ಮಾಸ್ಕ್ ಧರಿಸದೇ ಓಡಾಡಿದ್ದಲ್ಲಿ – ಸಾಮಾಜಿಕ ಅಂತರ ಪಾಲಿಸದಿದ್ದಲ್ಲಿ ದಂಡ ಸಹಿತ ಶಿಕ್ಷೆ : ಡಿಸಿ ವೈ.ಎಸ್ ಪಾಟೀಲ

BI ಬಿಜಾಪುರ : ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ-2020 ರಡಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಓಡಾಡಿದ್ದಲ್ಲಿ ಅಂತಹವರನ್ನು ಶಿಕ್ಷೆಗೆ ಒಳಪಡಿಸುವುದರ ಜೊತೆಗೆ ಸ್ಥಳದಲ್ಲಿಯೇ ದಂಡವನ್ನು ವಿಧಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಈ ವಿಷಯ ತಿಳಿಸಿದ ಅವರು ಮುನ್ನೆಚ್ಚರಿಕೆಗಾಗಿ ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು. ಅದರಂತೆ ಸಾಮಾಜಿಕ ಅಂತರವನ್ನೂ ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿರುವ ಅವರು ಕನಿಷ್ಠ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳುವಂತೆ ಅವರು ತಿಳಿಸಿದ್ದಾರೆ.

ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಅಂತಹವರನ್ನು ಕಾನೂನಿನ ರೀತ್ಯ ಶಿಕ್ಷೆಗೆ ಒಳಪಡಿಸುವ ಜೊತೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಳದಲ್ಲಿಯೇ ತಲಾ 200 ರೂಪಾಯಿ ಮತ್ತು ಮಹಾನಗರ ಪಾಲಿಕೆ ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿ 100 ರೂಪಾಯಿ ದಂಡ ವಿಧಿಸಲಾಗುತ್ತದೆ.

ಈ ಕುರಿತಂತೆ ಸಬ್‌ಇನ್ಸ್ಪೆಕ್ಟರ್, ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕರು, ಪಿಡಿಒಗಳು ಅಥವಾ ಸರ್ಕಾರದಿಂದ ನಿಯೋಜಿತ ಅಧಿಕೃತ ಅಧಿಕಾರಿಗಳ ಮೂಲಕ ಈ ದಂಡ ವಿಧಿಸಲು ಅಧಿಕಾರ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್-19 ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಲಾಗಿದ್ದು, ಕೆಲವು ವಿನಾಯಿತಿಗಳೊಂದಿಗೆ ನಿಷೇಧಾಜ್ಞೆ ಮುಂದುವರೆಸಿ ಆದೇಶಿಸಲಾಗಿದ್ದು, ಅದರಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕಿತ್ತಳೆ ವಲಯದ ಜಿಲ್ಲೆಗಳಲ್ಲಿ ಕೆಲವು ಸಡಿಲಿಕೆ ಮಾಡಿ ವ್ಯಾಪಾರ, ವಹಿವಾಟಿಗೆ ಅವಕಾಶ ನೀಡಿಲಾಗಿದೆ.

ಸಾರ್ವಜನಿಕವಾಗಿ, ಒಬ್ಬರಿಗಿಂತ ಹೆಚ್ಚು ಜನ ಗುಂಪು ಗುಂಪಾಗಿ ಸೇರುವುದು ಕಂಡುಬಂದಲ್ಲಿ ಅಂತಹವರ ಮೇಲೂ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

error: Content is protected !!