ಮುಳವಾಡ ಏತ ನೀರಾವರಿ ವ್ಯಾಪ್ತಿಯ 61- ಚಿಮ್ಮಲಗಿ ಏತ ನೀರಾವರಿ ವ್ಯಾಪ್ತಿಯ 36 ಕೆರೆಗಳು ಸೇರಿದಂತೆ “ಜಿಲ್ಲೆಯ 97 ಕೆರೆಗಳಿಗೆ ನೀರು ಭರ್ತಿಯಿಂದ ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ನೀರಿನ ಅನುಕೂಲ” : ಶಾಸಕ ಶಿವಾನಂದ ಪಾಟೀಲ

BI ಬಿಜಾಪುರ : ಮುಳವಾಡ ಏತ ನೀರಾವರಿ ಯೋಜನೆಯ ಮೂರನೇ ಹಂತದ ವಿಜಯಪುರ ಮುಖ್ಯ ಕಾಲುವೆ ಮೂಲಕ ಜಿಲ್ಲೆಯ 97 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಶಾಸಕ ಶಿವಾನಂದ ಪಾಟೀಲ ಅವರು ಇಂದು ಚಾಲನೆ ನೀಡಿದರು.

ಕೂಡಗಿ ರೈಲ್ವೆ ಸ್ಟೇಶನ್ ಸಮೀಪದ ಮುಖ್ಯ ಕಾಲುವೆ ಮೂಲಕ ಮುಳವಾಡ ಮತ್ತು ಚಿಮ್ಮಲಗಿ ಏತ ನೀರಾವರಿ ವ್ಯಾಪ್ತಿಗೆ ಬರುವ ಜಿಲ್ಲೆಯ 97 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಗಂಗಾ ಪೂಜೆ ನೆರವೇರಿಸಿ ಇಂದು ಚಾಲನೆ ನೀಡಿದರು.

ಮುಳವಾಡ ಏತ ನೀರಾವರಿ ಯೋಜನೆ ಮೂರನೇ ಹಂತದ ಮುಖ್ಯ ಕಾಲುವೆ ರೈಲ್ವೆ ಸೇತುವೆ ಕೆಳಗೆ ಬಾಕ್ಸ್ ಪುಶ್ಶಿಂಗ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮುಖ್ಯ ಕಾಲುವೆಗೆ ಇಂದು ಹರಿಸಿರುವುದರಿಂದ ಮುಳವಾಡ ಏತ ನೀರಾವರಿ ವ್ಯಾಪ್ತಿಯಲ್ಲಿ ಬರುವ 61 ಮತ್ತು ಚಿಮ್ಮಲಗಿ ಏತ ನೀರಾವರಿ ವ್ಯಾಪ್ತಿಗೆ ಬರುವ 36 ಕೆರಗಳು ಸೇರಿದಂತೆ ಜಿಲ್ಲೆಯ ಒಟ್ಟು 97 ಕೆರೆಗಳಿಗೆ ನೀರು ದೊರೆಯಲಿದ್ದು, ಇದರಿಂದ ತೀವ್ರ ಬೇಸಿಗೆ ಕಾಲದಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.

ಈ ಭಾಗದ ಬಹು ದಿನಗಳ ಬೇಡಿಕೆ ಇದಾಗಿದ್ದು, ಈ ಹಿಂದೆ ಟ್ರಾಯಲ್ ರನ್ ಮೂಲಕ ನೀರು ಬಿಡಲಾಗಿತ್ತು. ಪೂರ್ವ ಯೋಜನೆಯನ್ವಯ, ನಾಗರೀಕರ ಬೇಡಿಕೆಗೆ ಅನುಗುಣವಾಗಿ ಇಂದು ಮುಖ್ಯ ಕಾಲುವೆ ಮುಖಾಂತರ ನೀರು ಬಿಡಲಾಗಿದ್ದು, ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿಯೂ ಸಹ ಬೇಸಿಗೆ ಸಮಯದಲ್ಲಿ ತುರ್ತು ಬಳಕೆಗಾಗಿ ಮತ್ತು ಕುಡಿಯುವ ನೀರಿಗಾಗಿ 2 ಟಿಎಂಸಿ ನೀರನ್ನು ಸಂಗ್ರಹಕ್ಕೆ ಅನುಮತಿ ದೊರೆತಿದೆ.

