‘’ಹೊರರಾಜ್ಯದಿಂದ ಪ್ರತಿಗ್ರಾಮ – ತಾಂಡಾಗಳಿಗೆ ಬರುವವರ ಬಗ್ಗೆ ತೀವ್ರ ನಿಗಾ ಇಡಿ’’ : ಜಿಲ್ಲಾಧಿಕಾರಿ ಪಾಟೀಲ್

BI ಬಿಜಾಪುರ : ವಿಶ್ವವನ್ನು ತಲ್ಲಣಗೊಳಿಸಿರುವ ನೋವೆಲ್ ಕೊರೋನಾ ವೈರಸ್ ವಿಸ್ತರಣೆ ತಡೆಗಟ್ಟಲು ದೂರುಗಳ ಆಧಾರದ ಮೇಲೆ ಜಿಲ್ಲೆಯ ಪ್ರತಿಗ್ರಾಮ ಹಾಗೂ ತಾಂಡಾಗಳಿಗೆ ಬೇರೆ-ಬೇರೆ ರಾಜ್ಯಗಳಿಂದ ಬಂದಿರುವ ಜನರನ್ನು ಗುರುತಿಸುವಂತೆ ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಕೋವಿಡ್-19 ನಿಯಂತ್ರಣ ಕುರಿತು ಸಭೆ ನಡೆಸಿದ ಅವರು ಅಪಾಯಕಾರಿ ರೀತಿಯಲ್ಲಿ ಬೆಳೆಯುತ್ತಿರುವ ಕೋರೋನಾ ವೈರಸ್ ನಿಯಂತ್ರಣದ ಅಂಗವಾಗಿ ಜಿಲ್ಲೆಯ ಎಲ್ಲ ಗ್ರಾಮ ಮತ್ತು ತಾಂಡಾಗಳಿಗೆ ದೂರುಗಳ ಆಧಾರದ ಮೇಲೆ ಬೇಟಿನೀಡಿ ವಿವಿಧ ರಾಜ್ಯಗಳಿಂದ ಬಂದಿರುವ ಜನರನ್ನು ಗುರುತಿಸಬೇಕು. ಕೊರೋನಾ ಲಕ್ಷಣಗಳ ಬಗ್ಗೆ ತೀವ್ರ ನಿಗಾ ಜೊತೆಗೆ ಅವಶ್ಯಕತೆ ಇದ್ದಲ್ಲಿ ಸೂಕ್ತ ಚಿಕಿತ್ಸೆ ಒದಗಿಸಬೇಕು. ಈ ಮೂಲಕ ನಾಗರಿಕರಲ್ಲಿ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡುವಂತೆ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಾವಾರು ಕ್ಷೇತ್ರಮಟ್ಟದ ಭೇಟಿ ಪರಿಣಾಮಕಾರಿಯಾಗಿರಬೇಕು. ವೈದ್ಯರು, ನರ್ಸಿಂಗ್ ಸಿಬ್ಬಂಧಿ ಹಾಗೂ ವಾಹನದೊಂದಿಗೆ ತೀವ್ರ ನಿಗಾ ಇಡುವ ಕೆಲಸ ಮಾಡುವಂತೆ ತಿಳಿಸಿದ ಅವರು ಆಯಾ ತಾಲೂಕಾ ಆರೋಗ್ಯ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಈ ಕುರಿತು ಸೂಕ್ತ ಮೇಲ್ವಿಚಾರಣೆಯನ್ನು ಸಹ ಮಾಡುವಂತೆ ಸೂಚನೆ ನೀಡಿದರು.

