ಸೈಕಲ್‍ನ್ನು ಬಳಸಿದರೇ, ಪರಿಸರಕ್ಕೆ ಬಹುದೊಡ್ಡ ಕಾಣಿಕೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ

BI ಬಿಜಾಪುರ : ಪರಿಸರ ರಕ್ಷಣೆಗೆ ನಾವು ನೀಡಬೇಕಾದ ಬಹುದೊಡ್ದ ಕೊಡುಗೆ ಎಂದರೆ ಇದ್ದ ಪರಿಸರವನ್ನು ಹಾಳಾಗದಂತೆ ನೋಡಿಕೊಳ್ಳುವುದಾಗಿದೆ. ಈ ದಿಶೆಯಲ್ಲಿ ಹೆಚ್ಚಿನ ಜನ ಸೈಕಲ್‍ನ್ನು ಬಳಸಿದರೇ, ಪರಿಸರಕ್ಕೆ ಅವರು ಬಹುದೊಡ್ಡ ಕಾಣಿಕೆ ನೀಡಿದಂತೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ವಿಜಯಪುರ ಸೈಕ್ಲಿಂಗ್ ಗ್ರುಪ್ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಹಮ್ಮಿಕೊಂಡಿದ್ದ ಸೈಕ್ಲಿಂಗ್ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಾತನಾಡಿದ ಅವರು ಸೈಕಲ್ ಪರಿಸರಕ್ಕೆ ಅತ್ಯಂತ ಪೂರಕ ವಸ್ತುವಾಗಿದೆ. ಸೈಕಲ್ ತುಳಿಯುವದರಿಂದ ದೇಹದಲ್ಲಿ ಅಘಾದ ಬದಲಾವಣೆಗಳು ಆಗುತ್ತವೆ. ಶಾರೀರಕ ಹಾಗೂ ಮಾನಸಿಕ ಸದೃಡತೆ ಉಂಟಾಗುತ್ತದೆ. ಸಂಚಾರ ದಟ್ಟಣೆ ತಪ್ಪಿಸಲು, ಪರಿಸರಕ್ಕೆ ಮಾರಕವಾಗಿರುವ ಪೇಟ್ರೋಲ್, ಡಿಸೇಲ್ ಉಪಯೋಗಿಸದೆ ಸಂಚರಿಸಲು ಸೈಕ್ಲಿಂಗ್ ಪರ್ಯಾಯ ವಾಹನವಾಗಿದ್ದು, ಜನತೆ ಹೆಚ್ಚು-ಹೆಚ್ಚು ಸೈಕಲ್‍ಗಳನ್ನು ಉಪಯೋಗಿಸಬೇಕು ಎಂದರು.
ನಗರದ ಹೊರವಲಯದ ಭೂತನಾಳ ಹತ್ತಿರ ನಿರ್ಮಿಸುತ್ತಿರುವ ಸೈಕ್ಲಿಂಗ್ ವೆಲೋಡ್ರೋಮ್ ಕಾಮಗಾರಿ ಸ್ಥಳಕ್ಕೆ ಮುಂದಿನವಾರ ಭೇಟಿ ನೀಡಿ, ಪರಿಶೀಲನೆ ಮಾಡಿ, ಕಾಮಗಾರಿ ಚುರುಕುಗೊಳಿಸುತ್ತೇನೆ. ಪ್ರತಿ ರವಿವಾರ ನಾನು ವಿಜಯಪುರ ನಗರದಲ್ಲಿ ಸೈಕ್ಲಿಂಗ್ ಮೇಲೆ ವಿವಿಧ ಬಡಾವಣೆಗಳಲ್ಲಿ ಸುತ್ತುವ ಮೂಲಕ ಆಯಾ ಬಡಾವಣೆಗಳ ರಸ್ತೆಗಳ ಸ್ಥಿತಿ-ಗತಿ ಅರಿಯುವದರ ಜೊತೆಗೆ ಸೈಕ್ಲಿಂಗ್ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಬಸನಗೌಡ ಪಾಟೀಲ್ ಹೇಳಿದರು.
ವಿಜಯಪುರ ಸೈಕ್ಲಿಂಗ್ ಗ್ರುಪ್‍ನ ಡಾ.ಮಹಾಂತೇಶ ಬಿರಾದಾರ ಮಾತನಾಡಿ ಸಂಧಿವಾತ, ಬೆನ್ನು-ಕೀಲು ನೋವು ಮತ್ತಿತರ ವ್ಯಾಧಿಗಳಿಗೆ ಸೈಕ್ಲಿಂಗ್ ರಾಮಬಾಣವಿದ್ದಂತೆ. ವಿಜಯಪುರದಲ್ಲಿ ಈ ಹಿಂದೆ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದ ನನ್ನ ಸ್ನೇಹಿತರು ಸೈಕ್ಲಿಂಗ್ ಆರಂಭಿಸಿದ ನಂತರ ಇನ್ಸುಲಿನ್ ಅಗತ್ಯವಿಲ್ಲದೆ ಮಧುಮೇಹ ನಿಯಂತ್ರಣದಲ್ಲಿದೆ. ಈ ರೀತಿ ಹೃದಯ ಕಾಯಿಲೆ, ರಕ್ತದ ಒತ್ತಡ, ಮಧುಮೇಹ ರೋಗಿಗಳು ಸೇರಿದಂತೆ ಹಲವಾರು ವ್ಯಾಧಿಗಳಿಗೆ ಸೈಕ್ಲಿಂಗ್‍ನಿಂದ ಪರಿಹಾರವಿದೆ. ಹೆಚ್ಚಿನ ಹಣ ತೆತ್ತು ಸೈಕಲ್ ಖರೀದಿಗೆ ಮುನ್ನ ಅದರ ಕುರಿತು ಅಭ್ಯಸಿಸಬೇಕು. ದೇಹದ ಎತ್ತರ ಮತ್ತು ತೂಕದ ಅನುಸಾರ ಬೇರೆ-ಬೇರೆ ಸೈಕಲ್‍ಗಳನ್ನು ಬಳಸಬೇಕು ಎಂದರು.
