“ರೈತರಲ್ಲಿ ಸಾವಯವ ಕೃಷಿಯ ಹೊಸ ಕಲ್ಪನೆ ಬೆಳೆಸಲು ಕೃಷಿಮೇಳ ಆಯೋಜನೆ’’ – ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ

BI ಬಿಜಾಪುರ : ಕೃಷಿಯಲ್ಲಿನ ವೈಜ್ಞಾನಿಕತೆ, ಹೊಸ ತಂತ್ರಜ್ಞಾನಗಳ ಆವಿಷ್ಕಾರಗಳು ಸಾಕಷ್ಟಾಗಿದ್ದು ಸಾವಯುವ ಕೃಷಿಯ ಬಗ್ಗೆ ರೈತರಲ್ಲಿ ಹೊಸ ಕಲ್ಪನೆ ಬೆಳೆಸುವ ನಿಟ್ಟಿನಲ್ಲಿ ಕೃಷಿ ಮೇಳವನ್ನು ಆಯೋಜಿಸಲಾಗಿದೆ ಇದರ ಸಂಪೂರ್ಣ ಸದುಪಯೋಗವನ್ನು ಎಲ್ಲ ರೈತ ಬಾಂಧವರು ಪಡೆದುಕೊಳ್ಳಬೇಕು ಎಂದು ಕೃಷಿ ಸಚಿವ ಹಾಗೂ ಉಪಮುಖ್ಯ ಮಂತ್ರಿಗಳಾದ ಶ್ರೀ ಲಕ್ಷ್ಮಣ್ ಸವದಿ ಅವರು ಹೇಳಿದರು.
ನಗರದ ಹೊರ ವಲಯದ ಹಿಟ್ಟಿನಹಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ಮೂರು ದಿನಗಳ ಕೃಷಿ ಮೇಳದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚಿನ ಆದಾಯಗಳಿಕೆಗಾಗಿ ಇಂದು ರೈತರು ಸಾವ ಯುವ ಕೃಷಿಯನ್ನು ಮರೆತು ವಿಷಕಾರಿ ರಸಾಯನಿಕ ಗೊಬ್ಬರಗಳನ್ನು ಸಿಂಪಡಿಸಿ ವಿಷಯುಕ್ತ ಬೆಳೆ ಬೆಳೆಯುತ್ತಿದ್ದಾರೆ. ರೈತರು ಮಾರಕ ರಸಾಯನಿಕ ಗೊಬ್ಬರಗಳಿಗೆ ಮಾರು ಹೋಗದೆ ಸಾವಯುವ ಕೃಷಿಯ ಹೊಸ ತಂತ್ರಜ್ಞಾನಗಳನ್ನು ಬಳಸಿ ಆದಾಯ ಗಳಿಸಿ ಎಂದರು. ಇಂದಿನ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಬೇಕು ಎಂದರೆ ರೈತರು ಸಾವಯುವ ಕೃಷಿಗೆ ಆಧ್ಯತೆ ನೀಡಬೇಕು ಎಂದರು
ವಿಷಕಾರಿ ರಸಾಯನಿಕ ರಸಗೊಬ್ಬರಗಳನ್ನು ಉತ್ಪಾದಿಸುವ ಕಂಪನಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನಾನು ಈಗಾಗಲೆ ಅಧಿಕಾರಿಗಳಿಗೆ ಆದೇಶಿಸಿದ್ದೇನೆಂದು ತಿಳಿಸಿದರ ಅವರು, ರೈತರಿಗೆ ಸಹಾಯವಾಗಲೆಂದು ಪ್ರಧಾನ ಮಂತ್ರಿಗಳು ತುಮಕೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಿಸಾನ್ ಸಮ್ಮಾನ ಯೋಜನೆಯ ಎರಡನೇ ವರ್ಷದ ಪಾದಾರ್ಪಣೆ ಅಂಗವಾಗಿ 6 ಕೋಟಿ ರೈತರಿಗೆ 12 ಸಾವಿರ ಕೋಟಿ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಿದ್ದು ಪ್ರಶಂಸನೀಯ ಎಂದರು.
