ಲಚ್ಯಾಣ ಗ್ರಾಮ ಈಗ ಫಿಲ್ಮಿ ಜಗತ್ತಿನ ಕೇಂದ್ರಬಿಂದು

BI NEWS, ಬಿಜಾಪುರ : Mar,10- ಸತ್ಯ ಶರಣರ ನೆಲೆವೀಡು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮವು ಈಗ ಚಿತ್ರರಂಗದ ಕಲಾವಿಧರ ಚಟುವಟಿಕೆಯ ಕೇಂದ್ರಬಿಂದುವಾಗಿದೆ. ಈ ಕ್ಣೇತ್ರದ ಅಧಿಪತಿ, ಪವಾಡ ಪುರುಷ ಶ್ರೀ ಸಿದ್ಧಲಿಂಗ ಮಹಾರಾಜರ ಜೀವನ ಚರಿತ್ರೆ ಆಧಾರಿತ ” ಲಚ್ಯಾಣ ಶ್ರೀ ಸಿದ್ಧಲಿಂಗ ಮಹಾರಾಜರು ” ಎಂಬ ಕನ್ನಡ ಚಲನ ಚಿತ್ರ ನಿರ್ಮಾಣದ ಪ್ರಥಮ ಹಂತದ ಸನ್ನಿವೇಶದ ಚಿತ್ರೀಕರಣವು ಭರ್ಜರಿಯಾಗಿಯೇ ನಡೆಯುತ್ತಿದ್ದ ಸಂದರ್ಭದಲ್ಲಿ ಗಮನಸೆಳೆದ ದೃಶ್ಯಗಳಿವು.

ಈ ಚಲನ ಚಿತ್ರದ ಪ್ರಮುಖ ಪಾತ್ರವಾದ ಶ್ರೀ ಸಿದ್ಧಲಿಂಗ ಮಹಾರಾಜರ ಪಾತ್ರಧಾರಿಯಾಗಿ ಪ್ರಸಿದ್ಧ ನಟ ಡಾ. ಶ್ರೀಧರ್ ಅವರು ಅಭಿನಯಿಸಿದರು.‌ ಈ ನಿಮಿತ್ಯ ಬೆಂಗಳೂರಿನಿಂದ ಲಚ್ಯಾಣಕ್ಕೆ ಆಗಮಿಸಿದ ನಟ ಶ್ರೀಧರ್ ತಮ್ಮ ಸಹ ಕಲಾವಿದರೊಂದಿಗೆ ನೇರವಾಗಿ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರ ದರ್ಶನ ಪಡೆದು, ಆರತಿ ಬೆಳಗಿ ಪೂಜೆ ಸಲ್ಲಿಸಿ, ಕಾರ್ಯಸಿದ್ಧಿಗಾಗಿ ಸಂಕಲ್ಪ ಮಾಡಿದರು.‌ ಬಳಿಕ ಹಳಿಂಗಳಿಯ ಶ್ರೀ ಶಿವಾನಂದ ಮಹಾಸ್ವಾಮೀಗಳ ಆಶಿರ್ವಾದ ಪಡೆದು, ಮಠದ ಇತಿಹಾಸವನ್ನು ತಿಳಿದುಕೊಂಡು ಧನ್ಯತಾಭಾವ ವ್ಯಕ್ತಪಡಿಸಿದರು.

ನಂತರ ನೇರವಾಗಿ ಲಚ್ಯಾಣ ಹಾಗೂ ಪಡನೂರ ಗ್ರಾಮದ ನಡುವಿನ ಮಂಟಪ ಕಟ್ಟೆಗೆ ತೆರಳಿ ವೇಷಭೂಷಣ ತೊಟ್ಟು ಸಿದ್ದಲಿಂಗನ ಪಾತ್ರಧಾರಿಯಾಗಿ ಅಭಿನಯಿಸಿದರು. ಸ್ಮಶಾನ ಭೂಮಿಯಲ್ಲಿ ತಪಸ್ಸುಗೈದು, ಗುರುವಿನ ಆದೇಶದಂತೆ ಕಮರಿಮಠವನ್ನು ಕಟ್ಟಲು ಆರಂಭಿಸಿದ ಶುಭಗಳಿಗೆಯ ದೃಶ್ಯದ ಅಭಿನಯಕ್ಕೆ ಮನಸೋತು ಹೋದ ನೆರೆದ ನೂರಾರು ಜನರು ಸಾಕ್ಷಾತ ಸಿದ್ಧಲಿಂಗನೇ ಅವತಾರ ತಾಳಿದ್ದಾನೆ ಎಂಬ ಭಾವದಲ್ಲಿ ಜೈಕಾರ ಹಾಕಿದರು.

