ಸೈಕಲ್ ಬಳಸುವದು ಅವಶ್ಯಕವಾಗಿದೆ : ವಿಧಾನ ಪರಿಷತ್ ಸದಸ್ಯ ಸುನೀಲಗೌಡ.ಬಿ.ಪಾಟೀಲ್

BI ಬಿಜಾಪುರ : ಸೈಕ್ಲಿಂಗ್ ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾಗಿದ್ದು, ಪ್ರತಿಯೊಬ್ಬರು ತಮ್ಮ ಆಧುನಿಕ ಜೀವನದ ಒತ್ತಡದಿಂದ ಮುಕ್ತಿ ಹೊಂದಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸೈಕಲ್ ಬಳಸುವದು ಅವಶ್ಯಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ.ಬಿ.ಪಾಟೀಲ್ ಹೇಳಿದರು.
ಗೋಲಗುಂಬಜ್ ಆವರಣದಿಂದ ಆರಂಭಗೊಂಡ ಸೈಕ್ಲಿಂಗ್ ಜಾಥಾ ಚಾಲನೆ ನೀಡಿ, ಬಿ.ಎಲ್.ಡಿ.ಇ ಆಯುರ್ವೇದ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾನು ಆಸ್ಟ್ರೇಲಿಯಾದಲ್ಲಿ ವಿದ್ಯಾರ್ಥಿಯಾಗಿದ್ದಾಗ ನೂರು ಕೆ.ಜಿ ತೂಕ ಹೊಂದಿದ್ದೆ. ಆ ತೂಕವನ್ನು ಕಡಿಮೆ ಮಾಡಿಕೊಳ್ಳಲು ಟ್ರೇಡ್ ಮಿಲ್ ಮೇಲೆ ವೀಪರಿತವಾಗಿ ಓಡಿದ ಪರಿಣಾಮ ನನ್ನ ಎರಡು ಕಾಲುಗಳ ಸಂಧಿಗಳಲ್ಲಿ ನೋವು ಉಂಟಾಯಿತು. ಅದನ್ನು ಉಪಚರಿಸಲು ದೇಶ-ವಿದೇಶದ ಎಲ್ಲ ತಜ್ಞವೈದ್ಯರಿಗೆ ಸಂದರ್ಶಿಸಿದರೂ ಗುಣಮುಖವಾಗಲಿಲ್ಲ. ಕೊನೆಗೆ ಕ್ರಿಕೆಟ್ ತಾರೆ ಸಚಿನ ತೆಂಡೂಲ್ಕರ್ ಫಿಟ್‍ನೆಸ್ ಕೋಚ್ ಅನಂತ ಜೋಶಿಯವರನ್ನು ಸಂಪರ್ಕಿಸಿದಾಗ ಅವರು ಸೈಕ್ಲಿಂಗ್ ಮಾತ್ರ ಇದಕ್ಕೆ ಪರಿಹಾರ ಎಂದರು. ಅಂದಿನಿಂದ ನಾನು ಮನೆಯಲ್ಲಿಯೆ ಸೈಕ್ಲಿಂಗ್ ಮಾಡುತ್ತಿದ್ದೆ. ವಿಜಯಪುರದಲ್ಲಿ ಇತ್ತೀಚೆಗೆ ಸೈಕ್ಲಿಂಗ್ ಟ್ರೆಂಡ್ ಬೆಳೆದಿರುವದರಿಂದ ವಾರದಲ್ಲಿ ಎರಡು ದಿನವಾದರು ಸೈಕ್ಲಿಂಗ್ ಬಳಗದ ಸದಸ್ಯರೊಂದಿಗೆ ಪಾಲ್ಗೊಳ್ಳುತ್ತೇನೆ ಎಂದರು.
ಬಿ.ಎಲ್.ಡಿ.ಇ ಸಂಸ್ಥೆಯ ಶಾಲೆ-ಕಾಲೇಜುಗಳಲ್ಲಿ ಸಹ ಮುಂದಿನ ದಿನಗಳಲ್ಲಿ ಸೈಕಲ್ ಬಳಸಲು ಹೆಚ್ಚಿನ ಪ್ರೋತ್ಸಾಹ ನೀಡಲಾಗುವದು. ವಿಜಯಪುರ ಸೈಕ್ಲಿಂಗ್ ವೆಲೋಡ್ರೋಮ್‍ಗೆ ನನ್ನ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ಸಹ ಅನುದಾನ ನೀಡುತ್ತೇನೆ ಎಂದರು.
ನಗರದ ಹಿರಿಯ ವೈದ್ಯ ಡಾ.ರವಿ ಚೌಧರಿ, ಡಾ.ಎಲ್.ಎಸ್.ಪಾಟೀಲ್, ಡಾ.ಆನಂದ ಝಳಕಿ ಮಾತನಾಡಿದರು.
ರಾಜೀವಗಾಂಧಿ ಆರೋಗ್ಯ ವಿವಿ ಉಪಕುಲಸಚಿವ ಡಾ.ಗೀರಿಶ ಸೋನವಾಲಕರ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಗೋಲಗುಂಬಜ್‍ದಿಂದ ಆರಂಭಗೊಂಡ ಜಾಥಾ ಗಾಂಧಿಚೌಕ, ಶಿವಾಜಿವೃತ್ತ, ಮೀನಾಕ್ಷಿವೃತ್ತ, ಕೇಂದ್ರ ಬಸ್‍ನಿಲ್ದಾಣ, ಬಾಗಲಕೋಟ ರಸ್ತೆ ಮೂಲಕ ಎ.ವಿ.ಎಸ್ ಆಯುರ್ವೇದ ಕಾಲೇಜು ತಲುಪಿತು.
ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ಸ್ವಾಗತಿಸಿದರು. ಡಾ.ಮಹಾಂತೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾಥಾದಲ್ಲಿ ನಗರದ ವೃತ್ತಿಪರ ಸೈಕ್ಲಿಸ್ಟ್ ಗಳು, ಹವ್ಯಾಸಿ ಸೈಕ್ಲಿಂಗ್ ಪಟುಗಳು, ಆಯುರ್ವೇದ ಕಾಲೇಜು ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

error: Content is protected !!