ನೀರಾವರಿ ಇಲಾಖೆ ಇತಿಹಾಸದಲ್ಲಿಯೇ ಹೊಸ ಅಧ್ಯಾಯವನ್ನು ಸೃಷ್ಠಿಸಲಿದೆ : ಗೃಹ ಸಚಿವ ಎಂ.ಬಿ.ಪಾಟೀಲ್

BI NEWS, ಬಿಜಾಪುರ : ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆ 3600ಕೋಟಿ ವೆಚ್ಚದಲ್ಲಿ 6.5ಟಿ.ಎಂ.ಸಿ ಬಳಸಿ 1ಲಕ್ಷ 33ಸಾವಿರ ಎಕರೆ ಪ್ರದೇಶಕ್ಕೆ ನೀರೊದಗಿಸಲು ಅಣಿಯಾಗಿದ್ದು, ನೀರಾವರಿ ಇಲಾಖೆ ಇತಿಹಾಸದಲ್ಲಿಯೇ ಹೊಸ ಅಧ್ಯಾಯವನ್ನು ಸೃಷ್ಠಿಸಲಿದೆ” ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಸ್ವಕ್ಷೇತ್ರದ ಶೇಗುಣಶಿಯಲ್ಲಿ ಶ್ರೀ ಮಳಿಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ದೇವಸ್ಥಾನ ನೂತನ ಕಟ್ಟಡ ಉದ್ಘಾಟಿಸಿ, ಕಳಸಾರೋಹಣ ನೇರವೇರಿಸಿ ಮಾತನಾಡಿದ ಅವರು “ಶಾಶ್ವತವಾಗಿ ಬರಪೀಡಿತವಾಗಿದ್ದ ವಿಜಯಪುರ ಜಿಲ್ಲೆಯನ್ನು ನನಗೆ ನೀರಾವರಿ ಇಲಾಖೆ ಸಚಿವನಾಗಿ ದೊರೆತ ಅವಕಾಶ ಸದ್ಭಳಕೆ ಮಾಡಿಕೊಂಡು, ವಿವಿಧ ಯೋಜನೆಗಳಿಂದ ಜಿಲ್ಲೆಯ 16ಲಕ್ಷ ಎಕರೆ ಪ್ರದೇಶ ನೀರಾವರಿಗೆ ಒಳಪಡಿಸಿದ್ದಲ್ಲದೇ, 212ಕೆರೆಗಳನ್ನು ತುಂಬಿಸುವ ನನ್ನ ಕನಸು ಸಾರ್ಥಕಗೊಳಿಸಿದ್ದೇನೆ” ಎಂದರು. “ಜಿಲ್ಲೆಯ ಅತ್ಯಂತ ಎತ್ತರದ ಪ್ರದೇಶವಾಗಿದ್ದ ಕಾರಣಕ್ಕೆ ತಿಕೋಟಾ ಹೋಬಳಿ ಶಾಶ್ವತವಾಗಿ ನೀರಾವರಿ ಯೋಜನೆಗಳಿಂದ ವಂಚಿತವಾಗಿತ್ತು. ತುಬಚಿ-ಬಬಲೇಶ್ವರ ಯೋಜನೆ ರೂಪಿಸಿ, 3600ಕೋಟಿಯಷ್ಟು ಬೃಹತ್ ಅನುದಾನ ಒದಗಿಸಿ, 6.5ಟಿ.ಎಂ.ಸಿ ನೀರು ಹಂಚಿಕೆ ಮಾಡಿದ್ದು, 20ವರ್ಷಗಳಲ್ಲಿ ಆಗಬಹುದಾಗಿದ್ದ ಕಾರ್ಯವನ್ನು 3ವರ್ಷಗಳಲ್ಲಿ ಪೂರ್ಣಗೊಳಿಸಿದ್ದು, ಮುಂದಿನ 3ತಿಂಗಳಿನಲ್ಲಿ ರೈತರ ಜಮೀನಿಗೆ ನೀರು ಹರಿಯಲಿದೆ. ಇದು ರಾಜ್ಯದ, ರಾಷ್ಟ್ರದ ನೀರಾವರಿ ಇಲಾಖೆ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಲಿದೆ” ಎಂದರು. “ನೀರಾವರಿ ಮಾಡಿದರೆ, ಅಭಿವೃದ್ಧಿ ಕೆಲಸ ಮಾಡಿದರೇ ಯಾರಾದರೂ ಓಟು ಹಾಕುತ್ತಾರೆಯೇ? ಎಂದು ಹಲವರು