ನಿಗದಿಪಡಿಸಿದ ವಯೋಮಾನದ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಲು ಜಿಲ್ಲಾಧಿಕಾರಿಗಳ ಮನವಿ

BI ಬಿಜಾಪುರ : ಜಿಲ್ಲೆಯಾದ್ಯಂತ ಇದೇ ಡಿಸೆಂಬರ್ 31ರವರೆಗೆ ಮಕ್ಕಳಿಗೆ ಟಿಡಿ ಹಾಗೂ ಡಿಪಿಟಿ ಲಸಿಕೆ ಹಾಕುವ ಅಭಿಯಾನ ಹಮ್ಮಿಕೊಂಡಿದ್ದು, ಎಲ್ಲ ಮಕ್ಕಳ ಪಾಲಕರು ತಪ್ಪದೇ ತಮ್ಮ ಮಕ್ಕಳಿಗೆ ಈ ಲಸಿಕೆ ಹಾಕಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಮನವಿ ಮಾಡಿಕೊಂಡಿದ್ದಾರೆ.
ನಗರದ ಸಿಕ್ಯಾಬ್ ಸಂಸ್ಥೆಯಲ್ಲಿ ಟಿಡಿ ಮತ್ತು ಡಿಪಿಟಿ ಲಸಿಕಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಭವಿಷ್ಯದ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಈ ಅಭಿಯಾನ ಆರಂಭಿಸಿದ್ದು, ಮಕ್ಕಳಿಗೆ ಲಸಿಕೆ ಹಾಕುವುದರಿಂದ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ.
ಕಾರಣ ನಿಗದಿ ಪಡಿಸಿದ ವಯೋಮಾನದ ಮಕ್ಕಳಿಗೆ ವಿಶೇಷವಾಗಿ 5 ರಿಂದ 6 ವರ್ಷದ ಮಕ್ಕಳಿಗೆ ಡಿಪಿಟಿ (ಡಿಫ್ತೇರಿಯಾ ಪರ್ಟೋಸಿಸ್ ಟಿಟಾನಸ್) ಲಸಿಕೆಯನ್ನು ತಪ್ಪದೇ ಹಾಕಿಸಬೇಕು. ಅದರಂತೆ 6 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಟಿಟಾನಸ್ ಮತ್ತು ಡಿಫ್ತೇರಿಯಾ ಲಸಿಕೆಯನ್ನು ತಪ್ಪದೇ ಹಾಕಿಸುವಂತೆ ಅವರು ಕರೆ ನೀಡಿದ್ದಾರೆ.
ರಾಜ್ಯದ 9 ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿ, ಈ ಲಸಿಕಾ ಅಭಿಯಾನವನ್ನು ಆಯೋಜಿಸಲು ಸರ್ಕಾರ ನಿರ್ದೇಶನ ನೀಡಿದ್ದು, ಡಿಸೆಂಬರ್ 31ರವರೆಗೆ ಈ ಅಭಿಯಾನ ನಡೆಯಲಿದೆ. ಆಯಾ ಶಾಲಾ ಶಿಕ್ಷಕರು ಹಾಗೂ ಸಂಬಂಧಪಟ್ಟ ವೈದ್ಯಾಧಿಕಾರಿಗಳು ಯಾವುದೇ ಮಗು ಈ ಲಸಿಕೆಯಿಂದ ವಂಚಿತವಾಗದಂತೆ ಎಚ್ಚರಿಕೆ ವಹಿಸಬೇಕು. ಆಯಾ ಶಾಲಾ ಮುಖ್ಯೋಪಾಧ್ಯಾಯರು ಕೂಡ ಈ ಕುರಿತಂತೆ ಮೇಲ್ವಿಚಾರಣೆ
ನಡೆಸುವಂತೆ ಅವರು ಸಲಹೆ ನೀಡಿದರು.
