ಸ್ತ್ರೀ ರೋಗ ತಜ್ಞರ ಸಲಹಾ ಚೀಟಿ ಇಲ್ಲದೇ ಎಮ್‌ಟಿಪಿ ಮಾಡುವುದು ಕಾನೂನು ಬಾಹಿರ : ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ

BI ಬಿಜಾಪುರ : ಸ್ತ್ರೀ ರೋಗ ತಜ್ಞರ ಸಲಹಾ ಚೀಟಿ ಇಲ್ಲದೇ ಎಮ್‌ಟಿಪಿ (ಮೇಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನಂಸಿ) ಗೆ ಅನುಮತಿ ನೀಡಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು 2019-2020 ನೇ ಸಾಲಿನ 5 ನೇ ಪಿ.ಸಿ ಮತ್ತು ಪಿ.ಎನ್‌ಡಿಟಿ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ತಪಾಸಣಾ ಮತ್ತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸ್ತ್ರೀ ರೋಗ ತಜ್ಞರ ಸಲಹಾ ಚೀಟಿ ಇಲ್ಲದೇ ಎಮ್ ಟಿ ಪಿಗೆ ಅನುಮತಿ ನೀಡಕೂಡದು. ಅದರಂತೆ ಈ ಕುರಿತು ಸೂಕ್ತ ನಿಗಾ ಇಡುವಂತೆ ಜಿಲ್ಲಾ ಔಷಧಿಯ ನಿಯಂತ್ರಣಾಧಿಕರಿಗಳಿಗೆ ಸೂಚಿಸಿದ ಅವರು, ತಪ್ಪಿತಸ್ಥರು ಕಂಡು ಬಂದಲ್ಲಿ ತಕ್ಷಣ ಪ್ರಕರಣ ದಾಖಲಿಸು ವಂತೆ ಸೂಚಿಸಿದರು.
ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ 12 ರಿಂದ 20 ವಾರದ ವರೆಗೆ ಎಮ.ಟಿ.ಪಿ ಮಾಡುವ ಸಂದರ್ಭ ಬಂದಲ್ಲಿ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ರಚಿಸಲಾದ ಸ್ತ್ರೀ ರೋಗ ತಜ್ಞರು, ಚಿಕ್ಕ ಮಕ್ಕಳ ತಜ್ಞರು, ಸೂಪರ್ ಸ್ಪೇಷಾಲಿಟಿ ವೈದ್ಯರು, ರಿಡಿಯಾಲಜಿಸ್ಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಒಳಗೊಂಡ ಜಿಲ್ಲಾ ವೈದ್ಯಕೀಯ ಪರಿಶೀಲನಾ ಸಮಿತಿಯ ಒಪ್ಪಿಗೆ ಪಡೆಯುವುದು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.
ಅದರಂತೆ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಹೇಮದ್ರ ಕಾಪಸೆ ಅವರು, 20 ವಾರ ನಂತರದ ಎಮ್‌ಟಿಪಿ ಮಾಡುವ ಸಂದರ್ಭ ಬಂದಾಗ ಫಾಸ್ಷ ಟ್ರ್ಯಾಕ್ ನ್ಯಾಯಾಲಯದ ಅನುಮತಿ ಪಡೆಯಬೇಕು. ಈ ಕುರಿತಂತೆ ಜಿಲ್ಲೆಯಲ್ಲಿ ಬರುವ ಎಮ್.ಟಿ.ಪಿ ಸಂದರ್ಭದಲ್ಲಿ ಈಗ ರಚಿಸಿರುವ ತಜ್ಞ ವೈದ್ಯರ ಒಪ್ಪಿಗೆ ಪಡೆದು ನಂತರ ಸಲಹಾ ಸಮಿತಿಯ ಸದಸ್ಯರು ಆಗಿರುವ ನ್ಯಾಯವಾದಿ ತುಳಸಿರಾಮ್ ಸೂರ್ಯವಂಶಿ ಅವರ ಮೂಲಕ ಫಾಸ್ಷ ಟ್ರ್ಯಾಕ್ ಕೋರ್ಟಗೆ ಅರ್ಜಿ ಸಲ್ಲಿಸಲು ಸರ್ವಾನುಮತದಿಂದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಹೊಸದಾಗಿ ಬಂದಿರುವ ಸ್ಕ್ಯಾನಿಂಗ್ ಸೆಂಟರ್‌ಗಳ ಅರ್ಜಿ ಮತ್ತು ಸ್ಕ್ಯಾನಿಂಗ್ ಸೆಂಟರ್‌ಗಾಗಿ ಬಂದ ಅರ್ಜಿಗಳ ಬಗ್ಗೆ ಪರಿಶೀಲಿಸಲಾಯಿತು. ಪಿಸಿಪಿಎನ್‌ಡಿಟಿ ಕಾರ್ಯಗಾರ ಹಮ್ಮಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

error: Content is protected !!