ಹಕ್ಕಿ ಜ್ವರದ ಬಗ್ಗೆ ಯಾವುದೇ ಆತಂಕವಿಲ್ಲ : ನಿರಂತರ ನಿಗಾ ಇಡುವಂತೆ ಜಿಲ್ಲಾಧಿಕಾರಿಗಳ ಸೂಚನೆ

BI ಬಿಜಾಪುರ : ಮೈಸೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಎಚ್5, ಎನ್1 ಹಕ್ಕಿಜ್ವರ ಕಂಡು ಬಂದಿರುವ ಬಗ್ಗೆ ಗಮನಕ್ಕೆ ಬಂದಿದ್ದು, ವಿಜಯಪುರ ಜಿಲ್ಲೆಯಲ್ಲಿ ಹಕ್ಕಿಜ್ವರಕ್ಕೆ ಸಂಬಂಧಪಟ್ಟಂತೆ ಯಾವುದೇ ಪಾಸಿಟಿವ್ ಪ್ರಕರಣಗಳು ದಾಖಲಾಗದೆ ಇರುವುದರಿಂದ ಸಾರ್ವಜನಿಕರು ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.

ಈ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಭದಲಿಂದು ಪರಿಶೀಲನಾ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಜಿಲ್ಲೆಯ ಪಶು ಸಂಗೋಪಣೆ ಇಲಾಖೆಯಿಂದ ತೀವ್ರ ನಿಗಾ ಇಡಲಾಗಿದ್ದು, ಪ್ರತಿ ತಿಂಗಳು ಪ್ರತಿ ತಾಲೂಕಿನಿಂದ, ಹೋಬಳಿಗಳಲ್ಲಿ ಕ್ಲೊಯಕಲ್, ತ್ರೆಕ್ರೇಯಲ್, ಸೀರಂ, ಮತ್ತು ಎನ್ಫಿರಾಮೆಂಟಲ್ ಮಾದರಿಗಳನ್ನು ಬೆಂಗಳೂರು ಲ್ಯಾಬ್‌ಗೆ ಕಳುಹಿಸಿ, ಪರೀಕ್ಷೆಗೆ ಒಳಪಡಿಸುವ ಮೂಲಕ ನಿಗಾ ಇಡಲಾಗಿದ್ದು, ಈವರೆಗೆ ಯಾವುದೇ ಪಾಸಿಟಿವ್ ಪ್ರಕರಣಗಳು ದಾಖಲಾಗದೆ ಇರುವುದರಿಂದ ಸಾರ್ವಜನಿಕರು ಮತ್ತು ಕೋಳಿ ಸಾಕಾಣಿಕೆದಾರರು ಯಾವುದೇ ಆತಂಕಕ್ಕೆ ಒಳಗಾಗದಂತೆ ತಿಳಿಸಿರುವ ಅವರು ಪಶುಸಂಗೋಪನಾ ಇಲಾಖೆ ನಿರಂತರ ನಿಗಾ ಮತ್ತು ಪರಿಶೀಲನಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ವ್ಯಾಪ್ತಿಯಲ್ಲಿ ಕೋಳಿ ಫಾರ್ಮ್ಗಳ ಸಾಂದ್ರತೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕೋಳಿ ಸಾಗಾಣಿಕೆ ಕೈಗೊಳ್ಳುವ ಸಂದರ್ಭದಲ್ಲಿ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಉಪಸ್ಥಿತರಿದ್ದ ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ. ಪ್ರಾಣೇಶ ಜಹಗೀರದಾರ ಅವರು ಸರ್ವೇಕ್ಷಣಾ ಕಾರ್ಯವನ್ನು ಇನ್ನೂ ಹೆಚ್ಚು ಬಲಪಡಿಸುವದರೊಂದಿಗೆ ಕೋಳಿ ಕ್ಷೇತ್ರಗಳ ಮೇಲೆ ತೀವ್ರ ನಿಗಾ ಇಡಲು ಸೂಚಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರ‍್ಯಾಪಿಡ್ ರೆಸ್ಪಾನ್ಸ್ ಟೀಮ್ ರಚಿಸಲಾಗಿದ್ದು, ಪ್ರತಿದಿನ ವರದಿ ಪಡೆದುಕೊಳ್ಳಲು ಸಹಾಯಕ ನಿರ್ದೇಶಕರು ಜಿಲ್ಲಾ ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ ವಿಜಯಪುರ ಇವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಿಸಿದ್ಧಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪ್ಸೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!