ವಿಕಲಚೇತನರಿಗೆ ತ್ರಿಚಕ್ರ ವಾಹನ, ಕೃತಕ ಅಂಗಾಂಗ ಸಾಧನ ವಿತರಣೆ

BI ಬಿಜಾಪುರ :ವಿಕಲಚೇತನರಿಗೆ ನಾವು ಉಪಕಾರ ಮಾಡುತ್ತಿದ್ದೇವೆ, ಸಹಾನುಭೂತಿ ತೋರಿಸುತ್ತಿದ್ದೇವೆ ಎಂಬ ಭಾವನೆ ವ್ಯಕ್ತ ಪಡಿಸದೇ ಇದು ನಮ್ಮ ಕರ್ತವ್ಯ ಎಂದು ಅವರಿಗೆ ಸಹಾಯ ಹಸ್ತ ಚಾಚಬೇಕಿದೆ ಎಂದು ಬಿ.ಎಲ್.ಡಿ.ಇ ಅಧ್ಯಕ್ಷ, ಶಾಸಕ ಎಂ.ಬಿ.ಪಾಟೀಲ್ ಹೇಳಿದರು.

ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ ಶಾಸಕರ ಅನುದಾನದಲ್ಲಿ ರೂ.10ಲಕ್ಷ ವೆಚ್ಚದಲ್ಲಿ 14ಫಲಾನುಭವಿಗಳಿಗೆ ತ್ರಿಚಕ್ರ ವಾಹನ ಹಾಗೂ ರೂ.5ಲಕ್ಷ ವೆಚ್ಚದಲ್ಲಿ ವಿಕಲಚೇತನರಿಗೆ ಕೃತಕ ಅಂಗಾಂಗ ಸಾಧನಗಳನ್ನು ವಿತರಿಸಿ ಮಾತನಾಡಿದ ಅವರು ವಿಕಲಚೇತನರಿಗೆ ಕೇವಲ ಸಹಾನುಭೂತಿ, ಅನುಕಂಪ ವ್ಯಕ್ತ ಪಡಿಸುವದರಿಂದ ಪ್ರಯೋಜನವಾಗದು.

ಅವರ ಸ್ಥಿತಿಯಲ್ಲಿ ನಾವಿದ್ದರೇ ಹೇಗೆ? ಎಂಬುದನ್ನು ಅವಲೋಕಿಸಬೇಕು ಎಂದ ಅವರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿಕಲಚೇತನರ ನಿಧಿಗೆ ಲಭ್ಯವಿರುವ ಅನುದಾನ ಕ್ರೋಢಿಕರಿಸಿ, ಹೆಚ್ಚಿನ ಸೌಲಭ್ಯ ಒದಗಿಸಬೇಕು. ಸೋಶಿಯಲ್ ಮಿಡಿಯಾಗಳಲ್ಲಿ ವಿಕಲಚೇತನರು ಕಾರ್ಯ ಕೌಶಲ್ಯಗಳ ಪ್ರೇರಣಾದಾಯಕ ವಿಡಿಯೋಗಳು ಲಭ್ಯವಿದ್ದು, ಅವುಗಳನ್ನು ಹೆಚ್ಚು-ಹೆಚ್ಚು ಇವರಿಗೆ ತೋರಿಸಿ, ವಿಕಲಚೇತನರಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು ಎಂದರು.

ಬಿ.ಎಲ್.ಡಿ.ಇ ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಅರವಿಂದ ಪಾಟೀಲ್ ಮಾತನಾಡಿ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳಿಂದ ಬಳಲುವ ಮಕ್ಕಳಿಗಾಗಿ ಎ.ಡಿ.ಪಿ ಸಂಸ್ಥೆ ಸಹಯೋಗದಲ್ಲಿ ಆರಂಭಿಸಿದ ವಿಶೇಷ ಶಾಲೆಯನ್ನು ಬಿ.ಎಲ್.ಡಿ.ಇ ವಿವಿಯಿಂದ ಧನ ಸಹಾಯ ಒದಗಿಸಿ ಮುಂದುವರೆಸಲಾಗುವದು. ಬರುವ ನವೆಂಬರ್ 1ರಂದು ಈ ಶಾಲೆಯನ್ನು ಉದ್ಘಾಟಿಸಲಾಗುವದು ಎಂದರು.

ವಿಕಲಚೇತನ ಇಲಾಖೆಯ ಹಿರಿಯ ಅಧಿಕಾರಿ ಉಪಾಧ್ಯ ಮಾತನಾಡಿ 1991ರ ಕಾಯಿದೆ ಪ್ರಕಾರ 7ಬಗೆಯ ವಿಕಲಚೇತನರನ್ನು ಗುರುತಿಸಲಾಗಿತ್ತು. ಇತ್ತೀಚಿನ ಕಾಯಿದೆ ಪ್ರಕಾರ 21ಬಗೆಯ ವಿಕಲಚೇತನರನ್ನು ಗುರುತಿಸಲಾಗಿದೆ. ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಬಳಸಿ, ವಿಕಲಚೇತನರ ಮುಖ್ಯವಾಹಿನಿಯಲ್ಲಿ ಬೆರೆಯಬೇಕು ಎಂದರು.

ಉಪನಿರ್ದೇಶಕ ಸಿ.ಬಿ.ಕುಂಬಾರ, ಆಸ್ಪತ್ರೆ ಅಧೀಕ್ಷಕರಾದ ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ, ಉಪಾಧೀಕ್ಷಕರಾದ ಡಾ.ವಿಜಯಕುಮಾರ ವಾರದ, ಡಾ.ರಾಜೇಶ ಹೊನ್ನುಟಗಿ, ಡಾ.ಈಶ್ವರ ಬಾಗೋಜಿ, ಡಾ.ಆರ್.ಎಂ.ಬಾಗೇವಾಡಿ, ಡಾ.ಪಿ.ಜಿ.ಮಂಟೂರ, ಡಾ.ವಿಕಾಸ ದೇಸಾಯಿ, ಗುರುಶಾಂತ ಹಿರೇಮಠ, ಡಾ.ಮಹಾಂತೇಶ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.

error: Content is protected !!