ಮುಳವಾಡ ಹಂತ ಮೂರರ ಕಾಲುವೆ ಜಾಲಕ್ಕೆ ನೀರು ಹರಿಸಲು ಯಾವುದೇ ಅಡೆತಡೆ ಇರುವುದಿಲ್ಲ. ಪ್ರತಿದಿನ ಮುಳವಾಡ ಹಂತ ಮೂರರ 61 ಕೆರೆಗಳಿಗೆ 1017 ಕ್ಯೂಸೆಕ್ಸ್ ನೀರನ್ನು 8 ತಾಸುಗಳವೆರೆಗೆ ಕೆರೆ ತುಂಬಲು 30 ದಿನಗಳ ಅವಧಿ ಪರಿಗಣಿಸಲಾಗಿದೆ. ಅದರಂತೆ ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ 36 ಕೆರೆಗಳನ್ನು ತುಂಬಲು ಪ್ರತಿದಿನ 610 ಕ್ಯೂಸೆಕ್ಸ್ ನೀರನ್ನು 8 ಗಂಟೆಗಳ ಕಾಲ ಪೂರೈಸಿ 20 ದಿನಗಳ ಅವಧಿ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಈ ಅವಧಿಯಲ್ಲಿ ಒಟ್ಟಾರೆ 1.30 ಟಿಎಂಸಿ ನೀರನ್ನು ಬಳಸಿ ಒಟ್ಟು 97 ಕೆರೆಗಳನ್ನು ಅವುಗಳ ಪ್ರತಿಶತ 50 ರಷ್ಟು ಸಾಮರ್ಥ್ಯಕ್ಕೆ ತುಂಬಲು ಯೋಜಿಸಲಾಗಿದೆ. ಸಂಗ್ರಹಣೆಯಲ್ಲಿರುವ 2 ಟಿಎಂಸಿ ನೀರಿನ ಪೈಕಿ ಸದ್ಯ 1.30 ಟಿಎಂಸಿ ನೀರನ್ನು ಬಳಸಿ ಉಳಿದ ಪ್ರಮಾಣವನ್ನು ಪರಿಸ್ಥಿತಿಗನುಗುಣವಾಗಿ ಪುನಃ ಬಳಸಲು ಯೋಜಿಸಲಾಗಿದೆ. ಜಿಲ್ಲೆಯ ಜನರಿಗೆ ಇದು ಉತ್ತಮ ಕೊಡುಗೆಯಾಗಿದ್ದು, ಇತ್ತೀಚೆಗೆ ಹಲವು ಹೋರಾಟಗಾರರು ಉಪವಾಸ ಸತ್ಯಾಗ್ರಹ ನಡೆಸಿ ನೀರಿನ ಬೇಡಿಕೆ ಇಟ್ಟಿದ್ದರ ಹಿನ್ನೆಲೆಯಲ್ಲಿ ಇಂದು ಸರ್ಕಾರದ ಮತ್ತು ಜನಪ್ರತಿನಿಧಿಗಳ ಪರವಾಗಿ ಕೆರೆಗಳಿಗೆ ನೀರು ದೊರೆಯಲಿದ್ದು, ಇದರ ಸದುಪಯೋಗ ಪಡೆಯುವಂತೆ ಅವರು ಕರೆ ನೀಡಿದರು.

ಕೋವಿಡ್-19 ಆತಂಕದ ಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಯಾವುದೇ ರೀತಿಯ ಅಗತ್ಯ ವಸ್ತುಗಳ ಮತ್ತು ತರಕಾರಿ ಮಾರಾಟ ಮತ್ತು ಸಾಗಾಣಿಕೆಗೆ ತಡೆಯೊಡ್ಡಬಾರದು. ರೈತರಿಗೇ ತೊಂದರೆಯಾಗುವುದರಿಂದ ಗ್ರಾಮಸ್ಥರೆಲ್ಲರೂ ಜೀವನಾವಶ್ಯಕ ವಸ್ತುಗಳ ಮಾರಾಟ ಮತ್ತು ಸರಾಗವಾಗಿ ಸಾಗಾಣಿಕೆಗೆ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ತಾನಾಜಿ ನಾಗರಾಳ, ಮಾಜಿ ತಾಲೂಕ ಪಂಚಾಯತ ಉಪಾಧ್ಯಕ್ಷ ಸಿದ್ಧಪ್ಪ ಮಿಣಜಗಿ, ನ್ಯಾಯವಾದಿ ಎಸ್.ಎಸ್ ಗರಸಂಗಿ, ಎ.ಪಿ.ಎಮ್.ಸಿ ನಿರ್ದೇಶಕ ಸಿ.ಪಿ ಪಾಟೀಲ, ಕೆ.ಬಿ.ಜೆ.ಎನ್.ಎಲ್ ಮುಖ್ಯ ಅಭಿಯಂತರ ಆರ್.ಪಿ ಕುಲಕರ್ಣಿ, ಮುಳವಾಡ ಏತ ನೀರಾವರಿ ಯೋಜನೆ ಅಧೀಕ್ಷಕ ಅಭಿಯಂತರ ಜಗದೀಶ ರಾಠೋಡ, ಆಲಮಟ್ಟಿ ಆಣೆಕಟ್ಟು ವಲಯದ ಅಭಿಯಂತರ ಶ್ರೀ ಚಲವಾದಿ, ಅಧೀಕ್ಷಕ ಅಭಿಯಂತರ ಬಸವರಾಜು, ನಿವೃತ್ತ ಅಭಿಯಂತರ ಎಸ್.ಬಿ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!