ಸರಕು ಸಾಗಾಟ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಕಾನೂನು ಬಾಹಿರ

BI NEWS, ಬಿಜಾಪುರ : ಜಿಲ್ಲೆಯಲ್ಲಿ ಸರಕು ಸಾಗಾಣೆ ವಾಹನಗಳಲ್ಲಿ ನಿಯಮಬಾಹಿರವಾಗಿ ಪ್ರಯಾಣಿಕರನ್ನು ಸಾಗಿಸುತ್ತಿರುವುದು ಕಂಡು ಬಂದಿದ್ದು, ಇಂತಹ ವಾಹನಗಳನ್ನು ಜಪ್ತಿ ಮಾಡಿ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜರುಗಿದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ನಿಗದಿತ ಆಸನಗಳಿಗಿಂತ ಹೆಚ್ಚಿನ ಪ್ರಮಾಣದ ಪ್ರಯಾಣಿಕರನ್ನು ತುಂಬುವುದು, ಆಟೋ, ಟಂಟಂನಂತಹ ವಾಹನಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಿಲ್ಲಲೂ ಅವಕಾಶವಿಲ್ಲದೆ ಜೋತು ಬಿದ್ದು ಪ್ರಯಾಣಿಸುವುದು, ಅಪಘಾತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಸೂಚನೆ ನೀಡಿದರು. ಗ್ರಾಮಗಳಿಂದ ಶಾಲಾ-ಕಾಲೇಜಿಗೆ ತೆರಳುವ ಮಕ್ಕಳು ಸರ್ಕಾರಿ ಬಸ್ಸುಗಳಿಗಿಂತ ಖಾಸಗಿ ಆಟೋ ಟೆಂಪೋಗಳನ್ನು ಹೆಚ್ಚು ಬಳಸುತ್ತಾರೆ. ಆದ್ದರಿಂದ ಶಾಲಾ ಮುಖ್ಯೋಪಾಧ್ಯಾಯರು, ಎಸ್‍ಡಿಎಂಸಿ ಸಮಿತಿಯವರು ಆಟೋ, ಟೆಂಪೋ ಮಾಲೀಕರಿಗೆ ಶಾಲಾ ಮಕ್ಕಳನ್ನು ತಮ್ಮ ವಾಹನಗಳಲ್ಲಿ ಕರೆದೊಯ್ಯದಂತೆ ಸೂಚನೆ ನೀಡಲು ತಿಳಿಸಿದರು. ಗ್ರಾಮ ಪಂಚಾಯತ್ ಮಟ್ಟದಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಬೇಕು. ಆ ಕುರಿತು ಕ್ರಮ ಕೈಗೊಳ್ಳಿ ಎಂದು ಹೇಳಿದರು. ಕೆಲ ರಸ್ತೆಗಳಲ್ಲಿ ಅವೈಜ್ಞಾನಿಕ ವೇಗ ನಿಯಂತ್ರಕಗಳನ್ನು ನಿರ್ಮಿಸಿದ್ದು ಅತಿಯಾದ ಎತ್ತರದ ವೇಗ ನಿಯಂತ್ರಕಗಳಿಂದಲೂ ಅಪಘಾತಗಳು ಸಂಭವಿಸಬಹುದು. ಆದ್ದರಿಂದ ಸಂಬಂಧಿಸಿದವರಿಗೆ ಸೂಚನೆ ನೀಡಿ, ವೈಜ್ಞಾನಿಕ ರೀತಿಯಲ್ಲಿ ಹಂಪ್ ಅಳವಡಿಸಲು ಕ್ರಮ ಕೈಗೊಳ್ಳಿ. ತಿರುವು ರಸ್ತೆಗಳಲ್ಲಿ, ಶಾಲಾ ಮಕ್ಕಳು ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ರಸ್ತೆ ಪಕ್ಕದಲ್ಲಿ ಸೂಚನೆ ನೀಡುವ ರಸ್ತೆ ಸೂಚಕಗಳನ್ನು ಅಳವಡಿಸಿ ಗ್ರಾಮೀಣ ಭಾಗದಲ್ಲಿ ಬಸ್ ನಿಲುಗಡೆಗೆ ಅವಕಾಶವಿರುವ ಸ್ಥಳಗಳಲ್ಲಿ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಸ್ಥಳೀಯ ಶಾಸಕರ ನಿಧಿಯಿಂದ ಹಣ ಬಳಸಿಕೊಂಡು ಬಸ್ ನಿಲ್ದಾಣ ನಿರ್ಮಿಸಿ, ಶಾಲಾ ಮಕ್ಕಳಿಗೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದರು. ಉಳಿದಂತೆ ನಗರಗಳಲ್ಲಿ ರಸ್ತೆ ಸುರಕ್ಷತೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಡಿ.ಆರ್. ಮಂಜುನಾಥ, ಡಿಡಿಪಿಐ ಪ್ರಸನ್ನಕುಮಾರ, ಡಿಡಿಪಿಯು ಅಮಾತೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!