ಸಂಸದ ರಮೇಶ ಜಿಗಜಿವಣಗಿ ಅವರು, ಮಾತನಾಡಿ ರಾಜ್ಯದಲ್ಲೆ ವಿಜಯಪುರ ಅತಿಹೆಚ್ಚು ತೋಟಗಾರಿಕಾ ಬೆಳೆ ಬೆಳೆಯುವ ಜಿಲ್ಲೆಯಾಗಿದೆ. ಆದರೆ ಕಾರಣಾಂತರಗಳಿಂದ ತೋಟಗಾರಿಕಾ ವಿಶ್ವ ವಿದ್ಯಾಲಯ ಬಾಗಲಕೋಟೆಯಲ್ಲಿ ನಿರ್ಮಾಣ ವಾಯಿತು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಅವರು ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದು ರಾಜ್ಯದ ಎಲ್ಲ ರೈತರಲ್ಲಿ ಹೊಸ ಉತ್ಸಾಹವನ್ನು ತುಂಬಿದೆ. ಆದರೆ ಇಂದಿನ ಯುವ ಸಮು ದಾಯವು ಕೃಷಿಯತ್ತ ಒಲವು ತೋರುವುದು ಕಡಿಮೆಯಾಗುತ್ತಿದೆ. ಇಂದಿನ ಕೃಷಿ ವಿಶ್ವ ವಿದ್ಯಾಲಯಗಳು ವೈಜ್ಞಾನಿಕ ಕೃಷಿಯ ಬಗ್ಗೆ ಯುವ ಸಮೂದಾಯಗಳಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಧಾರವಾಡ ಕೃಷಿ ವಿವಿಯ ಕುಲಪತಿ ಎಮ್,ಬಿ, ಚೆಟ್ಟಿ ಅವರು, ಸರಕಾರದ ಹೊಸ ಯೋಜನೆಗಳಾದ ಜೋಳ ಹಾಗೂ ತೊಗರಿಗೆ ಉತ್ತಮ ಬೆಂಬಲ ಬೆಲೆ ಹಾಗೂ ಕೃಷಿಯಲ್ಲಿ ಒಂದು ವರ್ಷದ ಡಿಪ್ಲೂಮಾ ಕೋರ್ಸಗಳು ಸಾಕಷ್ಟು ರೈತರಿಗೆ ಸಹಾ ಯವಾಗಿದೆ ಎಂದರು.
ವಿಜಯಪುರ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶಿವಯೋಗಪ್ಪಾ ನೇದಲಗಿ ಮಾತನಾಡಿ, ಇಂದಿನ ನವ ಯುಗದಲ್ಲಿ ಹೊಸ ತಂತ್ರಜ್ಞಾನಗಳು ಸಾಕಷ್ಟು ಬೆಳವಣಿಗೆಯನ್ನು ಸಾಧಿಸಿವೆ, ರೈತರಿಗೆ ಅನುಕೂಲವಾಗಲೆಂದು ಕೃಷಿ ಮೇಳ ಆಯೋಜಿ ಸಲಾಗಿದ್ದು ಅದರ ಸಂಪೂರ್ಣ ಸದುಪಯೋಗವನ್ನು ಇಲ್ಲಿ ಆಗಮಿಸಿರುವ ರೈತರು ಪಡೆದುಕೊಳ್ಳಬೇಕು ಎಂದು ಹೇಳಿ ದರು. ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿದ ಸರ್ಕಾರದ “ದಿನ ನೂರು ಸಾಧನೆ ನೂರಾರು” ಪುಸ್ತಕ, “ಸುಜಲಾ 3” ಯೋಜನೆಯ ನೀಲಿನಕ್ಷೆ, ಐದು ಕೃಷಿ ಸಂಬಂಧಿತ “ಕೃಷಿ ತಾಂತ್ರಿಕ ಕೈಪಿಡಿ” ಹಾಗೂ ವಿತ್ತ ಬೆಳೆಗೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಹಸ್ತ ಪ್ರತಿಗಳನ್ನು ಕೃಷಿ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ್ ಸವದಿ ಅವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ನಾಗಠಾಣ ಶಾಸಕ ದೇವಾನಂದ ಚೌಹಾಣ್ ಅಧ್ಯಕ್ಷತೆ ವಹಿಸಿದ್ದರು, ಹಿಟ್ಟಿನಹಳ್ಳಿ ಕೃಷಿ ಮಹಾವಿದ್ಯಾಲಯದ ಡೀನ್ ಎಸ್.ಬಿ. ಕಲಘಟಗಿ ಸ್ವಾಗತಿಸಿದರು. ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ಬಿ.ಎಲ್.ಪಾಟೀಲ, ಕೃಷಿ ಸ್ಥಾಯಿ ಸಮಿತಿ ಜಿಲ್ಲಾಧ್ಯಕ್ಷೆ ಕವಿತಾ ವಿಲಾಸ ರಾಠೋಡ, ಸುಶೀಲ ಕುಮಾರ ಶಿವಳಗಿ, ಎ.ಬಿ.ಪಾಟೀಲ, ಬಿ.ಆರ್.ಪಾಟೀಲ, ರಮೇಶ ಬಾಬು, ಕೃಷಿ ಜಂಟಿ ನಿರ್ದೇಶಕ ಡಾ. ಶಿವಕುಮಾರ, ಎಚ್.ಬಿ. ಬಬಲಾದ ಹಾಗೂ ಆರ್.ಬಿ ಬೆಳ್ಳಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

error: Content is protected !!