ಬಿಜಾಪುರದಲ್ಲಿ 500 ಕೋ.ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯ ಮಂತ್ರಿಗಳಿಂದ ಶಂಕುಸ್ಥಾಪನೆ ಹಾಗೂ ಉದ್ಘಾಟನೆ : ಶಾಸಕ ಬಸನಗೌಡ ಪಾಟೀಲ(ಯತ್ನಾಳ)

BI ಬಿಜಾಪುರ : ಕಳೆದ ಒಂದುವರೆ ವರ್ಷಗಳ ಕಾಲಾವಧಿಯಲ್ಲಿ ವಿಜಯಪುರ ನಗರದಲ್ಲಿ ಕೈಗೊಳ್ಳಲಾದ 500 ಕೋಟಿ ರೂಗಳ ವೆಚ್ಚದ ಅಭಿವೃಧ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಇದೇ ಜನೇವರಿ 16 ರಂದು ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.
ನಗರದ ಸಿದ್ದೇಶ್ವರ ಕಲಾ ಭವನದಲ್ಲಿ ಇಂದು ತೊರವಿ ಶ್ರೀ ಸಿದ್ದೇಶ್ವರ ಜಾತ್ರೆಯ ಅಂಗವಾಗಿ ಏರ್ಪಡಿಸಲಾಗುವ ವಿವಿಧ ಕಾರ್ಯಕ್ರಮಗಳು ಹಾಗೂ ವಿವಿಧ ಅಭಿವೃಧ್ದಿ ಕಾಮಗಾರಿಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು, ವಿಜಯಪುರ ನಗರದಲ್ಲಿ ಕಳೆದ ಒಂದುವರೆ ವರ್ಷಗಳ ಅವಧಿಯಲ್ಲಿ ಹಲವು ಅಭಿವೃಧ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಇದೇ ಜನೇವರಿ 16 ರಂದು ಮುಖ್ಯಮಂತ್ರಿಗಳು ಆಗಮಿಸಿ ನಗರದ ಕನಕದಾಸ ಬಡಾವಣೆಯಲ್ಲಿರುವ ಜಿಲ್ಲಾ ಸಂಕೀರ್ಣದ ಮೈದಾನದಲ್ಲಿ ಅಭಿವೃಧ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಲಿದ್ದು, ವಿಶೇಷವಾಗಿ 25 ಕೋಟಿ ರೂ ವೆಚ್ಚದ ಜಿಲ್ಲಾಡಳಿತ ಭವನ, ವಿವಿಧ ಬಡಾವಣೆಗಳಲ್ಲಿ 250 ಕೋಟಿ ರೂ ವೆಚ್ಚದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು, ಸೆಟ್‌ಲೈಟ್ ಬಸ್ ನಿಲ್ದಾಣ, ಒಳಚರಂಡಿ ಮತ್ತು ವಿವಿಧ ರಸ್ತೆಗಳ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆಂದು ಅವರು ಹೇಳಿದರು.
ವಿಜಯಪುರ ನಗರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.ನಗರದಾದ್ಯಂತ ನಾಗರಿಕರ ಸುರಕ್ಷತೆಗೆ ಪೋಲಿಸ್ ಇಲಾಖೆಯಿಂದ ಸಿಸಿ ಕ್ಯಾಮರಾ ಅಳವಡಿಕೆಗೆ 5.5 ಕೋಟಿ ರೂ ಕಾಯ್ದಿರಿಸಲಾಗಿದೆ. ಸ್ವಾಮಿ ಅಯ್ಯಪ್ಪಸ್ವಾಮಿ ದೇವಸ್ಥಾನ ವ್ಯಾಪ್ತಿಯಲ್ಲಿ ಒಳಚರಂಡಿ ನಿರ್ಮಾಣಕ್ಕೆ 5 ಕೋಟಿ ರೂ ಕಾಯ್ದಿರಿಸಲಾಗಿದೆ. ನಗರದ ಮಹಾತ್ಮಗಾಂಧಿ ವೃತ್ತದ ವ್ಯಾಪ್ತಿಯಲ್ಲಿ ಅಂಡರ್‌ಪಾಸ್ ರಸ್ತೆ, ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡ ಹಾಗೂ ಹಿಂದುಳಿದ ವರ್ಗಗಳ ವ್ಯಾಪಾರಸ್ಥರ ಅನುಕೂಲಕ್ಕಾಗಿ ಶೇ.50 ರಷ್ಠು ಅಂಗಡಿಗಳ ಸೌಲಭ್ಯ, ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ಸುಧಾರಣೆಗೆ 15 ಕೋಟಿ ರೂ ಕಾಯ್ದಿರಿಸಿದ್ದು, ಲೋಕೋಪಯೋಗಿ ಇಲಾಖೆಯಿಂದ 30 ಕೋಟಿ ರೂಪಾಯಿಗಳಿಗೂ ಹೆಚ್ಚಿನ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ವಿಜಯಪುರ ನಗರದಲ್ಲಿ ಇನ್ನೊಂದು ಕ್ರೀಡಾಂಗಣ ನಿರ್ಮಿಸಿಲು ಉದ್ದೇಶಿಸಲಾಗಿದ್ದು