ಮೋದಿ, ಅಮಿತ್ ಶಾಹ ಆಟ ಈ ಬಾರಿ ನಡೆಯುವದಿಲ್ಲ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಸಾಂಗಲಿ :17. ಪ್ರತಿ ಚುನಾವಣೆಗಳಲ್ಲಿ ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಚುನಾವಣೆ ಗೆಲ್ಲುವ ಮೋದಿ, ಅಮಿತ್ ಶಾಹ ಆಟ ಈ ಬಾರಿ ನಡೆಯುವದಿಲ್ಲ ಎಂದು ಕರ್ನಾಟಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜತ್ತ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ – ಎನ್.ಸಿ.ಪಿ ಮೈತ್ರಿಕೂಟ ಅಭ್ಯರ್ಥಿ ವಿಕ್ರಂದಾದಾ ಸಾವಂತ ಪರ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಉಮದಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು ಚುನಾವಣೆಗಳಲ್ಲಿ ಬಡತನ ನಿವಾರಣೆ, ರೈತರಿಗೆ ನೀರು, ಯುವಕರಿಗೆ ಉದ್ಯೋಗ, ಆರ್ಥಿಕ ಅಭಿವೃದ್ಧಿ ಚರ್ಚೆಯ ವಿಷಯಗಳಾಗಬೇಕು. ಆದರೆ ಪ್ರತಿ ಚುನಾವಣೆಗಳಲ್ಲಿ ದೇಶದ, ಜನರ ಭಾವನಾತ್ಮಕ ವಿಚಾರಗಳನ್ನು ಕೆದಕಿ ಮುಂದೆ ತಂದು, ಬಿಜೆಪಿಯವರು ಗೆಲವು ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮಹಾರಾಷ್ಟ್ರ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ದೇವೆಂದ್ರ ಫಡ್ನವೀಸ್ ನಮ್ಮ ರಾಜ್ಯದಲ್ಲಿ ಇಂದ್ರಲೋಕವನ್ನೇ ಸೃಷ್ಠಿ ಮಾಡುತ್ತೇನೆ ಎಂದು ಹೇಳಿದ್ದರು. ಇಲ್ಲಿ ಇಂದ್ರಲೋಕ ಆಗಿದೇಯೇ? ಎಂದು ಪ್ರಶ್ನಿಸಿದ ಅವರು ಮೋದಿಯವರು ಸ್ವರ್ಗವನ್ನು ಸೃಷ್ಠಿ ಮಾಡುತ್ತೇನೆ ಎಂದು ಹೇಳುತ್ತಾರೆ. ಸ್ವರ್ಗ ಹಾಗಿರಲಿ ನಮ್ಮ ಜನರಿಗೆ ನರಕ ಬಾರದಿರಲಿ ಎಂದು ಬೇಡಿಕೊಳ್ಳುವಂತಾಗಿದೆ ಇವರ ಆಡಳಿತ ವೈಖರಿಯಿಂದ ಎಂದರು.

ಕರ್ನಾಟಕದಲ್ಲಿ ನಾನು ಐದು ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿದ್ದಾಗ ಭಾಷೆ, ಜಾತಿ, ಕೋಮು ಆಧಾರಿತ ಸಂಘರ್ಷಗಳು ನಡೆದಿಲ್ಲ. ಸರ್ವರನ್ನು ಸಮನಾಗಿ ಕಾಣುವದು ಕಾಂಗ್ರೆಸ್ ತತ್ವದ ಸಿದ್ದಾಂತ. ಕರ್ನಾಟಕದಲ್ಲಿ ಮರಾಠಿಗರು, ಮಹಾರಾಷ್ಟ್ರದಲ್ಲಿನ ಕನ್ನಡಿಗರು. ಸ್ಥಳೀಯರೊಂದಿಗೆ ಸಹೋದರತೆ ಸಾಧಿಸಿದರೆ ಮಾತ್ರ ಆ ಭಾಗಗಳು ಅಭಿವೃದ್ಧಿಯಾಗುತ್ತವೆ ಎಂದ ಅವರು “ಛಾಯಾಗೋಳ ಅವರು ಗಡಿನಾಡು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿದ್ದಾಗ ಈ ಭಾಗದ ಕನ್ನಡಿಗರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿತ್ತು” ಎಂದರು.

ತುಬಚಿ-ಬಬಲೇಶ್ವರ ಏತನೀರಾವರಿ 3,600ಕೋಟಿ ಯೋಜನೆಯನ್ನು ನಾನು ಮತ್ತು ಎಂ.ಬಿ.ಪಾಟೀಲ್‍ರು ಸೇರಿ ಮಾಡಿದ್ದೇವೆ. ನಮ್ಮ ಅವಧಿಯಲ್ಲಿಯೇ ಪೂರ್ಣಗೊಳಿಸಿ, ನೀರು ಹರಿಸಲಾಗಿದ್ದು, ಆ ಯೋಜನೆಯಿಂದ ನೈಸರ್ಗಿಕವಾಗಿ ಈ ಭಾಗದ 13ಕೆರೆಗಳು ತುಂಬುವದು ಸಂತಸದ ಸಂಗತಿ ಎಂದರು.

