ಲೋಕಸಭಾ ಚುನಾವಣೆ: ಸಹಾಯಕ ಚುನಾವಣಾಧಿಕಾರಿಗಳು-ಎಂಸಿಸಿ ಅಧಿಕಾರಿಗಳು ಚುರುಕಾಗಿ ಕಾರ್ಯನಿರ್ವಹಿಸಲು ಸೂಚನೆ

BI NEWS, ಬಿಜಾಪುರ : ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ನೇಮಕಗೊಂಡಿರುವ ಸಹಾಯಕ ಚುನಾವನಾಧಿಕಾರಿಗಳು, ಮಾದರಿ ನೀತಿ ಸಂಹಿತೆ ನಿಯಂತ್ರಣ ತಂಡಗಳ ಅಧಿಕಾರಿಗಳು ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಸಹಾಯಕ ಚುನವಣಾಧಿಕಾರಿಗಳು ಹಾಗೂ ಮಾದರಿ ನೀತಿ ಸಂಹಿತೆ ನಿಯಂತ್ರಣ ತಂಡಗಳ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಲೋಕಸಭಾ ಚುನಾವಣೆ ಅಂಗವಾಗಿ ಯಾವುದೇ ರೀತಿಯ ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ತಕ್ಷಣ ಪ್ರಕರಣ ದಾಖಲಿಸಬೇಕು. ನೀತಿ ಸಂಹಿತೆ ಉಲ್ಲಂಘನೆ ಸಂಬಂಧಪಟ್ಟಂತೆ ಕ್ಷೀಪ್ರವಾಗಿ ಕ್ರಮ ಕೈಗೊಳ್ಳುವಂತೆ ಎಂಸಿಸಿ ನೊಡಲ್ ಅಧಿಕಾರಿಗಳಿಗೆ ತಿಳಿಸಿದ ಅವರು, ಸಹಾಯಕ ಚುನಾವಣಾಧಿಕಾರಿಗಳು ಸಹ ಮುಂಬರುವ ಚುನಾವಣೆ ಸುಗಮ ಹಾಗೂ ಪಾರದರ್ಶಕವಾಗಿ ನಡೆಯಲು ಚುನಾವಣಾ ಪ್ರಕ್ರಿಯೆ ಬಗ್ಗೆ ಪ್ರಾಥಮಿಕ ಜ್ಞಾನವನ್ನು ಪಡೆದು, ಸೂಕ್ತ ಸಮಯಕ್ಕೆ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದರು.

ಜಿಲ್ಲೆಯ ಹೆದ್ದಾರಿ ಹಾಗೂ ಮುಖ್ಯ ಸ್ಥಳಗಳಲ್ಲಿರುವ ಮತಗಟ್ಟೆಗಳಿಗಗೆ ಮತ್ತು ಮತದಾನ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಬೇಕು. ಆಯಾ ತಹಶೀಲ್ದಾರಗಳೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಅವಶುಯಕ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಅವರು, ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಿದರು.

ಅದರಂತೆ ನಗರ ಮತ್ತು ನಗರ ಸ್ಥಳೀಯ ವ್ಯಾಪ್ತಿಯಲ್ಲಿನ ಮತಗಟ್ಟೆಗಳಲ್ಲಿ ಅವಶ್ಯಕ ಮೂಲಸೌಕರ್ಯಗಳನ್ನು ಕಲ್ಪಿಸಲು ತಕ್ಷಣ ಅನುದಾನ ಬಿಡುಗಡೆ ಮಾಡಲಾಗುವುದು. ಈ ಕುರಿತು ಸೂಕ್ತ ಪರಿಶೀಲನೆ ಸಹ ನಡೆಸಬೇಕು. ಸಹಾಯಕ ಚುನಾವಣಾಧಿಕಾರಿಗಳು ಮತ್ತು ಪ್ಲಾಯಿಂಗ್ ಸ್ಕ್ವಾಡ್ ತಂಡಗಳು, ತಹಶೀಲ್ದಾರರು, ಎಂಸಿಸಿ ನೋಡಲ್ ಅಧಿಕಾರಿಗಳು ಸೆಕ್ಟರ್ ಅಧಿಕಾರಿಗಳು ತಪ್ಪದೇ ಸಿ-ವ್ಹಿಜಿಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲೆಯ ಚುನಾವಣೆಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ದೂರುಗಳಿದ್ದಲ್ಲಿ ಸಾರ್ವಜನಿಕರು ಸಹಾಯವಾಣಿ 08352-1950ಗೆ ದೂರು ಸಲ್ಲಿಸಬಹುದಾಗಿದ್ದು, ಅದರಂತೆ electionvjp2019@gmail.com ಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸ್ಥಾಪಿಸಲಾಗಿರುವ ದೂರು ನಿರ್ವಹಣಾ ಕೇಂದ್ರಕ್ಕೂ ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಚೆಕ್‍ಪೋಸ್ಟ್‍ಗಳಿಗೆ ನೇಮಕಗೊಂಡಿರುವ ಅಧಿಕಾರಿಗಳಿಗೆ ಸೂಕ್ತ ವಾಹನದ ವ್ಯವಸ್ಥೆ, ಎಸ್.ಎಸ್.ಟಿ. ತಂಡಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಸಮಯ ವಿಂಗಡಣೆ ಮಾಡಿರುವ ಜೊತೆಗೆ ಸಿವಿಜಿಲ್ ಇನ್‍ವೆಸ್ಟಿಗೇಲರ್ ಆಪ್ ಡೌನ್‍ಲೋಡ್ ಮಾಡಿಕೊಂಡಿರುವ ಬಗ್ಗೆ ಎಫ್..ಎಸ್.ಟಿ. ತಂಡಗಳು ವಿಡಿಯೋ ಕ್ಯಾಮರಾ, ಮೆಘಾಫೋನ್ ಸೌಲಭ್ಯ, ವಾಹನ ಸೌಲಭ್ಯ ಸಿವಿಜಿಲ್ ಇನ್‍ವೆಸ್ಟಿಗೇಲರ್ ಆಪ್ ಡೌನ್‍ಲೋಡ್ ಮಾಡಿಕೊಂಡಿರುವ ಬಗ್ಗೆ ಮಾಹಿತಿಯನ್ನು ಪಡೆದರು.

ಅದರಂತೆ ಇವಿಎಂ ಮತ್ತು ವಿವಿಪ್ಯಾಟ್‍ಗಳ ಸಿದ್ಧತೆ, ತರಬೇತಿ, ಭದ್ರತಾ ಕೊಠಡಿ, ಮಸ್ಟರಿಂಗ್ ಮತ್ತು ಡಿ- ಮಸ್ಟರಿಂಗ್‍ಗಳಿಗೆ ಸಂಬಂಧಪಟ್ಟಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ, ವಿಎಸ್‍ಟಿ, ವಿವಿಟಿ, ಎಇಒ, ಎಟಿ ಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿರುವ ಬಗ್ಗೆ ಚುನಾವಣಾ ಕಾರ್ಯಕ್ಕಾಗಿ ಅಧಿಗ್ರಹಣ ಆದೇಶದಂತೆ ವರದಿ ಮಾಡಿಕೊಂಡಿರುವ ವಾಹನಗಳು, ಹಂಚಿಕೆ ಮಾಡಿರುವ ಮತ್ತು ಜಿಪಿಎಸ್ ಅಳವಡಿಸಿರುವ ಕುರಿತಂತೆ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು, ಎಂಸಿಸಿ ತಂಡಗಳ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!