ಬರುವ ಅಗಷ್ಟ 4 ರಂದು ಮ್ಯಾರಥಾನ್

BI NEWS, ಬಿಜಾಪುರ : ಕೋಟಿ ವೃಕ್ಷ ಅಭಿಯಾನದಡಿ ಬೃಹತ್ ಪ್ರಮಾಣದ ಮ್ಯಾರಥಾನ್ ಬರುವ ಅಗಷ್ಟ 4ರಂದು ಜಿಲ್ಲಾಡಳಿತದ ಸಹಯೋಗದಿಂದ ಸಂಘಟಿಸಲು ಇಂದು ನಡೆದ ವೃಕ್ಷ ಅಭಿಯಾನ ಪ್ರತಿಷ್ಠಾನದ ಸಭೆಯಲ್ಲಿ ನಿರ್ಧರಿಸಲಾಯಿತು. ಕಳೆದ ಎರಡು ವರ್ಷಗಳಿಂದ ಸಂಘಟಿಸುತ್ತಿರುವ ಮ್ಯಾರಥಾನ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದೇಶ-ವಿದೇಶಗಳಿಂದ ಹಲವಾರು ಕ್ರೀಡಾ ಪಟುಗಳು ಈ ಮ್ಯಾರಥಾನ್ ಓಟದಲ್ಲಿ ಭಾಗವಹಿಸುತ್ತಿದ್ದು, ಈ ಬಾರಿಯೂ ವಿಭಿನ್ನವಾಗಿ ಸಂಘಟಿಸಲು ನಿರ್ಧರಿಸಲಾಗಿದೆ. ಮ್ಯಾರಥಾನ್ ಪೂರ್ವಬಾವಿಯಾಗಿ ಜುಲೈ ಮೊದಲ ವಾರದಲ್ಲಿ ಪರಿಸರ ಜಾಗೃತಿಯ ಕುರಿತು ಚಿತ್ರಕಲೆ ಸ್ಪರ್ಧೆ ಹಾಗೂ ಮತ್ತಿತರ ಸ್ಪರ್ಧೆಗಳನ್ನು ಏರ್ಪಡಿಸಲು ನಿರ್ಧರಿಸಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಅಭಿವೃದ್ಧಿ ಕಾರ್ಯ ನಡೆಯುತ್ತಿರುವದರಿಂದ ಪರ್ಯಾಯವಾಗಿ ಬೇರೆ ಸ್ಥಳಗಳಲ್ಲಿ ಸಂಘಟಿಸಲು ಬಿ.ಎಲ್.ಡಿ.ಇ ಮೈದಾನ, ಪೊಲೀಸ್ ಪರೇಡ್ ಮೈದಾನಗಳಿಗೆ ಭೇಟಿ ನೀಡಿ ಮೈದಾನಗಳನ್ನು ಪ್ರತಿಷ್ಠಾನ ಸದಸ್ಯರು ಪರಿಶೀಲಿಸಿದರು. ಮ್ಯಾರಥಾನ್ ವಿವಿಧ ಸ್ಪರ್ಧೆಗಳಿಗೆ ಪ್ರಾಯೋಜಕರ ನೆರವು ಪಡೆಯಲು ನಿರ್ಧರಿಸಲಾಯಿತು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ದುಂಡಪ್ಪಣ್ಣ ಗುಡ್ಡೋಡಗಿ, ಸಂಗು ಸಜ್ಜನ, ಮಿಲಿಂದ ಚಂಚಲಕರ, ಎಸ್.ಎಸ್.ಕೋರಿ, ಪ್ರೊ. ಶರದ್ ರೂಢಗಿ, ವಿಲಾಸ ಬಗಲಿ, ಎಂ.ಪಿ.ಕುಪ್ಪಿ, ಎಚ್.ಎಂ.ಮುಜಾವರ, ಎ.ಸಿ.ಎಫ್ ಬಿ.ಪಿ.ಚವ್ಹಾಣ, ಮುರುಗೇಶ ಪಟ್ಟಣಶೆಟ್ಟಿ ಮತ್ತಿತರರು ಇಂದಿನ ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!