BIJAPUR INFO

ಬಿ.ಎಲ್.ಡಿ.ಇ ಸಂಸ್ಥೆಯಲ್ಲಿ “ಮತ್ತೆ ಕಲ್ಯಾಣ” ಸಮಾಲೋಚನೆ

BI NEWS, ಬಿಜಾಪುರ : ಸದ್ಯ ದೇಶವನ್ನು ಕಾಡುತ್ತಿರುವ ವರ್ತನೆಗಳನ್ನು ಪರಿವರ್ತನೆ ಮಾಡುವುದು ಮತ್ತೆ ಕಲ್ಯಾಣ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮುಂಡರಗಿ-ಬೈಲೂರು ಮಠದ ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಜಿ ಹೇಳಿದರು. ಸಾಣೇಹಳ್ಳಿ ಪಂಡಿರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಹಮತ ವೇದಿಕೆಯಿಂದ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಂಡಿರುವ “ಮತ್ತೆ ಕಲ್ಯಾಣ” ಕುರಿತ ಬಿ.ಎಲ್.ಡಿ.ಇ ಹಳಕಟ್ಟಿ ಭವನ-2ರಲ್ಲಿ ನಡೆದ ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಅವರು ಇಂದು ಇಡೀ ದೇಶದಾದ್ಯಂತ ಯುವಕರಲ್ಲಿ ವಿಷಮಶೀತ ಜ್ವರ ಆವರಿಸಿದೆ. ಎಲ್ಲರೂ ಆ ಜ್ವರದಲ್ಲಿ ಬಳಲುತ್ತಿದ್ದಾರೆ. ದೇಶ ಕಟ್ಟುವ ನಿಜವಾದ ವಿಷಯಗಳನ್ನು ಮರೆಮಾಚಿ, ಎಲ್ಲರೂ ಸಾಮಾಜಿಕ ಜಾಲತಾಣಗಳ ಭ್ರಮಾ ಲೋಕದಲ್ಲಿ ವಿಹರಿಸುತ್ತಿದ್ದಾರೆ. 1995ರ ನಂತರದಲ್ಲಿ ಹುಟ್ಟಿದವರು ನಮ್ಮ ದೇಶದ ವಾಸ್ತವಿಕ ಚಿತ್ರಣವನ್ನೇ ಮರೆತಿದ್ದಾರೆ. ಮೊದಲು ದೇಶದಲ್ಲಿ ಭಾವೈಕ್ಯತೆ ಎಂಬುದು ಎಲ್ಲರ ನರ-ನಾಡಿಗಳಲ್ಲಿ ಇತ್ತು. ಮುಸ್ಲಿಂ ಕವಿ ಇಕ್ಬಾಲ್ ಬರೆದ “ಸಾರೆ ಜಹಾಂಸೆ ಅಚ್ಚಾ, ಹಿಂದೂಸತಾ ಹಮಾರಾ” ಗೀತೆಯನ್ನು ಹಾಡುವಾಗ ಬರೆದ ಕವಿಯನ್ನು ನೆನಪಿಸಿದ ಸ್ಥಿತಿಗೆ ನಾವು ಬಂದಿದ್ದೇವೆ. ನಮ್ಮ ಭಾವನೆಗಳು ಸತ್ತು ಹೋಗಿದ್ದು, ನಮ್ಮ ತಲೆಯನ್ನು ಪರರಿಗೆ ಮಾರಿಕೊಂಡಿದ್ದೇವೆ. ನಮ್ಮ ಅಸ್ಮಿತೆ ನಾಶವಾಗುತ್ತಿದೆ. ಆ ಕಾರಣಕ್ಕಾಗಿ “ಮತ್ತೆ ಕಲ್ಯಾಣ” ಅವಶ್ಯಕತೆ ಇದೆ ಎಂದರು. ನಮ್ಮ ನೈಜ ಭಾವನೆಗಳಿಗೆ ಭವಿಷ್ಯ ತುಂಬುವುದು, ಸಮಾಜದ ಎಲ್ಲ ವರ್ಗಗಳನ್ನು ಅಪ್ಪಿಕೊಂಡು ಮುಂದೆವರೆಯುವದು, ಕಾಯಕ ದಾಸೋಹ ತತ್ವದಡಿ ಸಮ-ಸಮಾಜ ನಿರ್ಮಾಣ ಮತ್ತೆ ಕಲ್ಯಾಣದ ಆಶಯಗಳಾಗಿವೆ ಎಂದರು. ಚಿಂತನ ಸಾಂಸ್ಕೃತಿಕ ಬಳಗ ಕಾರ್ಯದರ್ಶಿ ಡಾ.ಮಹಾಂತೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ ಬಸವಾದಿ ಶರಣರ ಆಶಯಗಳಂತೆ ನಡೆದಿರುವ ತರಳಬಾಳು ಮಠದ ಶಾಖಾ ಮಠವಾದ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮಿಗಳ ನೇತೃತ್ವದಲ್ಲಿ ನಾಡಿನ ವಿವಿಧ ಮಠಾಧೀಶರ, ಚಿಂತಕರ, ಸಾಹಿತಿಗಳ, ಕಲಾವಿದರ ಮುಂದಾಳತ್ವದಲ್ಲಿ ಮತ್ತೆ ಕಲ್ಯಾಣ ಚಳುವಳಿ ರೂಪದಲ್ಲಿ ನಾಡಿನ ಮನೆ-ಮನಗಳಿಗೆ ಮುಟ್ಟಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ವಿಜಯಪುರದಲ್ಲಿ ಅಗಷ್ಟ 28ರಂದು ನಡೆಯಲಿದೆ ಎಂದರು. ಅಖಿಲ ಭಾರತ ವೀರಶೈವ ಮಹಾಸಭೆಯ ವಿ.ಸಿ.ನಾಗಠಾಣ ಮಾತನಾಡಿ ಬಸವನಾಡಿನ ನಾವುಗಳು ಅಭಿಮಾನ ಶೂನ್ಯರಾಗಿದ್ದೇವೆ. ಹಿಂದೆ ಬೀದರನ ಮೀರಾಜುದ್ದೀನ್ ಪಟೇಲ್ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿದ್ದಾಗ, ಬಸವ ಜಯಂತಿ ಹಿಂದಿನ ದಿನವೇ ಬಂದು ವಾಸ್ತವ್ಯ ಮಾಡಿದ್ದರು. ಮಾರನೇ ದಿನ ಕಾರ್ಯಕ್ರಮದಲ್ಲಿ ಬಂದವರು ಬೆರಳೆಣೆಕೆಯ ಜನ, ಅವರು ಗಾಬರಿಗೊಂಡು ನಮ್ಮ ಬೀದರನಲ್ಲಿ ಬಸವ ಜಯಂತಿಗೆ ಸೇರುವ ಹತ್ತರಷ್ಟು ಜನ ಇಲ್ಲಿ ಸೇರಿಲ್ಲ. ಇದು ಬಸವ ಜನ್ಮ ಭೂಮಿ. ಇಲ್ಲಿಯೇ ಹೀಗಾದರೇ, ಬಸವಣ್ಣನವರನ್ನು ಉಳಿಸುವವರು ಯಾರು? ಎಂದಿದ್ದರು. ಅದು ಇಂದಿಗೂ ಅಕ್ಷರಶಃ ಸತ್ಯವಾಗಿದೆ ಎಂದರು. ಅಮ್ಮನ ಮಡಿಲು ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ದೇವರಾಜ್ ಅರಸು ವಿಚಾರ ವೇದಿಕೆಯ ಸೋಮನಾಥ ಕಳ್ಳಿಮನಿ, ದಲಿತ ಸಂಘಟನೆಗಳ ಒಕ್ಕೂಟದ ಅಡಿವೆಪ್ಪ ಸಾಲಗಲ್, ಶ್ರೀನಾಥ ಪೂಜಾರಿ, ಶರಣ ಸಾಹಿತ್ಯ ಪರಿಷತ್ತಿನ ಜಂಬುನಾಥ ಕಂಚ್ಯಾಣಿ, ಹಳಕಟ್ಟಿ ಕೇಂದ್ರದ ಡಾ.ಎಂ.ಎಸ್.ಮದಭಾವಿ, ಎ.ಬಿ.ಬೂದಿಹಾಳ, ಟಿಪ್ಪು ಸಂಘರ್ಷ ಸಮಿತಿ ಇರ್ಫಾನ್ ಶೇಖ ಸಭೆಯಲ್ಲಿ ಮಾತನಾಡಿ ವಿಜಯಪುರದ ಮತ್ತೆ ಕಲ್ಯಾಣ ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಿದರು. ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು, ಬಸವನ ಬಾಗೇವಾಡಿ ಸಿದ್ದಲಿಂಗಮಹಾಸ್ವಾಮಿಗಳು, ರಾಷ್ಟ್ರೀಯ ಬಸವಸೇನೆ ರವಿಕುಮಾರ ಬಿರಾದಾರ, ಎಸ್.ಎಚ್.ನಾಡಗೌಡ, ಎನ್.ಕೆ.ಕುಂಬಾರ, ಬಿ.ಕೆ.ಗೊಟ್ಯಾಳ, ಬಿ.ಎಂ.ಪಾಟೀಲ್, ಶಂಕರ ಬೈಚಬಾಳ, ಭೀಮಣ್ಣ ಹಳೆಮನಿ, ಗಂಗಾಧರ ಜೋಗುರ, ಸರ್ಫಾರಾಜ್ ಬೀಳಗಿ, ಮ.ಗು.ಯಾದವಾಡ, ಪ್ರಶಾಂತ ಹಿರೆದೇಸಾಯಿ, ನಿಂಗಪ್ಪ ಸಂಗಾಪುರ, ಅನಿಲ ಸೂರ್ಯವಂಶಿ, ಶಂಕರ ತಳವಾರ, ಶರಣಬಸು ಅವಜಿ, ಬಸವರಾಜ ಬಿರಾದಾರ, ಎ.ಎಸ್.ಪಾಟೀಲ್, ಡಾ.ವಿ.ಡಿ.ಐಹೊಳ್ಳಿ ಮತ್ತಿತರರು ಭಾಗವಹಿಸಿದ್ದರು.

error: Content is protected !!