ಮತ್ತೆ ಕಲ್ಯಾಣ ದರ್ಶನ ಕಾರ್ಯಕ್ರಮದ ಪೂರ್ವಭಾವಿ ಸಭೆ

BI ಬಿಜಾಪುರ : ಅನುಭವ ಮಂಟಪ ಎಲ್ಲ ವರ್ಗ, ಸಮಾಜಗಳ ಪ್ರತಿಬಿಂಬ. ಮಾನವೀಯತೆ, ಸಮಾನತೆಯನ್ನು ಪ್ರತಿಪಾದಿಸಿದ ಬಸವಾದಿ ಶರಣರ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ಪ್ರೇರಣೆ ನೀಡುವುದೇ ಮತ್ತೆ ಕಲ್ಯಾಣ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಗದಗ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ವಿಜಯಪುರದಲ್ಲಿ ನಡೆಯಲಿರುವ ಮತ್ತೆ ಕಲ್ಯಾಣ ದರ್ಶನ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾರ್ಗದರ್ಶನ ನೀಡಿದ ಅವರು, ಸಮಾನತೆ, ಮಾನವೀಯತೆಯನ್ನು ಬಸವಾದಿ ಶರಣರು ಪ್ರತಿಪಾದಿಸಿದ್ದಾರೆ, ಅವರು ಪ್ರತಿಪಾದಿಸಿದ ಚಿಂತನೆಗಳನ್ನು ಯುವಜನತೆಯ ಮನದಲ್ಲಿ ಮೂಡಿಸುವ ದೃಷ್ಟಿಯಿಂದ ಈ ಮತ್ತೆ ಕಲ್ಯಾಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಅಕ್ಕ, ಅಣ್ಣನಿಗಿಂತ – ಅಯ್ಯ ಅನ್ನುವದು ಶ್ರೇಷ್ಠ ಆರ್ಯ ಪದದಿಂದ ಬಂದಿದೆ. ‘ಅಯ್ಯ’ ಅಂದಿನ ವೈದಿಕ ಧರ್ಮದಲ್ಲಿದ್ದ ಬಸವಣ್ಣನವರು ಅವರನ್ನು ಅಪ್ಪಿಕೊಳ್ಳುವ ದೃಷ್ಟಿಯಿಂದ ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಎಂದು ಅವರನ್ನು ಸಂಬೋಧಿಸುತ್ತಿದ್ದರೆಂದು ಹೇಳಿದರು.

ಸಮಾಜದಲ್ಲಿ ಅಸಮಾನತೆ ಹೋಗಲಾಡಿಸುವುದು, ಅಜ್ಞಾನ-ಅಂಧಶ್ರದ್ಧೆ ಹೋಗಲಾಡಿಸುವುದು ಕಲ್ಯಾಣ ಕ್ರಾಂತಿಯ ಮೂಲ ಉದ್ದೇಶವಾಗಿತ್ತು. ಸಮಾಜವನ್ನು ಶೋಷಣೆ, ಅಂಧಶ್ರದ್ಧೆಯಿಂದ ಸಂಪೂರ್ಣವಾಗಿ ಮುಕ್ತಗೊಳಿಸುವುದು ಪ್ರಸ್ತುತ ಮತ್ತೆ ಕಲ್ಯಾಣ ದರ್ಶನ ಕಾರ್ಯಕ್ರಮದ ಮೂಲ ಧ್ಯೇಯವಾಗಿದೆ ಎಂದರು.
ಷಣ್ಮುಖಾರೂಢ ಮಠದ ಪರಮಪೂಜ್ಯ ಸಿದ್ಧಾರೂಢ ಸ್ವಾಮಿಗಳು ಮಾತನಾಡಿದ ಅವರು ವಚನಗಳನ್ನು ಕೇವಲ ಮೇಲಿನಿಂದ ತೇಲಿಸಿ ಹೇಳುವದಲ್ಲ. ಅದರ ತಾತ್ವಿಕ ನೆಲೆಯಿಂದ, ಆಧ್ಯಾತ್ಮದ ನೆಲೆಗೆ ಹೋದಾಗ ನಮಗೆ ಅವುಗಳ ಅರಿವು ಉಂಟಾಗುತ್ತದೆ. ಆ ದಿಶೆಯಲ್ಲಿ ನಾವಿಂದು ಯುವಕರಿಗೆ, ಮುಂದಿನ ಪೀಳಿಗೆಯವರಿಗೆ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಮೂಲಕ ಸೂಕ್ತ ಮಾರ್ಗದರ್ಶನ ನೀಡುವದು ಇಂದು ಸಕಾಲವಾಗಿದೆ ಎಂದರು.

ಅಗಷ್ಟ 28 ರಂದು ನಡೆಯಲಿರುವ ಮತ್ತೆ ಕಲ್ಯಾಣ ಕಾರ್ಯಕ್ರಮದ ರೂಪುರೇಷೆ, ಸಾಮರಸ್ಯ ನಡಿಗೆ ಮೊದಲಾದ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.

ಸಂಗಮೇಶ ಬಬಲೇಶ್ವರ, ಡಾ.ಮಹಾಂತೇಶ ಬಿರಾದಾರ, ಡಾ.ಎಂ.ಎಸ್. ಚಾಂದಕವಠೆ, ವಿ.ಸಿ. ನಾಗಠಾಣ, ನಾಗರಾಜ ಲಂಬು, ಅಡಿವೆಪ್ಪ ಸಾಲಗಲ್ಲ, ಮೊಹ್ಮದ್‍ರಫೀಕ್ ಟಪಾಲ್, ಶಂಕರ ಬೈಚಬಾಳ, ಎಸ್.ಎಂ. ಕುಲಕರ್ಣಿ, ವಿಜಯಾ ಬಿರಾದಾರ, ಪ್ರೊ.ದೊಡ್ಡಣ್ಣ ಭಜಂತ್ರಿ, ಎಂ.ಜಿ. ಯಾದವಾಡ, ಡಾ.ಸದಾಶಿವ ಪವಾರ ಮೊದಲಾದವರು ಪಾಲ್ಗೊಂಡಿದ್ದರು. ಬಿ.ಎಂ.ಪಾಟೀಲ ಪ್ರಾರ್ಥಿಸಿದರು ಡಾ.ವಿ.ಡಿ. ಐಹೊಳ್ಳಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!