ವಿಜಯಪುರದ ಸಿಂದಗಿ ನಾಕಾದಿಂದ ಅಥಣಿ ಬಾಯ್‍ಪಾಸ್‍ವರೆಗೆ ಮುಖ್ಯ ರಸ್ತೆಯಲ್ಲಿ ಸೈಕ್ಲಿಂಗ್‍ಗಾಗಿ ಚಿಕ್ಕಲೇನ್ ಮೀಸಲಿಡಬೇಕು. ಬೇಗಂ ತಲಾಬ್ ಕೆರೆಯ ಸುತ್ತಲಿನ 7ಕಿ.ಮೀ ಎರಿಯನ್ನು ಡಾಂಬರೀಕರಣಗೊಳಿಸಿ, ಸೈಕಿಸ್ಟ್ಟ್‍ಗಳ ಹಾಗೂ ವಾಕಿಂಗ್ ಸಲುವಾಗಿಯೇ ಮೀಸಲಿಡಬೇಕು ಎಂದು ವಿಜಯಪುರ ಸೈಕ್ಲಿಂಗ್ ಗ್ರುಪ್ ಪರವಾಗಿ ಶಾಸಕರಲ್ಲಿ ಹಾಗೂ ಪಾಲಿಕೆ ಆಯುಕ್ತರಲ್ಲಿ ವಿನಂತಿಸಲಾಯಿತು.
ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಉದ್ದಿಮಿ ಶಾಂತೇಶ ಕಳಸಗೊಂಡ, ವಿವೇಕಾನಂದ ಸೇನೆಯ ರಾಘವೇಂದ್ರ ಅಣ್ಣಿಗೇರಿ, ಪೊಲೀಸ್ ಅಧಿಕಾರಿಗಳಾದ ರವೀಂದ್ರ ನಾಯ್ಕೊಡಿ, ಆರೀಫ್ ಮುಶಾಪುರೆ, ಶರಣಗೌಡ ಗೌಡರ, ಗಂಗು ಬಿರಾದಾರ, ಗಜಾನನ ಮಂದಾಲಿ, ಯುವಜನ ಸೇವಾ ಕ್ರೀಡಾ ಇಲಾಖೆ ನಿರ್ದೇಶಕ ಎಸ್.ಜಿ.ಲೋಣಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ ಇನಾಮದಾರ, ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ಸುರೇಶ ಘೋಣಸಗಿ, ಪ್ರೇಮಾನಂದ ಬಿರಾದಾರ, ಸುರೇಶ ಜಾಧವ, ಶಿವನಗೌಡ ಪಾಟೀಲ್, ಅಲ್ಕಾ ಪಡತಾರೆ, ಗುರು ಗಚ್ಚಿನಮಠ, ಅಮೀತ ಬಿರಾದಾರ, ವಾಜೆದ್‍ಅಲಿ, ವಿಶಾಲ ಹಿರಾಸ್ಕರ್, ಮನಿಶ ದೇವಗಿರಿಕರ, ವಿನಾಯಕ ಕೋಟಿ, ಪ್ರಶಾಂತ ಶೆಟ್ಟಿ, ಸೇರಿದಂತೆ ನೂರಾರು ಯುವಕರು, ಮಹಿಳೆಯರು, ಬಾಲಕರು ಸೈಕ್ಲಿಂಗ್ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಬೆ.6.30ಕ್ಕೆ ಗೋಲಗುಮ್ಮಜ್ ಆವರಣದಿಂದ ನಗರ ಶಾಸಕ ಬಸನಗೌಡ ಪಾಟೀಲ್‍ರು ನೇತೃತ್ವದಲ್ಲಿ ಆರಂಭಗೊಂಡ ಜಾಥಾ ಗಾಂಧಿವೃತ್ತ, ವಾಟರ್ ಟ್ಯಾಂಕ್, ಬಿ.ಎಲ್.ಡಿ.ಇ, ಬಂಜಾರಾ ಕ್ರಾಸ್, ಇಂಜನಿಯರಿಂಗ್ ಕಾಲೇಜು, ಬಿ.ಎಲ್.ಡಿ.ಇ ಆಸ್ಪತ್ರೆ, ಸಿದ್ದೇಶ್ವರ ದೇವಸ್ಥಾನ ಮುಖಾಂತರ ಅಂಬೇಡ್ಕರ್ ಕ್ರೀಡಾಂಗಣ ತಲುಪಿತು.
ಇಡೀ ಜಾಥಾದುದ್ದಕ್ಕೂ ಭಾರತ ಮಾತಾ ಕೀ ಜೈ, ವಂದೇ ಮಾತರಂ, ಹಮ್ ಫಿಟ್ ಹೈತೋ ಇಂಡಿಯಾ ಫಿಟ್ ಹೈ ಎಂಬ ಘೋಷಣೆಗಳು ಮೊಳಗಿದವು.

error: Content is protected !!