ಮಾಜಿ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ ಕನ್ನಡಿಗರು ಹೆಚ್ಚಾಗಿರುವ ಜತ್ತ ತಾಲೂಕಿಗೆ ಮಹಾರಾಷ್ಟ್ರ ಸರ್ಕಾರ ಸತತ ಅನ್ಯಾಯ ಎಸೆಗಿದೆ. 35ವರ್ಷಗಳಿಂದ ಕುಂಠಿತಗೊಂಡಿರುವ ಮಹಿಷಾಳ ಯೋಜನೆ ನೀರು ಈ ಭಾಗಕ್ಕೆ ಬರಲಿಲ್ಲ. ನನ್ನಕ್ಷೇತ್ರದಲ್ಲಿ ರೂಪಿಸಿರುವ ತುಬಚಿ-ಬಬಲೇಶ್ವರ ಯೋಜನೆಯಿಂದಲೇ ಇಲ್ಲಿನ ತಿಕ್ಕುಂಡಿ, ಬೇವರಿಗಿ ಕೆರೆಗಳು ಸೇರಿದಂತೆ 10ಬಾಂದಾರಗಳು ತುಂಬಿ ಹಳ್ಳಗಳು ಹರಿಯುತ್ತಿವೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೇ ತುಬಚಿ-ಬಬಲೇಶ್ವರ ಯೋಜನೆಯಿಂದ ನಾವು ನೀರು ಕೊಡುತ್ತೇವೆ ಎಂದು ಲಕ್ಷ್ಮಣ ಸವದಿ ಇಲ್ಲಿ ಭಾಷಣ ಮಾಡಿ ಹೋಗಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವೇ ಹೋಗಲಿದ್ದು, ಇವರು ಎಲ್ಲಿಂದ ನೀರು ಕೊಡುತ್ತಾರೆ? ಎಂದ ಅವರು ಅವರ ಅಥಣಿ ಕ್ಷೇತ್ರಕ್ಕೂ ನಾನೇ ನೀರಾವರಿ ಯೋಜನೆಗಳನ್ನು ಕೊಟ್ಟಿದ್ದೇನೆ ಎನ್ನುವದು ನೆನಪಿರಲಿ ಎಂದರು.

ನಾವು ವಿಜಯಪುರದ ಗೌಡರು, ಕೊಟ್ಟ ಮಾತಿಗೆ ತಪ್ಪುವವರಲ್ಲ. ಈಗಿರುವ ತುಬಚಿ-ಬಬಲೇಶ್ವರ ಯೋಜನೆಯಿಂದಲೇ ಯಾವುದೇ ಸರ್ಕಾರದ ಒಪ್ಪಂದವಿಲ್ಲದೆ ರೈತರ ಗೋಳು ನೋಡಲಾರದೇ ಈ ಭಾಗಕ್ಕೂ ನೀರು ಹರಿಸಿ ಕೆರೆಗಳನ್ನು ತುಂಬಲಾಗುತ್ತಿದ್ದು, ಸಂಖ, ಉಮದಿ, ಚಡಚಣ, ಭೀಮಾನದಿಯವರೆಗೆ ಈ ಭಾಗದ ಎಲ್ಲ ಕೆರೆ-ಕಟ್ಟೆಗಳನ್ನು, ಹಳ್ಳ-ಕೊಳ್ಳಗಳಿಗೆ ನೀರು ಹರಿಸಲಾಗುವದು. ಅದಕ್ಕೆ ಪ್ರತ್ಯುತ್ತರವಾಗಿ ತಾವು ನಮ್ಮ ಅಭ್ಯರ್ಥಿ, ಕ್ರೀಯಾಶೀಲ ನಾಯಕ ವಿಕ್ರಂ ಸಾವಂತ ಅವರನ್ನು ಗೆಲ್ಲಿಸಬೇಕೆಂದು ವಿನಂತಿಸಿದರು.

ಶಾಸಕ ಆನಂದ ನ್ಯಾಮಗೌಡ, ಪ್ರಕಾಶ ರಾಠೋಡ, ಮಾಜಿ ಶಾಸಕರಾದ ಮಧುಕರ ಕಾಂಬಳೆ, ವಿಠ್ಠಲ ಕಟಕದೊಂಡ, ಮುಖಂಡರಾದ ಸಚಿನ ಸಾವಂತ, ಡಾ.ಮಿರಜಕರ್, ಡಾ.ಲೋಣಿ, ಸೋಮನಾಥ ಬಾಗಲಕೋಟ, ತಮ್ಮಣ್ಣ ಹಂಗರಗಿ, ಹಮೀದ ಮುಶ್ರಿಫ್, ಡಾ.ಮಹಾಂತೇಶ ಬಿರಾದಾರ, ಸಿದ್ದು ಗೌಡನವರ, ಗುರು ಮಾಳಿ, ರಮೇಶ ಜಂಬಗಿ ಮತ್ತಿತರರು ವೇದಿಕೆಯಲ್ಲಿದ್ದರು.

ಕರ್ನಾಟಕ ಮಾಜಿ ಸಚಿವ ಎಂ.ಬಿ.ಪಾಟೀಲ್‍ರವರು ಜತ್ತ ವಿಧಾನಸಭಾ ಕ್ಷೇತ್ರದ ತಿಕ್ಕುಂಡಿ, ಧರಬಡಚಿ, ಸಂಖ, ಉಮರಾಣಿ, ಬಿಳೂರ ಮತ್ತಿತರ ಸ್ಥಳಗಳಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ವಿಕ್ರಂ ಸಾವಂತ ಪರ ಬಿರುಸಿನ ಪ್ರಚಾರ ಕೈಗೊಂಡರು.

error: Content is protected !!