ಲೋಕಸಭಾ ಚುನಾವಣೆ : ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ

BI NEWS, ಬಿಜಾಪುರ : ಮುಂಬರುವ ಲೋಕಸಭಾ ಚುನಾವಣೆ ಅಂಗವಾಗಿ ವಿವಿಧ ಪ್ರಕ್ರಿಯೆಗಳನ್ನು ಸುಗಮವಾಗಿ ನಿರ್ವಹಿಸಲು ಅನುಕೂಲವಾಗುವಂತೆ ಈಗಾಗಲೇ ರಚಿಸಲಾದ 17 ಸಮಿತಿಗಳ ಅಧಿಕಾರಿಗಳು ಅಚ್ಚುಕಟ್ಟಾಗಿ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಲೋಕಸಭಾ ಚುನಾವಣೆ ಪ್ರಕ್ರಿಯೆಗಳನ್ನು ಸುಗಮವಾಗಿ ನಡೆಸುವ ಕುರಿತಂತೆ ಈಗಾಗಲೇ ವಿವಿಧ ಸಮಿತಿಗಳಡಿ ನೇಮಿಸಲಾದ ಅಧಿಕಾರಿ-ಸಿಬ್ಬಂದಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಲೋಪಕ್ಕೆ ಅವಕಾಶ ನೀಡದೇ ವ್ಯವಸ್ಥಿತವಾಗಿ ಆಯಾ ಸಮಿತಿಗಳ ಅಧಿಕಾರಿಗಳ ಕಾರ್ಯನಿರ್ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಆಯೋಗಕ್ಕೆ ಸಲ್ಲಿಸಲಾಗುವ ವರದಿಗಳನ್ನು ನಿಗದಿತ ನಮೂನೆಗಳಲ್ಲಿ ಸಕಾಲಕ್ಕೆ ತಪ್ಪದೇ ಸಲ್ಲಿಸುವಂತೆ ಸೂಚನೆ ನೀಡಿದರು.

ಮುಂಬರುವ ಲೋಕಸಭಾ ಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆ ಕ್ಯಾಶ್ ಸೀಜರ್ ಸಮಿತಿ, ಸ್ವೀಪ್ ಸಮಿತಿ, ಅಭ್ಯರ್ಥಿಗಳ ಚುನಾವಣಾ ವೆಚ್ಚ ಮೇಲ್ವಿಚಾರಣೆ ಸಮಿತಿ, ಚುನಾವಣಾ ವೆಚ್ಚ ನಿರ್ವಹಣೆ, ಜಿಲ್ಲಾ ವೆಚ್ಚ ನಿರ್ವಹಣಾ ಕೋಶ ಹಾಗೂ ವೆಚ್ಚ ನಿರ್ವಹಣಾ ಸಮಿತಿಗಳು, ಚುನಾವಣಾ ನಮೂನೆಗಳ ಮುದ್ರಣ, ಸ್ಟೇಶನರಿ ಸಾಮಗ್ರಿ, ಅಂಚೆ ಮತಪತ್ರ, ಇಡಿಸಿ ಪ್ರಕ್ರಿಯೆ ಸಂಪೂರ್ಣ ಮೇಲುಸ್ತುವಾರಿ ಹೊಂದಿರುವ ಅಧಿಕಾರಿಗಳು ಮತಗಟ್ಟೆ ಸಿಬ್ಬಂದಿ ನೇಮಕಾತಿ, ಏಣಿಕೆ ಸಿಬ್ಬಂದಿ, ಮಾಹಿತಿ ಸಂಗ್ರಹ, ಆದೇಶ ತಯಾರಿಕೆ, ಮೈಕ್ರೋ ಅಬ್ಜರ್ವರ್‍ಗಳ ನೇಮಕಾತಿ ತರಬೇತಿ, ಮತಗಟ್ಟೆ ಸಿಬ್ಬಂದಿಗಳ ತರಬೇತಿ ಮತ್ತು ಮಾಸ್ಟರ್ ಟ್ರೇನರ್‍ಗಳ ಸಂಪೂರ್ಣ ಮೇಲುಸ್ತುವಾರಿ ಮತ್ತು ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ನೇಮಕಾತಿಗೆ ನಿಯೋಜಿಸಿದ ಅಧಿಕಾರಿಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು.

