ಬಿಜಾಪುರ ಜಿಲ್ಲೆಯಲ್ಲಿ ಅಭಿವೃದ್ಧಿಯ ಶೆಕೆ ಆರಂಭ : ಜಿಲ್ಲಾಧಿಕಾರಿ ವೈ ಎಸ್ ಪಾಟೀಲ

BI ಬಿಜಾಪುರ : ಬರದ ನಾಡು ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದ ಜಿಲ್ಲೆಯಲ್ಲಿ ಅಭಿವೃದ್ಧಿಯ ಶೆಕೆ ಆರಂಭವಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಂದಾಗಿ ಜಿಲ್ಲೆಯಲ್ಲಿ ನೀರಾವರಿ ಕ್ಷೇತ್ರ ವಿಸ್ತಾರಗೋಳ್ಳುತ್ತಿದ್ದು, ಜನರ ಆರ್ಥಿಕ ಮಟ್ಟ ಸುಧಾರಿಸುತ್ತಿರುವುದರ ಜೊತೆಗೆ ರೈತರ ಬದುಕಿನಲ್ಲಿ ಹೊಸ ಆಶಾಕಿರಣ ಉದಯಿಸುತ್ತಿದೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ಅವರು ತಿಳಿಸಿದರು.
ನಗರದ ಅಂಬೇಡ್ಕರ ಕ್ರೀಡಾಂಗಣದಲ್ಲಿ 71 ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರೆವೇರಿಸಿ ವಿವಿಧ ಕವಾಯತ್ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯ ನೀರಾವರಿ ಕ್ಷೇತ್ರ ವಿಸ್ತಾರಗೊಳ್ಳುತ್ತಿರುವದರಿಂದ ಮುಂಬೈ, ಮಂಗಳೂರು, ಗೋವಾ, ಕೊಲ್ಲಾಪೂರ, ಸೋಲಾಪೂರ ಬೆಂಗಳೂರು ಸೇರಿದಂತೆ ಬೇರೆ ಬೇರೆ ಪಟ್ಟಣಗಳಿಗೆ ವಲಸೆ ಹೋದ ಜನರು ಪುನಃ ತಮ್ಮ ಹಳ್ಳಿಗಳತ್ತ ಮುಖಮಾಡುತ್ತಿದ್ದಾರೆ. ಯುವ ಜನರೂ ಕೂಡಾ ಗ್ರಾಮಗಳಲ್ಲೇ ನೆಲೆ ನಿಂತು ಕೃಷಿ ಮತ್ತಿತರ ಸ್ವಂತ ಉದ್ಯೋಗಗಳನ್ನು ಆರಂಭಿಸಿ ಸ್ವಾವಲಂಬಿಗಳಾಗುತ್ತಿರುವದು ಅತ್ಯಂತ ಅಶಾದಾಯಕ ಬೆಳವಣಿಗೆ ಎಂದು ಅವರು ತಿಳಿಸಿದರು.
ಯುವ ಜನಾಂಗ ಭರವಸೆ ಮತ್ತು ಆಕಾಂಕ್ಷೆಗಳಿಂದ ಕಂಗೊಳಿಸುತ್ತಿದ್ದು, ಯಶಸ್ಸು ಮತ್ತು ಸಂತೋಷವನ್ನು ತಂದುಕೊಡುವ ಜೀವನದ ಗುರಿಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಉದ್ಯೋಗ ಅವಕಾಶಗಳ ಕೊರತೆಯ ಕಾರಣದಿಂದ ಹತಾಶ, ಅತೃಪ್ತಿ, ಕೋಪ, ಆತಂಕ, ಒತ್ತಡ ಮತ್ತು ನಡವಳಿಕೆಯಲ್ಲಿನ ವೈಪರಿತ್ಯಗಳಲ್ಲಿ ವ್ಯಕ್ತವಾಗುತ್ತಿದೆ. ಯುವ ಜನತೆ ಲಾಭದಾಯಕ ಉದ್ಯೋಗ, ಸಮುದಾಯದೊಂದಿಗೆ ಸಕ್ರೀಯವಾಗಿ ತೊಡಗಿಕೊಂಡು ಪೋಷಕರ ಮಾರ್ಗದರ್ಶನ ಸಮಾಜದ ಪರಾನುಭೂತಿಯ ಪ್ರತಿಕ್ರಿಯೆ ಮೂಲಕ ಸಾಮಾಜದ ಕಾಳಜಿಪರ ನಡವಳಿಕೆಯನ್ನು ಉತ್ತೇಜಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದು, ಸಂತಸ ತಂದಿದೆ ಎಂದು ಅವರು ತಿಳಿಸಿದರು.
ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಮಕ್ಕಳ ಬಗೆಗಿನ ನಿಷ್ಕಾಳಜಿ ಮತ್ತು ಅಪೌಷ್ಠಿಕತೆಗಳಿಂದಾಗಿ ಜಿಲ್ಲೆಯಲ್ಲಿ 2011 ರಲ್ಲಿ ಪ್ರತಿ ಸಾವಿರ ಪುರುಷರಿಗೆ 931 ಮಹಿಳೆಯರು ಮಾತ್ರ ಇದ್ದರು. ಲಿಂಗ ಸಮಾನತೆಯನ್ನು ದೇಶದಲ್ಲಿ ಸಾದಿಸುವ ದೃಷ್ಟಿಯಿಂದ ಮೊದಲ ಬಾರಿಗೆ 2015 ರಲ್ಲಿ ದೇಶದ 100 ಜಿಲ್ಲೆಗಳಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಅನುಷ್ಠಾನಗೊಂಡಿದ್ದು, ಅದರಂತೆ ವಿಜಯಪುರ ಜಿಲ್ಲೆಯಲ್ಲಿಯೂ ಈ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲಾಡಳಿತ ಕೈಗೊಂಡ ವಿನೂತನ ಕಾರ್ಯಕ್ರಮಗಳಿಂದ ಉತ್ತಮ ಫಲಿತಾಂಶ ದೊರೆತಿದೆ
ಪ್ರತಿ ವರ್ಷವೂ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು ಇದು ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಯಶಸ್ವನ್ನು ಸೂಚಿಸುತ್ತದೆ. ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದ ಸಣ್ಣ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳ ಸಾವಿನ ಪ್ರಮಾಣ ಕಡಿಮೆಯಾಗಿದೆ. ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇಂತಹ ಅದ್ಭುತ ಸಾಧನೆಗೆ ಮಾನ್ಯ ಪ್ರಧಾನ ಮತ್ರಿಗಳಿಂದ ಸನ್ಮಾನ ದೊರೆತಿರುವುದೂ ಕೂಡಾ ಹೆಮ್ಮೆ ಪಡುವ ಸಂಗತಿಯಾಗಿದೆ ಎಂದು ಹೇಳಿದರು.
ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ನೇತೃತ್ವದ ಸಮಿತಿ ರಚಿಸಿದ ಸಂವಿಧಾನದಲ್ಲಿ ದೇಶದ ನಾಗರಿಕರು, ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಲಿಂಗ ಮತ್ತು ಆರ್ಥಿಕ ಸಮಾನತೆಯನ್ನು ಭದ್ರಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ಹೊರಹೊಮ್ಮಿದ್ದು ಪ್ರತಿಯೊಬ್ಬ ಭಾರತಿಯ ಹೆಮ್ಮೆ ಪಡಬೇಕಾಗಿದೆ. ಭಾರತದ ಸಮಗ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ತಮ್ಮ ಜೀವನ ತ್ಯಾಗ ಮಾಡಿದ ಧೈರ್ಯಶಾಲಿ ವೀರಯೋಧರಿಗೆ ಮತ್ತು ಭದ್ರತಾ ಸಿಬ್ಬಂದಿಗೆ ಈ ಸಂದರ್ಭದಲ್ಲಿ ಅವರು ಗೌರವ ಸಮರ್ಪಿಸಿದರು.