ಮಹಾರಾಷ್ಟ್ರ, ಗೋವಾ, ಮದ್ಯಪ್ರದೇಶ, ರಾಜಸ್ಥಾನ ಭಾಗಗಳಿಂದ ಕಾರ್ಮಿಕರನ್ನು ಕರೆತಂದು ವಿವಿಧ ವಿಶೇಷವಾಗಿ ಕೃಷ್ಣಾಭಾಗ್ಯ ಜಲನಿಗಮ, ಪಂಚಾಯತರಾಜ್ ಇಂಜಿನಿಯರಿಂಗ್ ವಿಭಾಗ ಸೇರಿದಂತೆ ಇತರ ಇಲಾಖೆಗಳ ಮೂಲಕ ಅಭಿವೃದ್ಧಿಕಾರ್ಯಕ್ಕೆ ಬಳಸಿಕೊಂಡಿರುವ ಬಗ್ಗೆ ಗಮನಕ್ಕೆ ಬಂದಿದ್ದು ಅಂತಹ ಕಾರ್ಮಿಕರ ಕುರಿತು 12 ಗಂಟೆಯೊಳಗೆ ಮಾಹಿತಿ ಒದಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಕಾರ್ಮಿಕರ ಆರೋಗ್ಯ ನಿಗಾ ಜೊತೆಗೆ, ಊಟ,ಉಪಹಾರ, ನೀರು ಮತ್ತು ಆಶ್ರಯದ ಸೌಲಭ್ಯ ಕಲ್ಪಿಸಲು ಆಯಾ ಇಲಾಖೆಯ ಆಧಿಕಾರಿಗಳು ಕ್ರಮಕೈಗೊಳ್ಳಬೇಕು. ಅಗತ್ಯ ಬಿದ್ದಲ್ಲಲಿ ಜಿಲ್ಲಾಡಳಿತದ ವತಿಯಿಂದಲೂ ಕೂಡಾ ಉಪಹಾರದ ವ್ಯವಸ್ಥೆ ಒದಗಿಸಲಾಗುವುದು. ಮಾನ್ಯ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು ನಿರ್ದೇಶಿಸಿದಂತೆ ಅಂತರ್‌ಜಿಲ್ಲಾ ಹಾಗೂ ಅಂತರ್‌ರಾಜ್ಯ ಗಡಿಗಳಲ್ಲಿ ತೀವ್ರ ಕಟ್ಟೆಚ್ಚರವಹಿಸಲಾಗಿದೆ. ಆಗಮನ ಮತ್ತು ನಿರ್ಗಮನಕ್ಕೆ ನಿರ್ಭಂಧ ಇರುವ ಹಿನ್ನಲೆಯಲ್ಲಿ ಈ ಎಲ್ಲ ಕಾರ್ಮಿಕರಿಗೆ ಅವಶ್ಯಕ ಸೌಲಭ್ಯ ಪೂರೈಸಲು ಅವರು ಸೂಚಿಸಿದ್ದಾರೆ.

ಅದರಂತೆ ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ಮಾಡದೆ ಅಂತರ್‌ಜಿಲ್ಲಾ ಮತ್ತು ಅಂತರ್‌ರಾಜ್ಯ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ಸಹ ತಿಳಿಸಲಾಗಿದೆ.

ವಿಜಯಪುರ ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಕ್ರಮಕೈಗೊಂಡಿದ್ದು, ನಗರದ 35 ವಾರ್ಡ್ಗಳಲ್ಲಿ ಸಾರ್ವಜನಿಕರಿಂದ ಬರುವ ಸಮಸ್ಯೆ ನಿವಾರಣೆಗೆ ತಲಾ ಇಬ್ಬರು ಪಾಲಿಕೆ ಅಧಿಕಾರಿ ಮತ್ತು ಸಿಬ್ಬಂಧಿಗಳನ್ನು ನೇಮಿಸಲಾಗಿದೆ. ಮಹಿಳೆಯರ ಸಮಸ್ಯೆಗಳಿಗೂ ಸ್ಪಂದಿಸುವ ಉದ್ದೇಶದೊಂದಿಗೆ ಆಯಾ ವಾರ್ಡ್ವಾರು ಅಂಗನವಾಡಿ ಕಾರ್ಯಕರ್ತರನ್ನು ಮತ್ತು ಮೇಲ್ವಿಚಾರಕರನ್ನು ಸಹ ನಿಯೋಜಿಸಲು ಇಂದು ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಾರ್ವಜನಿಕರಿಗೆ ಜೀವನಾವಶ್ಯಕ ಸಾಮಗ್ರಿಗಳಾದ ತರಕಾರಿ, ಹಣ್ಣು ಮತ್ತು ದಿನಸಿ ವಸ್ತುಗಳನ್ನು ಸಾಮಾಜಿಕ ಅಂತರದ ಆಧಾರದ ಮೇಲೆ ಖರಿದಿಗೆ ಅವಕಾಶ ಕಲ್ಪಸಿದೆ. ಮಾರ್ಚ್ 27 ರಿಂದ ವಿವಧ ರೈತರಿಂದ ಎಪಿಎಂಸಿ ಮೂಲಕ ಸಾಮಗ್ರಿ ಪಡೆಯಲು ತಿಳಿಸಿದ್ದು, ಸಾಮಾಜಿಕ ಅಂತರ ಮತ್ತು ಮಾಸ್ಕ್ ಒದಗಿಸುವ ಮೂಲಕ ರೈತರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಸುವಂತೆ ಎಪಿಎಂಸಿ ಸಹಾಯಕ ನಿರ್ದೇಶಕರಿಗೆ ಅವರು ಸೂಚನೆ ನೀಡಿದರು.