ಅದರಂತೆ ಕಂಟ್ರೋಲ್ ರೂಂ ಕಾರ್ಯನಿರ್ವಹಣೆ, ಜಿಲ್ಲಾ ಎಂಸಿಎಂಸಿ, ಜಿಲ್ಲಾ ಮಿಡಿಯಾ ಸರ್ಟಿಫಿಕೇಶನ್ ಸೆಲ್, ನಿರ್ವಹಣಾ ಪ್ರಕ್ರಿಯೆಗಳು ಕಾಸಿಗಾಗಿ ಸುದ್ದಿ ಮತ್ತು ಇತರೆ ಎಲ್ಲ ವಿಚಾರಣೆಗಳ ಕಾರ್ಯ, ಜಿಲ್ಲಾ ವೆಬ್‍ಸೈಟ್ ಮತ್ತು ಗಣಕೀಕರಣ ಮತ್ತು ವೆಬ್‍ಕಾಸ್ಟಿಂಗ್ ಐಸಿಟಿ ಕೆಲಸ ನಿರ್ವಹಣೆ, ಅಬ್ಜರ್ವರ್‍ಗಳ ಸಮನ್ವಯತೆ ಹಾಗೂ ಶಿಷ್ಠಾಚಾರ ವ್ಯವಸ್ಥೆ, ಮೈಕ್ರೋ ಅಬ್ಜರ್ವರ್‍ಗಳ ನೇಮಕಾತಿ, ತರಬೇತಿ ಹಾಗೂ ಸಮನ್ವಯತೆ, ವಿಕಲಚೇತನ ಮತದಾರರ ಸೌಲಭ್ಯದ ಕಾರ್ಯಕ್ರಮಗಳು, ಎಲ್ಲ ರೀತಿಯ ತರಬೇತಿಗಳು, ಮಾದರಿ ಮತಗಟ್ಟೆ ನಿರ್ಮಾಣ, ವಿವಿಧ ವರದಿಗಳ ವ್ಯವಸ್ಥಿತ ನಿರ್ವಹಣೆ, ನಾಮಪತ್ರಗಳ ಕಾರ್ಯದ ಪೂರ್ವಸಿದ್ಧತೆ, ಇತರೆ ಚುನಾವಣಾ ಪ್ರಕ್ರಿಯೆ ಮುಗಿಯುವರೆಗೆ ಸೇರಿದಂತೆ ಮತಪತ್ರ ಮುದ್ರಣ, ಪರಿಶೀಲನೆ ಕಾರ್ಯವನ್ನು ವ್ಯವಸ್ಥಿತವಾಗಿ ಕೈಗೊಳ್ಳಬೇಕು. ವಾಹನಗಳ ಉಸ್ತುವಾರಿ, ಇವಿಎಂ ಹಾಗೂ ವಿವಿ ಪ್ಯಾಟ್‍ಗಳ ಅತ್ಯುತ್ತಮ ನಿರ್ವಹಣೆ, ರೂಟ್ ಮ್ಯಾಪ್ ತಯಾರಿಕೆ, ಮತಗಟ್ಟೆಗಳಿಗೆ ಉಪಹಾರ ಮತ್ತು ಶುದ್ಧ ಕುಡಿಯುವ ನೀರು ಪೂರೈಕೆ, ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಸಮಯದಲ್ಲಿ ಉಪಹಾರ, ಅಲ್ಪೋಪಹಾರ, ಕುಡಿಯುವ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸಮಿತಿಯ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಚುನಾವಣಾ ಕಾರ್ಯದ ಕುರಿತಂತೆ ಪ್ರತಿ ವಾರಕ್ಕೆ ಒಂದು ಬಾರಿ ಪರಿಶೀಲನೆ ನಡೆಸಲಾಗುವುದು. ವಿವಿಧ ಸಮಿತಿಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಾವುದೇ ಲೋಪಗಳಿಗೆ ಅವಕಾಶ ನೀಡದಿರಲು ಹಾಗೂ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ತೋರದೇ ಎಲ್ಲ ಅಧಿಕಾರಿ-ಸಿಬ್ಬಂದಿಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ಇಂದಿಲ್ಲಿ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಸೇರಿದಂತೆ ವಿವಿಧ ಸಮಿತಿ ಅಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!