ಪ್ರಶ್ನಿಸುತ್ತಿದ್ದರು. ಆದರೆ ನನ್ನ ಬಬಲೇಶ್ವರ ಕ್ಷೇತ್ರದ ಜನ ನಾವು ಅಭಿವೃದ್ಧಿ ಪರವಾಗಿದ್ದೇವೆ ಎಂಬುದನ್ನು ಭಾರಿ ಬಹುಮತ ನೀಡುವ ಮೂಲಕ ಬೆಂಬಲಿಸಿದ್ದಾರೆ” ಎಂದರು. “ಬಬಲೇಶ್ವರ ಕ್ಷೇತ್ರದಲ್ಲಿ ನಾನು ಮಾಡಿ ನೀರಾವರಿ ಯೋಜನೆಗಳಿಂದ ಪ್ರತಿ 4-5ಹಳ್ಳಿಗೆ 5ಸಾವಿರ ಟನ್ ಕಬ್ಬು ನುರಿಸುವ ಸಕ್ಕರೆ ಕಾರ್ಖಾನೆ ಆರಂಭಿಸುವಷ್ಟು ಕಬ್ಬು ಬೆಳೆಯುತ್ತಿದ್ದು, ಕೈಗಾರಿಕೆಗಳಿಗೆ ವಿಫುಲ ಅವಕಾಶ ಸೃಷ್ಠಿಯಾಗಿದೆ” ಎಂದರು. “ಬಬಲೇಶ್ವರ-ಗಲಗಲಿ ರಸ್ತೆಯಿಂದ ವಿಜಯಪುರ-ಹುಬ್ಬಳ್ಳಿ ಎನ್.ಎಚ್-218ವರೆಗೆ, ಶೇಗುಣಶಿ-ಮಮದಾಪುರ-ದುಡಿಹಾಳ ಮಾರ್ಗವಾಗಿ ರಸ್ತೆಯನ್ನು ಹೆದ್ದಾರಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಶೇಗುಣಶಿಯಿಂದ ದುಡಿಹಾಳವರೆಗೆ 16ಕಿ.ಮೀ ರಸ್ತೆಯನ್ನು 17ಕೋಟಿ 30ಲಕ್ಷ ರೂ.ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ದುಡಿಹಾಳದಿಂದ 218 ರಾಷ್ಟ್ರೀಯ ಹೆದ್ದಾರಿಯವರೆಗೆ 5ಕಿ.ಮೀ ರಸ್ತೆಯನ್ನು 5ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಒಟ್ಟು 21ಕಿ.ಮೀ ಈ ರಸ್ತೆಯನ್ನು ವಿಜಯಪುರ-ಗಲಗಲಿ ರಸ್ತೆಯಂತೆ ಹೆದ್ದಾರಿ ಮಾದರಿಯಲ್ಲಿ ನಿರ್ಮಿಸಲಾಗುವದು” ಎಂದರು. ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮೀಜಿ, ಸಂಗಾಪುರ ಕಮರಿಮಠ ಸಿದ್ದಲಿಂಗ ಸ್ವಾಮಿಗಳು, ಖಾದಿ ಗ್ರಾಮದ್ಯೋಗ ಅಧ್ಯಕ್ಷ ಬಾಪುಗೌಡ ಪಾಟೀಲ್, ಅಪ್ಪುಗೌಡ ಪಾಟೀಲ್,ಡಾ.ಕೆ.ಎಚ್.ಮುಂಬಾರೆಡ್ಡಿ, ಕೃಷ್ಣಪ್ಪ ದೇಸಾಯಿ ಅರ್ಜುಣಗಿ, ಕೆ.ಎಂ.ಎಫ್ ನಿರ್ದೇಶಕ ಶ್ರೀಶೈಲಗೌಡ ಪಾಟೀಲ್, ಗ್ರಾ.ಪಂ. ಅಧ್ಯಕ್ಷ ಸಂಗವ್ವ ಹೊಸಮನಿ, ಎಪಿಎಂಸಿ ನಿರ್ದೇಶಕಿ ಸಾರವ್ವ ಪೂಜಾರಿ, ಭೀಮಪ್ಪ ಶಿವಗೊಂಡ, ಭೀಮಣ್ಣ ಬಡಿಗೇರ, ಮಲ್ಲಪ್ಪ ಪೂಜಾರಿ, ಮುತ್ತಪ್ಪ ವಾಲಿಕಾರ, ಸಾಬು ಪೂಜಾರಿ, ಕಾಶೆಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!