ಈ ಲಸಿಕೆ ಹಾಕುವುದರಿಂದ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದ್ದು, ಯಾವುದೇ ರೀತಿಯ ಅಡ್ಡಪರಿಣಾಮಗಳಿರುವುದಿಲ್ಲ. ಕಾರಣ ಹೆಚ್ಚು, ಹೆಚ್ಚು ನಿಗದಿತ ವಯೋಮಾನದ ಮಕ್ಕಳಿಗೆ ಈ ಲಸಿಕೆ ಹಾಕಿಸುವ ಮೂಲಕ ಶೇಕಡಾ ನೂರರಷ್ಟು ಪ್ರಗತಿ ಸಾಧಿಸಬೇಕು. ಮಕ್ಕಳ ಆರೋಗ್ಯ ಮತ್ತು ದೇಶದ ಆರೋಗ್ಯವಂತ ಪ್ರಜೆಗಳನ್ನಾಗಿಸಲು ಯಾವುದೇ ಮಗು ಈ ಲಸಿಕೆಯಿಂದ ವಂಚಿತವಾಗದಂತೆ ಗಮನ ನೀಡಬೇಕು. ಯಾವುದೇ ರೀತಿಯ ಏರು-ಪೇರು ಈ ಲಸಿಕೆಯಿಂದ ಕಂಡು ಬಂದಲ್ಲಿ ಜಿಲ್ಲೆಯ ಪ್ರತಿ ಮಕ್ಕಳ ತಜ್ಞರು ಕೂಡ ಉಚಿತವಾಗಿ ಚಿಕಿತ್ಸೆಗೆ ಒಪ್ಪಿರುವುದರಿಂದ ಯಾರೂ ಭಯ ಪಡದೇ ಈ ಲಸಿಕೆಗಳನ್ನು ಹಾಕಿಸುವಂತೆ ಸಲಹೆ ನೀಡಿದರು.
ಸಿಕ್ಯಾಬ್ ಸಂಸ್ಥೆಯ ನಿರ್ದೇಶಕ ಸಲಾವುದ್ದೀನ್ ಪುಣೆಕರ ಅವರು ಮಾತನಾಡಿ, ಸಾರ್ವಜನಿಕರು ಹಾಗೂ ಮಕ್ಕಳ ಹಿತದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಾರಿಯಾಗುವ ಪ್ರತಿಯೊಂದು ಯೋಜನೆ ಅವರ ಅನುಕೂಲಕ್ಕಾಗಿ ಇರುವುದರಿಂದ ಫಲಾನುಭವಿಗಳು ಮುಂದೆ ಬಂದು ಈ ಯೋಜನೆಗಳ ಲಾಭ ಪಡೆಯಬೇಕು. ಅದರಂಗವಾಗಿ ಜಿಲ್ಲಾಡಳಿತ ಮನೆ ಬಾಗಿಲಿಗೆ ಬಂದಿದ್ದು, ಹಿರಿಯ ಅಧಿಕಾರಿಗಳೂ ಕೂಡ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿರುವುದು ಸಂತಸದ ವಿಷಯವಾಗಿದ್ದು, ಎಲ್ಲ ಪಾಲಕರು, ಶಿಕ್ಷಕರು, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ತಪ್ಪದೇ ಈ ಲಸಿಕೆ ಹಾಕಿಸುವಂತೆ ಅವರು ಮನವಿ ಮಾಡಿದರು.
ಡಬ್ಲೂಎಚ್‌ಓ ಎಸ್‌ಎಂಓ ಡಾ.ಮುಕುಂದ ಗಲಗಲಿ ಅವರು ಮಾತನಾಡಿ, ರಾಜ್ಯದಲ್ಲಿ ಡಿಫ್ತೇರಿಯಾ ರೋಗ ಇರುವಂತಹ ಜಿಲ್ಲೆಗಳನ್ನು ಗುರುತಿಸಿದ್ದು, ಉತ್ತರ ಕರ್ನಾಟಕ ಭಾಗದ ಕಲ್ಬುರ್ಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಈ ವಿಶೇಷವಾದ ಲಸಿಕಾ ಅಭಿಯಾನ ಹಮ್ಮಿಕೊಂಡಿದ್ದು, ನಿಗದಿಪಡಿಸಿದ ವಯೋಮಾನದ ಮಕ್ಕಳು ಈ ಲಸಿಕೆಯಿಂದ ವಂಚಿತವಾಗದಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅಜೀಮ ಇನಾಂದಾರ ಅವರು ಮಾತನಾಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹನಾಧಿಕಾರಿ ಗೋವಿಂದ ರೆಡ್ಡಿ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಅಬ್ದುಲರಜಾಕ ಹೊರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪ್ಸೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೇಮಾನ ನದಾಫ್ ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಮಹೇಶ ನಾಗರಬೆಟ್ಟ, ಚಿಕ್ಕಮಕ್ಕಳ ತಜ್ಞ ಡಾ.ಮುಜಾಹೀದ ಬಾಗವಾನ್, ಪೀಟರ್ ಅಲೆಕ್ಸಾಂಡರ್, ಅಕ್ರಮ ಮಾಶ್ಯಾಳಕರ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಸಂಪತ್ ಗುಣಾರಿ, ತಾಲೂಕಾ ಆರೋಗ್ಯ ಅಧಿಕಾರಿ ಡಾ.ಕವಿತಾ, ಡಾ.ಜಿನತುನ್ನೀಸಾ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಆರ್.ಬಾಗವಾನ್ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ ಅವರು ಕಾರ್ಯಕ್ರಮ ನಿರ್ವಹಿಸಿದರು.

error: Content is protected !!