ಜನರ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ಯೋಜನೆಗಳನ್ನು ಅನುಷ್ಠಾಗೊಳಿಸುವಲ್ಲಿ ಜಿಲ್ಲಾಡಳಿತ ಅತ್ಯಂತ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ. ವೃದ್ಧಾಪ್ಯವೇತನ, ದಿವ್ಯಾಂಗ ವೇತನ, ವಿಧವಾ ವೇತನಗಳನ್ನು ಅರ್ಹರಿಗೆ ತಲುಪಿಸುವುದಕ್ಕೆ ಪಿಂಚಣಿ ಅದಾಲತ್‌ಗಳ ಮೂಲಕ ಆಡಳಿತವನ್ನು ಜನರ ಮನೆಬಾಗಿಲಿಗೆ ತಗೆದುಕೊಂಡು ಹೋಗುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಗ್ರಾಮೀಣ ಜನರ ಬದುಕು ಹಸನುಗೊಳಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಾಂಡಾಗಳ ಸಮಸ್ಯೆಗೆ ಶಾಸ್ವತ ಪರಿಹಾರ ರೂಪಿಸುವಲ್ಲಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸರ್ಕಾರಿ ಮತ್ತು ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿವೆ. ಅದರಲ್ಲೂ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಇತ್ತೀಚಿನ ವರ್ಷಗಳಲ್ಲಿ ಅತ್ತುತ್ತಮ ಸಾಧನೆ ತೋರಿದೆ. ಹಲವಾರು ಶೈಕ್ಷಣಿಕ,ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಹಮ್ಮಿಕೊಂಡು ಮಹಿಳಾ ಸಬಲೀಕರಣದಲ್ಲಿ ಮಹಿಳಾ ವಿಶ್ವವಿದ್ಯಾನಿಲಯ ದಾಪುಗಾಲು ಹಾಕುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವವು ಪ್ರತಿಯೊಬ್ಬರಿಗೂ ಹಕ್ಕುಗಳನ್ನು ಹಾಗೂ ಜವಾಬ್ದಾರಿವನ್ನು ನೀಡಿದೆ. ನನಗೆ ದೇಶ ಏನು ಮಾಡಿದೆ ಎಂದು ಕೇಳಿಕೊಳ್ಳುವ ಮುನ್ನ, ನಾನು ದೇಶಕ್ಕಾಗಿ ಏನು ಮಾಡುತ್ತಿದ್ದೇನೆ ಎಂಬುವುದನ್ನು ಪ್ರತಿಯೊಬ್ಬರೂ ಪ್ರಶ್ನಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಸಂಸ್ಕೃತಿಕ,ಸಾಮಾಜಿ,ಭಾಷೆ ಹಾಗೂ ಧಾರ್ಮಿಕತೆ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವುದು ದೇಶದ ದೊಡ್ಡ ಶಕ್ತಿ ಎಂದು ಅಭಿಪ್ರಾಯಪಟ್ಟರು. ಮಹಾತ್ಮಾ ಗಾಂಧೀಜಿಯವರ `ಇಂಡಿಯಾ ಆಫ್ ಮೈ ಡ್ರೀಮ್ಸ್’ ಎಂಬ ತಮ್ಮ ಪುಸ್ತಕದಲ್ಲಿ ಬಡವರಿಗೆ ಪರಿಣಾಮಕಾರಿ ಧ್ವನಿ ಇರುತ್ತದೆ. ಉನ್ನತ ವರ್ಗ ಮತ್ತು ಕೆಳವರ್ಗ ಇರುವುದಿಲ್ಲ.ಇಲ್ಲಿ ಎಲ್ಲ ಸಮುದಾಯಗಳೂ ಪರಿಪುರ್ಣ ಸಾಮರಸ್ಯದಿಂದ ಬದುಕಬೇಕು. ಮಹಿಳೆಯರು ಪುರುಷರಂತೆಯೇ ಹಕ್ಕುಗಳನ್ನು ಅನುಭವಿಸುತ್ತಾರೆ. ಈ ಆದರ್ಶಗಳು ನಾವು ನಿರ್ಮಿಸುತ್ತಿರುವ ಭಾರತದ ನಿರಂತರ ಜ್ಞಾಪನೆಯಾಗಿದೆ ಎಂದಿದ್ದಾರೆ.