ಪುಟ್ಟಣ್ಣ ಕಣಗಾಲ್ ನಿರ್ದೇಶನದ ಅಮೃತ ಗಳಿಗೆ, ಸಂತ ಶಿಶುನಾಳ ಷರೀಫ್ ಚಲನ ಚಿತ್ರದಲ್ಲಿ ಪ್ರಮುಖ ಅಭಿನಯಿಸಿದ ನಟ ಶ್ರೀಧರ್ ಹತ್ತು ಹಲವು ಚಲನ ಚಿತ್ರಗಳಲ್ಲಿ ಪರಮಾತ್ಮನ ಪಾತ್ರಧಾರಿಯಾಗಿ ಅಭಿನಯಿಸಿ, ಸಹಸ್ರಾರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದ ಹಿರಿಮೆ ಇವರದು.

ಚಿತ್ರಕಥೆ ಕಾರ್ಯಕಾರಿ ನಿರ್ಮಾಪಕರಾದ ಹಳಿಂಗಳಿಯ ಶ್ರೀ ಶಿವಾನಂದ ಮಹಾಸ್ವಾಮಿಗಳ ಸಮ್ಮುಖ ಹಾಗೂ ಬಂಥನಾಳದ ಶ್ರೀ ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ಸಾನಿಧ್ಯ, ಸಿ.ಜಿ. ವೆಂಕಟೇಶರಾವ್ ನಿರ್ದೇಶನದಲ್ಲಿ ಶ್ರೀ ವೃಷಭಲಿಂಗೇಶ್ವರ ಫಿಲಂಸ ವತಿಯಿಂದ ನಡೆದ ಈ ಚಲನಚಿತ್ರವನ್ನು ಜಗನ್ ಬಾಬು ಅವರು ಅತ್ಯಂತ ಅದ್ಭುತವಾಗಿ ಛಾಯಾಗ್ರಹಣ ಮಾಡಿದರು. ಸಹ ನಿರ್ದೇಶಕರಾಗಿ ಶಂಕರ ಪಾಟೀಲ್, ಶ್ರೀನಿವಾಸ್ ಪ್ರಸಾದ್ ಕಾರ್ಯನಿರ್ವಹಿಸುತ್ತಿದ್ದಾರೆ. ಚಿತ್ರಕಥೆ, ಸಾಹಿತ್ಯ, ಸಂಭಾಷಣೆಕಾರರಾಗಿ ಪದ್ಮಣ್ಣ ನರಸಣ್ಣವರ ಕಾರ್ಯನಿರ್ವಹಿಸುತ್ತಿದ್ದ ಈ ಚಲನ ಚಿತ್ರ ನಿರ್ಮಾಣಕ್ಕೆ ಸಧ್ಯ ೪೦ ರಿಂದು ೫೦ ಜನ ಕಲಾವಿದರು ಇಲ್ಲಿನ ಯಾತ್ರಿ ನಿವಾಸದಲ್ಲಿ ವಾಸ್ತವ್ಯ ಮಾಡಿ ನಿತ್ಯ ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದು, ಈ ಕಾರ್ಯಕ್ಕೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಇದಕ್ಕೆ ಅಗತ್ಯವಾಗುವ ವೆಚ್ಚದ ಅರ್ಧದಷ್ಟು ಹಣವನ್ನು ಭರಿಸುವ ಭರವಸೆ ನೀಡಿದ್ದಾರೆ. ಹಲವು ದಾನಿಗಳು ಆರ್ಥಿಕ ಸಹಾಯವನ್ನು ಮಾಡಲು ಉತ್ಸುಕರಾಗಿದ್ದಾರೆ.

error: Content is protected !!