೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ತಮ್ಮ ಸ್ವ ಕ್ಷೇತ್ರದ ಸಾರವಾಡ ಗ್ರಾಮದಲ್ಲಿ 3.5ಕೋಟಿ ರೂ. ರಸ್ತೆ ಭೂಮಿ ಪೂಜೆ ಹಾಗೂ ಲಿಂಗಾಯತ ಆದಿಬಣಜಿಗ ಸಮುದಾಯ ಭವನ ಉದ್ಘಾಟನೆ ನೆರೆವೇರಿಸಿ ಮಾತನಾಡಿದ ಅವರು ಚುನಾವಣೆಗಳ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ರಾಜ್ಯದ ರಾಜಧಾನಿ ಅಥವಾ ಜಿಲ್ಲಾ ಕೇಂದ್ರಗಳಲ್ಲಿ ಚುನಾವಣೆ ಪ್ರಚಾರ ನಡೆಸುವುದು ವಾಡಿಕೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ನನ್ನ ಬಬಲೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಬಂದು ಸಾರವಾಡದಲ್ಲಿ ನಿಂತು ನನ್ನನ್ನು ಸೋಲಿಸಲು ಕರೆ ನೀಡಿದರು. ಆದರೆ ಅದೇ ಗ್ರಾಮಸ್ಥರು ನನಗೆ ಹಿಂದೆಂದಿಗಿಂತಲೂ ಅತ್ಯಧಿಕ ಮತ ನೀಡುವ ಮೂಲಕ ಇಲ್ಲಿ ಭಾಷಣ ಮಾಡಿದ ಮೋದಿಯವರಿಗೆ ತಕ್ಕ ಉತ್ತರ ನೀಡಿದ್ದಾರೆ. ಇದೀಗ ಗೃಹ ಸಚಿವನಾಗಿ ಅಧಿಕಾರ ವಹಿಸಿದ ನಂತರ ಪ್ರಥಮ ಬಾರಿಗೆ ನನ್ನ ಸ್ವಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಈ ಸಾರವಾಡ ಗ್ರಾಮದಿಂದಲೇ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ್ದೇನೆ ಎಂದರು. ಗೃಹ ಸಚಿವನಾಗಿ ನಾನು ದಿನಪೂರ್ತಿ ಕೆಲಸ ಮಾಡುತ್ತಿದ್ದರೂ, ನೀರಾವರಿ ಸಚಿವನಾಗಿ ಮಾಡಿದ ಕೆಲಸಕ್ಕಿಂತ ಇಲ್ಲಿ ಭಿನ್ನ ಅನುಭವವಿದೆ. ಒಬ್ಬ ರೈತ ಇಡೀ ದಿನ ದುಡಿದು ರಾತ್ರಿ ಮಲಗಿದರೇ, ಅವನಿಗೆ ತಾನು ದುಡಿದ ತೃಪ್ತಿಯಿಂದ ಚೆನ್ನಾಗಿ ನಿದ್ದೆ ಬರುತ್ತದೆ. ನಾನು ನೀರಾವರಿ ಸಚಿವನಾಗಿದ್ದಾಗ ಆ ರೀತಿ ದುಡಿದ ತೃಪ್ತಿ ಇರುತ್ತಿತ್ತು. ಏಕೆಂದರೆ ನಾನು ಮಾಡಿದ ಕಾರ್ಯದಿಂದ ರೈತರ ಬದುಕು ಬಂಗಾರವಾಗುತ್ತಿತ್ತು. ಆದರೆ ಇಲ್ಲಿ ಪರಿಸ್ಥಿತಿ ಹಾಗಿಲ್ಲ ಎಂದರು.

ಮಾಜಿ ಶಾಸಕ ವಿಠ್ಠಲ ಕಟಕದೊಂಡ, ವಿಜಯಪುರ ಮಹಾನಗರ ಪಾಲಿಕೆ ಮಹಾಪೌರ ಶ್ರೀದೇವಿ ಲೋಗಾಂವಿ, ಜಿ.ಪಂ ಸದಸ್ಯೆ ಸುಜಾತಾ ಸೋಮನಾಥ ಕಳ್ಳಿಮನಿ, ಮಾಜಿ ಜಿ.ಪಂ ಸದಸ್ಯ ವಿ.ಎಸ್.ಪಾಟೀಲ್, ಪ್ರಗತಿಪರ ರೈತ ಈಶ್ವರಪ್ಪ ಚಿಕರೆಡ್ಡಿ, ರಾಚನಗೌಡ ಬಿರಾದಾರ, ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರನಗೌಡ ಬಿರಾದಾರ, ಕಾಂಗ್ರೆಸ್ ಸೇವಾದಳ ಜಿಲ್ಲಾಧ್ಯಕ್ಷ ಗಂಗಾಧರ ಸಂಭಣ್ಣಿ, ವೇದಮೂರ್ತಿ ರುದ್ರಮುನಿ ಸ್ವಾಮೀಜಿ, ಸಿದ್ರಮಗೌಡ ಬಿರಾದಾರ, ರುದ್ರಗೌಡ ಬಿರಾದಾರ, ಪ್ರಮೋದ ಚಿಕರೆಡ್ಡಿ, ಬಸವರಾಜ ಹೆಗಡಿ, ಚಂಡ್ರಶೇಖರ ವಾಲಿ, ಲಾಲಪ್ಪ ಮಾದರ, ಸುನೀಲ ಪಾಟೀಲ, ಮಲ್ಲಿಕಾರ್ಜುನ ನಿಂಬಾಳ, ಮಹಾದೇವ ಬಿರಾದಾರ ಮತ್ತಿತರರು ಉಪಸ್ಥಿತರು.

error: Content is protected !!