ಆ ಕ್ರೀಡಾಂಗಣಕ್ಕೆ ನೇತಾಜಿ ಸುಭಾಶಚಂದ್ರ ಭೋಸ್ ನಾಮಕರಣ ಮಾಡುವ ಉದ್ದೇಶ ಹೊಂದಿದ್ದು ಇದಕ್ಕಾಗಿ 20 ಕೋಟಿ ರೂ ಗಳನ್ನು ಮಂಜೂರು ಮಾಡಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗಿದೆ. ಅದರಂತೆ ಗೋದಾವರಿ ಹೋಟೆಲ್‌ನಿಂದ ರಸ್ತೆ ಅಗಲಿಕರಣ, ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ಸುತ್ತಮುತ್ತಲು ವಾಕಿಂಗ್ ಟ್ರ್ಯಾಕ್, ಜಿಮ್, ಕುಡಿಯುವ ನೀರಿನ ಶುದ್ದಿಕರಣ ಘಟಕ ನಿರ್ಮಾಣವನ್ನು ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ 5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ವಿಜಯಪುರ ನಗರದಲ್ಲಿ ಬಡ ಜನರಿಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಆವಾಸ ಯೋಜನೆ, ಪ್ರಧಾನಮಂತ್ರಿ ಆವಾಸ ಯೋಜನೆ ವಿವಿಧ ವಸತಿ ಯೋಜನೆಯಡಿ 4 ಸಾವಿರಕ್ಕೂ ಹೆಚ್ಚು ಮನೆಗಳ ಸೌಲಭ್ಯ ಕಲ್ಪಸಲಾಗುವುದು. ನಗರದಲ್ಲಿ ಸರ್ಕಾರಿ ಜಮೀನು, ರಸ್ತೆ ಅತಿಕ್ರಮಿಸಿ ನಿರ್ಮಿಸಿರುವ ಅನಧಿಕೃತ ಕಟ್ಟಡ ತೆರವಿಗೆ ಕ್ರಮ ಕೈಗೊಂಡಿದೆ. ಮಹಾನಗರ ಪಾಲಿಕೆಯ ಎಲ್ಲ ವಾರ್ಡಗಳ ಪುನರ್ ವಿಂಗಡಣೆಯಾದಲ್ಲಿ ಅಭಿವೃಧ್ಧಿಯಲ್ಲಿ ಶಿಸ್ತು ಬರಲಿದೆ. ಮುಖ್ಯಮಂತ್ರಿಗಳು ಆಗಮಿಸಿದ ಸಂದರ್ಭದಲ್ಲಿ ವಿಜಯಪುರ ನಗರಕ್ಕೆ ವೈದ್ಯಕೀಯ ಕಾಲೇಜು ಮಂಜೂರಾತಿಗಾಗಿ ಆಯವ್ಯಯದಲ್ಲಿ ಅನುದಾನ ಕಾಯ್ದಿರಿಸಲು ಕೋರಲಾಗುವುದು. ಬಿಳಿಜೋಳ ಪಡಿತರ ವ್ಯವಸ್ಥೆಯಡಿ ಸೇರಿಸಿ ಕನಿಷ್ಠ 4 ಸಾವಿರ ರೂಗಳ ಬೆಂಬಲ ಬೆಲೆ ನಿಗಧಿ ಪಡಿಸಲು, ಒಣದ್ರಾಕ್ಷಿ ರೈತರಿಗೆ ಯೋಗ್ಯಬೆಲೆ ದೊರಕಿಸಲು ಆನ್‌ಲೈನ್ ಮಾರುಕಟ್ಟೆ ಆರಂಭಿಸುವ ಕುರಿತು, ತಿರುಪತಿ ದೇವಸ್ಥಾನಕ್ಕೆ ಇಲ್ಲಿಯ ರೈತರಿಂದ ನೇರವಾಗಿ ಒಣದ್ರಾಕ್ಷಿ ಖರೀದಿಸಲು ಅಲ್ಲಿಯ ದೇವಸ್ಥಾನ ಟ್ರಸ್ಟ್ ಮತ್ತು ಮುಖ್ಯಮಂತ್ರಿಗಳಿಗೆ ಕೋರಲು ಮನವಿ ಮಾಡಲಾಗುವುದು ಎಂದು ಹೇಳಿದರು.
ನಗರದ ಡಾ. ಬಿ.ಆರ್. ಅಂಬೆಡ್ಕರ್ ಕ್ರೀಡಾಂಗಣದಲ್ಲಿ ಸಂಜೆ ನಡೆಯಲಿರುವ ಸಿಡಿಮದ್ದು ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಾಲ್ಗೋಳ್ಳುವರು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿದ್ದೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಚೇರಮನ್ ಬಸಯ್ಯಾ ಹಿರೇಮಠ, ಗೌರವ ಕರ‍್ಯರ‍್ಶಿ ಸದಾನಂದ ದೇಸಾಯಿ, ಜಂಟಿ ಕರ‍್ಯರ‍್ಶಿ ಮಲ್ಲಿಕರ‍್ಜುನ ಸಜ್ಜನ, ಕೋಶಾಧ್ಯಕ್ಷ ಬಸವರಾಜ ಸೂಗುರ,ಸದಸ್ಯರಾದ ಸಿದದರಾಮಪ್ಪ ಉಪ್ಪಿನ, ಎಸ್.ಎಸ್.ನಾಡಗೌಡ,ಚಂದು ಹುಂಡೇಕಾರ,ಎಂ.ಎಸ್.ಕರಡಿ, ಈರಣ್ಣ ಕರಡಿ, ರಾಘವ ಅಣ್ಣಿಗೇರಿ ಸೇರಿದಂತೆ ಇತರ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

error: Content is protected !!