ಮೊಬೈಲ್ ಪ್ರೀತಿಯಿಂದ ನಮ್ಮ ಕಲೆ ಸಾಹಿತ್ಯ ಸಂಸ್ಕೃತಿ ಮರೆಯಾಗುತ್ತಿದೆ : ಪ್ರಸನ್ ಕುಮಾರ

ವಿಜಯಪುರ: ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ವೇದಿಕೆಯಾಗಿದ್ದು, ಮಕ್ಕಳಲ್ಲಿನ ಸೂಪ್ತ ಪ್ರತಿಭೆಗಳನ್ನು ಹೊರಹಾಕಿ ಸಮಾಜಮುಖಿಯಾಗಿ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ ಪ್ರಸನ್ ಕುಮಾರ ಹೇಳಿದರು.
ಗುರುವಾರ ಕರ್ನಾಟಕ ಸರ್ಕಾರ,ಜಿಪಂ, ಸಾರ್ವಜನಿಕ ಇಲಾಖೆ ಹಾಗೂ ಎಸ್ ಕುಮಾರ ವಿದ್ಯಾಸಂಸ್ಥೆಯ ಸರಸ್ವತಿ ಪ್ರೌಡಶಾಲೆಯಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಡಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವದಿಂದ ನಮ್ಮ ಸಾಂಸ್ಕೃತಿಕ ಪ್ರೀತಿ ಕಡಿಮೆಯಾಗುತ್ತಿದೆ. ಆಧುನಿಕತೆಯ ಭರಾಟೆಯಲ್ಲಿ ಸನಾತನ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಮೊಬೈಲ್ ಪ್ರೀತಿಯಿಂದ ನಮ್ಮ ಕಲೆ ಸಾಹಿತ್ಯ ಸಂಸ್ಕೃತಿ ಮರೆಯಾಗುತ್ತಿದೆ. ಪ್ರತಿಯೊಂದು ಮಗುವಿನಲ್ಲಿಯೂ ವಿವಿಧ ರೀತಿಯ ಪ್ರತಿಭೆ ಇರುತ್ತದೆ. ಅದಕ್ಕೆ ವೇದಿಕೆಗಳ ಅವಶ್ಯವಾಗಿವೆ. ವೇದಿಕೆಗಳ ಮೂಲಕ ಪ್ರತಿಭಾ ಪ್ರದರ್ಶನಕ್ಕೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಶಿಕ್ಷಣ ಇಲಾಖೆ ಮೂಲಕ ಮಕ್ಕಳಲ್ಲಿನ ಸೂಪ್ತ ಪ್ರತಿಭೆಗಳನ್ನು ಹೊರಹೊಮ್ಮಿಸುವಲ್ಲಿ ಈ ಪ್ರತಿಭಾ ಕಾರಂಜಿ ಏರ್ಪಡಿಸಿದೆ. ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನದ ಮೂಲಕ ರಾಜ್ಯ ಮಟ್ಟದ ಸ್ಪರ್ಧೇಯಲ್ಲಿಯೂ ಉತ್ತಮ ಸ್ಥಾನ ಗಳಿಸುವಂತಾಗಲಿ ಎಂದು ಶುಭ ಹರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಡಾ. ಎಚ್ ಟಿ ಲತಾದೇವಿ ಮಾತನಾಡಿ, ಮಕ್ಕಳಲ್ಲಿನ ಅಂತ:ಸ್ಪೂರ್ತಿ ಕಲೆಯನ್ನು ಬಯಲಿಗೆಳೆದು ಪರಿಪೂರ್ಣ ಮಗುವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಅನುಕೂಲವಾಗಲಿದೆ. ಶಿಕ್ಷಕರನ್ನು ಶಿಕ್ಷಣ ಕೆಲಸಕ್ಕೆ ಮಾತ್ರ ಬಳಸಿಕೊಂಡು ಗುಣಾತ್ಮಕ ಶಿಕ್ಷಣದ ಜೊತೆಗೆ ಪ್ರತಿಭಾ ಕಾರಂಜಿ ಮೂಲಕ ಉತ್ಕೃಷ್ಟ ಸಂಸ್ಕೃತಿ ಪಸರಿಸಲು ಪ್ರೇರೆಪಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಜಿಲ್ಲಾ ನೊಡಲ್ ಅಧಿಕಾರಿ ಡಿ ಜಿ ಚಾಳಿಕಾರ ಮಾತನಾಡಿ ಮಕ್ಕಳ ಪ್ರತಿಭೆಗೆ ಓರೆ ಹಚ್ಚು ನಿಟ್ಟಿನಲ್ಲಿ ಸುಮಾರು 18 ವರ್ಷಗಳಿಂದ ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ ಹಮ್ಮಿಕೊಳ್ಳುತ್ತ ಬಂದಿದೆ. ಕೇವಲ ಪಠ್ಯಕ್ಕಷ್ಟೆ ಮಹತ್ವ ನೀಡದೆ ಸಹಪಠ್ಯಕ್ಕೂ ಮಹತ್ವ ನೀಡುತ್ತಿದೆ. ಇದರ ಮೂಲಕ ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯ, ಉಳಿಸಿಕೊಂಡು ಹೋಗುವಲ್ಲಿ ಸಹಕಾರಿಯಾಗಿದೆ. ಈ ಪ್ರತಿಭಾ ಕಾರಂಜಿ ಎರಡು ದಿನಗಳ ಕಾಲ ನಡೆಯಲಿದ್ದು, ಗುರುವಾರ ಮೊದಲ ದಿನ ಪ್ರೌಡಶಾಲೆ ವಿಭಾಗ ಹಾಗೂ ಶುಕ್ರವಾರ ಪ್ರಾಥಮಿಕ ಶಾಲೆಗಳ ಸ್ಪರ್ಧೆಗಳು ನಡೆಯಲಿವೆ. ನಿರ್ಣಾಯಕರು ಉತ್ತಮ ರೀತಿಯಲ್ಲಿ ನಿರ್ಣಯ ಮಾಡಿ ಒಳ್ಳೆಯ ಪ್ರತಿಭೆಗಳನ್ನು ಗುರುತಿಸುವ ಕಾರ್ಯವಾಗಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಡಯಟ್ ಪ್ರಾಚಾರ್ಯ ಪಿ ಟಿ ಬೊಂಗಾಳೆ ಮಾತನಾಡಿದರು. ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಎಂ ಎಎಸ್ ಭ್ಯಾಹಟ್ಟಿ, ಗ್ರಾಮೀಣ ವಲಯದ ಬಿ ಆರ್ ಸಿ ಶೀಲಾ ಮೊಸಲಗಿ, ಎಸ್ ಬಿ ಪಡಶೆಟ್ಟಿ, ಪಿ ಕೆ ಬಿರಾದಾರ, ಆರ್ ಬಿ ಪಾಟೀಲ, ಮುಖ್ಯೋಪಾದ್ಯಾಯ ಸಿ ಎನ್ ಕಾಂಬಳೆ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲೆ ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆ ನಡೆದವು.

error: Content is protected !!