ಮನೆಯಲ್ಲಿ ಸದಸ್ಯರ ಸಹಭಾಗಿತ್ವವು ಕುಟುಂಬವನ್ನು ನಿರ್ಮಿಸುತ್ತಿವೆ. ಅದರಂತೆ ವಿಭಿನ್ನ ಪಾಲುದಾರರು ಸಹಭಾಗಿತ್ವವು ಸಮಾಜವನ್ನು ನಿರ್ಮಿಸುತ್ತದೆ. ಸರ್ಕಾರ ಮತ್ತು ಜನರ ಸಹಭಾಗಿತ್ವವು ಉತ್ತಮ ರಾಷ್ಟçವನ್ನು ನಿರ್ಮಿಸಿದರೆ ರಾಷ್ಟçಗಳ ಸಹಭಾಗಿತ್ವವು ಉತ್ತಮ ಜಗತ್ತನ್ನು ನಿರ್ಮಿಸುತ್ತದೆ. ಈ ರೀತಿಯಾಗಿ ಕುಟುಂಬ ರಾಷ್ಟ್ರ ಮತ್ತು ಪ್ರಪಂಚವನ್ನು ಹಣೆಯುವದು.ಮತ್ತು ಪ್ರಪಂಚವನ್ನು ಕುಟುಂಬವಾಗಿ ಪರಿಗಣಿಸಲು ಪ್ರಮುಖ ಕಾರಣವಾಗಿದೆ. ಮುಕ್ತ ಸಂವಹನ, ಪ್ರಾಮಾನಿಕ ಸಂಭಾಷಣೆ ಸಹಾನುಭೂತಿಯಿಂದ ಪಾಲುದಾರಿಕೆಯನ್ನು ಹೆಚ್ಚಿಸಲಾಗುತ್ತದೆ. ಜನರ ಕಲ್ಯಾಣಕ್ಕಾಗಿ ಕರ್ತವ್ಯವನ್ನು ಪಾಲಿಸುವ ವ್ಯಕ್ತಿಗಳನ್ನು ಮತ್ತು ಸಂಸ್ಥೆಗಳನ್ನು ಸಮಾಜ ಹೆಚ್ಚಿನ ಗೌರವ ತೋರಿಸುತ್ತ ಬಂದಿದೆ.
ದೇಶದಲ್ಲಿ ಬಡತನ ಮೇಲಿನ ಯುದ್ಧ ಇನ್ನೂ ಮುಗಿದಿಲ್ಲ. ಐದನೇ ಒಂದು ಭಾಗದಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಪ್ರತಿಯೊಬ್ಬರ ಕಣ್ಣೀರನ್ನು ಒರೆಸುವ ಧ್ಯೇಯವು ಇನ್ನೂ ಮುಗಿದಿಲ್ಲ. ಜನರಿಗೆ ಆಹಾರ ಭದ್ರತೆ ಒದಗಿಸಲು, ಕೃಷಿ ಕ್ಷೇತ್ರವನ್ನು ಪ್ರಕೃತಿಯ ಬದಲಾವಣಿಗೆ ಹೊಂದಾಣಿಕೆ ಆಗುವಂತೆ ಮಾಡಲು ಹೆಚ್ಚು ಶ್ರಮಿಸಬೇಕು. ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಯೋಗ್ಯವಾದ ಜೀವನ ಮಟ್ಟವನ್ನು ಸುಧಾರಿಸುವುದು ತುರ್ತಾಗಿದೆ ಎಂದರು.
ಸಮಾರಂಭದಲ್ಲಿ ಇದೇ ಮೊದಲ ಬಾರಿಗೆ ಕ್ರೀಡಾಂಗಣದಲ್ಲಿ ನೆರೆದ ಎಲ್ಲರೂ ಭಾರತ ಸಂವಿಧಾನದ ಪೀಠಿಕೆಯನ್ನು ಓದಿ ಸಂವಿಧಾನಕ್ಕೆ ಗೌರವ ಸೂಚಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಕೊಡಮಾಡುವ ಜಿಲ್ಲಾ ಮಟ್ಟದ ಸರ್ವೊತ್ತಮ ಸೇವಾ ಪ್ರಶಸ್ತಿಯನ್ನು ಇಂಡಿ ತಾಲೂಕಿನ ತಡವಲಗಾ ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞರಾದ ಡಾ.ಸುಚೇತಾ ಆಕಾಶಿ, ವಿಜಯಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರ್ಮಲಾ ಸುರಪೂರ, ವಿಜಯಪುರ ಜಿಲ್ಲಾ ಅಂಕಿ ಸಂಖ್ಯಾ ಸಂಗ್ರಹಣಾಧಿಕಾರಿ ಗಂಗಾಧರ ಕುಲಕರ್ಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಶಿಕ್ಕಲಗಾರ, ಮಹಾನಗರ ಪಾಲಿಕೆ ಪರಿಸರ ಅಭಿಯಂತರ ಜಗದೀಶ ಎಸ್.ಆರ್, ಉಪ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಆಧಿಕಾರಿ ಪ್ರಥ್ವಿ ಟಿ.ಪಿ.ಎಂ, ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೆದಾರ ಸಚ್ಚಿದಾನಂದ ತೆರದಾಳ,ನ್ಯಾಯಾಂಗ ಇಳಾಖೆಯ ಶಿರಸ್ತೇಧಾರ ಬಸವರಾಜ ಬೇವೂರ, ಹೊನಗನಹಳ್ಳಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಸ್.ಆರ್.ಕಟ್ಟಿ ಹಾಗೂ ಇಂಡಿ ತಾಲೂಕಿನ ತಡವಲಗಾ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮೇಲ್ವಚಾರಕ, ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ರಾಜಶೇಖರ ಧೈವಾಡಿ ಅವರಿಗೆ ಜಿಲ್ಲಾಧಿಕಾರಿಗಳು ಪ್ರಧಾನ ಮಾಡಿದರು.
