ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಅವಶ್ಯಕ ಸಿದ್ಧತೆ ಮಾಡಿಕೊಳ್ಳುವಂತೆ ಸಚಿವ ಸಿ.ಸಿ.ಪಾಟೀಲ ಸೂಚನೆ

BI ಬಿಜಾಪುರ : ಇದೇ ಜನೇವರಿ 16 ರಂದು ವಿಜಯಪುರದಲ್ಲಿ ನಡೆಯುವ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕಾಗಿ ಅವಶ್ಯಕ ಪೂರ್ವಸಿದ್ಧತೆಗಳನ್ನು ಮಾಡಲು ತಿಳಿಸಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಶಿಸ್ತುಬದ್ಧವಾಗಿ ಯಾವುದೇ ಲೋಪವಿಲ್ಲದೆ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು, ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕಾಗಿ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು, ವಿಜಯಪುರ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗಾಗಿ ಶಾಸಕರು ಅನುದಾನ ತಂದಿದ್ದು ಸುಮಾರು 300 ಕೋಟಿ ರೂ ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರಣ ಅಂದು ನಡೆಯುವ ಕಾರ್ಯಕ್ರಮಕ್ಕೆ ಅವಶ್ಯಕ ಪೂರ್ವಸಿದ್ಧತೆಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಂತೆ ಸೂಚಿಸಿದರು.
ಮುಖ್ಯಮಂತ್ರಿಗಳು ಆಗಮಿಸುವುದು ಬಹುತೇಕ ಖಚಿತಗೊಂಡಿದ್ದು ವೇದಿಕೆ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಶಿಷ್ಠಾಚಾರದಂತೆ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸುವ ಜೊತೆಗೆ ಜವಾಬ್ದಾರಿಯುತ ಅಧಿಕಾರಿಗಳಿಂದ ಆಹ್ವಾನ ಪತ್ರಿಕೆಗಳನ್ನು ತಲುಪಿಸಬೇಕು. ಉಪಮುಖ್ಯಮಂತ್ರಿ ಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ್ ಸವದಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಒಟ್ಟಾರೆ ಕಾರ್ಯಕ್ರಮ ಯಾವುದೇ ಲೋಪವಿಲ್ಲದೆ ನೆರವೇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಈಗಾಗಲೇ ಬಾದಾಮಿ, ಐಹೊಳೆ ವರೆಗೆ ಬರುವಂತಹ ಗೋಲ್ಡನ್ ಚಾರಿಯಟ್ ರೈಲನ್ನು ವಿಜಯಪುರಕ್ಕೆ ವಿಸ್ತರಿಸಬೇಕು. ವಿಜಯಪುರದಲ್ಲಿ ಮೀನುಗಾರಿಕೆ ಕಾಲೇಜು ಸ್ಥಾಪನೆಯಾಗಬೇಕು. ಈ ಕುರಿತು ಮುಂದಿನ ಬಜೆಟ್‌ನಲ್ಲಿ ಅನುದಾನ ಕಾಯ್ದಿರಸಬೇಕು. ಪಡಿತರ ವ್ಯವಸ್ಥೆಗೆ ಬಿಳಿ ಜೋಳ ಅಳವಡಿಸುವ ಜೊತೆಗೆ 4 ಸಾವಿರ ರೂ ಗಳ ಕನಿಷ್ಠ ಬೆಂಬಲ ಬೆಳೆ ದೊರಕಿಸಬೇಕು, ಸೈಕ್ಲಿಂಗ್ ವೆಲೋಡ್ರೋಮ್ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯಡಿ 125 ಕೋಟಿ ರೂ ಗಳ ಅನುದಾನ ಕಾಯ್ದಿರಿಸುವ ಕುರಿತಂತೆ ಮುಖ್ಯಮಂತ್ರಿಗಳಿಗಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ವಿಜಯಪುರ ನಗರದಲ್ಲಿ ನಿರ್ಮಾಣನಿರ್ಮಾಣಗೊಳ್ಳುತ್ತಿ ರೈಲ್ವೆ ಓವರ್ ಬ್ರಿಡ್ಜ್ ತ್ವರಿತವಾಗಿ ಮತ್ತು ಗುಣಮಟ್ಟದಲ್ಲಿ ಕೈಗೊಳ್ಳಬೇಕು. ಮುಳವಾಡ ಏತ ನೀರಾವರಿ ವ್ಯಾಪ್ತಿಯಲ್ಲಿ ಬರುವ ಬ್ರಿಡ್ಜ್ (ಬಾಕ್ಸ್ ಪುಶ್ಸಿಂಗ್ ) ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಹಾಗೂ ಇದು ಪೂರ್ಣಗೊಳ್ಳುವವರೆಗೆ ತಾತ್ಕಾಲಿಕ ಪೈಪ್‌ಲೈನ್ ಮೂಲಕ ನೀರನ್ನು ಕಾಲುವೆಗಳಿಗೆ ಹರಿಸುವ ಮೂಲಕ ರೈತರಿಗೆ ಸಂಬಂಧಿಸಿದ ಅಧಿಕಾರಿಗಳು ಅನುಕೂಲ ಮಾಡಿಕೊಡುವಂತೆ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ತಿಳಿಸಿದರು. ಅದರಂತೆ ವಿವಿಧ ಹೊಲಗಳಿಗೆ ರೈತರಿಗೆ ಹೋಗಲು ರಸ್ತೆ ಸೌಲಭ್ಯ ಕಲ್ಪಿಸಲು ಟೌನ್ ಪ್ಲಾನಿಂಗ್ ಆಯಕ್ಟ್ ಗೆ ತಿದ್ದುಪಡಿ ತರುವ ಕುರಿತು, ಬೇಗಮ ತಾಲಾಬ್ ಹಾಗೂ ಬೂತನಾಳ ಕೆರೆಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಚಿವರ ಗಮನಕ್ಕೆ ತಂದರು, ಶಾಸಕ ಬಸನಗೌಡ ಪಾಟೀಲ(ಯತ್ನಾಳ), ಮಾಜಿ ಸಚಿವರು ಹಾಗೂ ಶಾಸಕ ಎಂ.ಸಿ.ಮನಗೂಳಿ, ಶಾಸಕ ಸೋಮನಗೌಡ ವಿ ಪಾಟೀಲ ( ಸಾಸನೂರ), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಅಪರ ಜಿಲ್ಲಾಧಿಕಾರಿ ಔದ್ರಾಮ್ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!