ಕೋವಿಡ್-19 ನಿಯಂತ್ರಣ ಮತ್ತು ಸಾರ್ವಜನಿಕರ ನೆರವಿಗಾಗಿ ವಿವಿಧ ದಾನಿಗಳಿಗೆ ಧನ್ಯವಾದ ಅಪಿಸುವುದಾಗಿ ತಿಳಿಸಿದ ಜಿಲ್ಲಾಧಿಕಾರಿಗಳು ದಾನ ಸ್ವಿಕಾರ ಮತ್ತು ಪದಾರ್ಥಗಳ ವಿತರಣೆಗೆ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆವಹಿಸಲಾಗುತ್ತಿದೆ ಎಂದು ಹೇಳಿದರು.

ಜೀವನಾವಶ್ಯಕ ವಸ್ತುಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಿದಲ್ಲಿ ಕ್ರೀಮಿನಲ್ ಪ್ರಕರಣ : ಕೋವಿಡ್-19 ಪರಿಸ್ಥಿತಿಯ ಲಾಭವನ್ನು ಪಡೆದು ಸಗಟು ಮಾರಾಟಗಾರರಾಗಲಿ ಅಥವಾ ಕಿರಾಣಿ ಅಂಗಡಿಯವರಾಗಲಿ ಅಥವಾ ಇತರೆ ವ್ಯಾಪಾರಸ್ಥರು ಅಗತ್ಯ ಸಾಮಗ್ರಿಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರವನ್ನು ಆಕರಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಅವರು ಎಚ್ಚರಿಕೆ ನೀಡಿದ್ದಾರೆ.

ಅದರಂತೆ ಕೊರೋನಾ ವೈರಸ್‌ಗೆ ಸಂಬಂಧಪಟ್ಟಂತೆ ಯಾರಾದರು ಸುಳ್ಳುವದಂತಿ ಹಬ್ಬಿಸುವುದಾಗಲಿ ಅಥವಾ ವಿವಿಧ ಮಾಧ್ಯಮಗಳ ಮೂಲಕ ತಪ್ಪು ಸಂದೇಶ ನೀಡುವಂತಹ ಚಟುವಟಿಕೆ ನಡೆಸಿದ್ದಲ್ಲಿ ಅಂತಹವರ ವಿರುದ್ದ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

ಇಂದು ಪೂರ್ವಾಹ್ನವರೆ ಜಿಲ್ಲೆಗೆ ಒಟ್ಟು 321 ಜನರು ವಿದೇಶದಿಂದ ಆಗಮಿಸಿರುವ ಬಗ್ಗೆ ವರದಿಯಾಗಿದೆ. 36 ಜನ 28 ದಿನಗಳನ್ನು ಪೂರ್ಣಗೊಳಿಸಿದ್ದಾರೆ. 176 ಜನ 15 ರಿಂದ 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. 109 ಜನರು ಹೋಮ್‌ಕ್ವಾರಂಟೈನ್‌ದಲ್ಲಿದ್ದಾರೆ. 7 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್, ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಡಿ.ವೈ.ಎಸ್.ಪಿ ಲಕ್ಷ್ಮಿ ನಾರಾಯಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಮುಕುಂದ ಗಲಗಲಿ, ಜಿಲ್ಲಾಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!