2018-19 ನೇ ಸಾಲಿನ ಸಾಧಕ ಕ್ರೀಡಾಪಟುಗಳಾದ ಸೌಮ್ಯ ಅಂತಾಪೂರ,ಅಂಕಿತಾ ರಾಠೋಡ, ಪಾಯಲ ಚವ್ಹಾಣ, ಸಂಪತ್, ಶಬಾನಾ ಶೇಕ, ಜೇಷವಿ ಗುಡಿಮನಿ, ಪ್ರತಾಪ ಪಡಚಿ ,ಅಕ್ಷತಾ ಭೂತನಾಳ, ಮಲ್ಲಿಕಾರ್ಜುನ ಮಠಪತಿ ಇವರನ್ನು ಸನ್ಮಾನಿಸಲಾಯಿತು.
ಕ್ರೀಡಾಂಗಣದಲ್ಲಿ ವಿವಿಧ ತುಕಡಿಗಳಿಂದ ಪಥಸಂಚಲನ ಹಮ್ಮಿಕೊಂಡಿದ್ದು, ಪಥಸಂಚಲನ ಕಿರಿಯರ ವಿಭಾಗದಲ್ಲಿ ಸೈನಿಕ ಶಾಲೆ ಪ್ರಥಮ,ಸಂಗನಬಸವ ಅಂತರಾಷ್ಟ್ರೀಯ ಶಾಲೆ ದ್ವೀತಿಯ ಹಾಗೂ ಜಿ.ಎಚ್.ಪಿ.ಎಸ್. ತೊರವಿ ತೃತಿಯ ಬಹುಮಾನ ಪಡೆದುಕೊಂಡಿದ್ದಾರೆ. ಪಥ ಸಂಚಲನ ಹಿರಿಯರ ವಿಭಾಗದಲ್ಲಿ ಐ.ಆರ್.ಬಿ ಪ್ರಥಮ, ಅರಣ್ಯ ಇಲಾಖೆ ದ್ವಿತಿಯ, ಅಗ್ನಶಾಮಕ ದಳ ತೃತಿಯ ಬಹುಮಾನ ಪಡೆದುಕೊಂಡಿತು. ಶಿಸ್ತಿನ ಶಾಲೆಗಳು, ಬಿ.ಎಲ್.ಡಿ.ಇ ಬಾಲಕೀಯರ ಶಾಲೆ ಪ್ರಥಮ,ಡಿ,.ಎನ್.ದರ್ಬರ ಹಾಗೂ ಸಿದ್ದೇಶ್ವರ ಪ್ರಾಥಮಿಕ ಶಾಲೆ (ಬ)ದ್ವಿತೀಯ ಹಾಗೂ ಸರ್ಕಾರಿ ಉರ್ದು ಪ್ರೌಢ ಶಾಲೆ ತೃತೀಯ ಬಹುಮಾನ ಪಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷ ಶಿವಲಿಂಗಪ್ಪ ನೇದಲಗಿ, ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ), ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ಎಂ.ಬಿ.ಪಾಟೀಲ, ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಪ್ರಭುಗೌಡ ದೇಸಾಯಿ,ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ,ಅಪರ ಜಿಲ್ಲಾಧಿಕಾರಿ ಔದ್ರಾಮ,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಸಿದ್ದಿ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೋಳಸಂಗಿ ಸೇರಿದಂತೆ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

error: Content is protected !!