ದ್ವಿತೀಯ ಪಿಯುಸಿ ಕೇಂದ್ರಗಳಿಗೆ ಜಿಲ್ಲಾಧಿಕಾರಿಗಳ ದಿಢೀರ ಭೇಟಿ

BI ಬಿಜಾಪುರ : ಜಿಲ್ಲೆಯಲ್ಲಿ ಇಂದು ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಗಣಿತ, ಐಚ್ಚಿಕ ಕನ್ನಡ ಹಾಗೂ ಲೆಕ್ಕಶಾಸ್ತ್ರ ವಿಷಯದ ಪರೀಕ್ಷೆಗಳು ನಡೆಯುವ ವೇಳೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಹಾಗೂ ಪೋಲಿಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್ ಅವರು ಪರೀಕ್ಷಾ ಕೇಂದ್ರಗಳಿಗೆ ದಿಢೀರನೆ ಭೇಟಿ ನೀಡಿ ಪರಿಶೀಲಿಸಿದರು.

ನಗರದಲ್ಲಿರುವ ಬಾಲಕರ ಸರಕಾರಿ ಪದವಿ ಪೂರ್ವಕಾಲೇಜು, ಬಾಲಕಿಯರ ಸರಕಾರಿ ಪದವಿ ಪೂರ್ವಕಾಲೇಜು, ಪಿ.ಡಿ.ಜೆ ಪದವಿ ಪೂರ್ವಕಾಲೇಜು, ವಿದ್ಯಾನಿಕೇತನ ಪದವಿ ಪೂರ್ವಕಾಲೇಜು, ಬಂಜಾರಾ ಪದವಿ ಪೂರ್ವಕಾಲೇಜಿನ ಪರೀಕ್ಷಾ ಕೇಂದ್ರಗಳಿಗೆ ದಿಢೀರನೆ ಭೇಟಿ ನೀಡಿದ ಅವರು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯುವುದನ್ನು ಕೊಠಡಿಯಲ್ಲಿ ಸೂಕ್ಷ್ಮವಾಗಿ ಪರಿಶೀಲನೆ ಮಾಡಿ ಮುಖ್ಯ ಅಧೀಕ್ಷಕರುಗಳಿಗೆ, ಸಹ ಮುಖ್ಯ ಅಧೀಕ್ಷಕರುಗಳಿಗೆ, ವಿಶೇಷ ಜಾಗೃತ ದಳದ ಸದಸ್ಯರುಗಳಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.

ಪರೀಕ್ಷಾ ಕೇಂದ್ರಗಳಲ್ಲಿ ನಕಲು ನಡೆಯದಂತೆ ಹಾಗೂ ಪರೀಕ್ಷಾದುರಾಚರಣೆ ನಡೆಯದಂತೆ ಪರೀಕ್ಷಾ ಕೇಂದ್ರಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಮುಂಜಾಗೃತ ಕ್ರಮ ಕೈಗೊಳ್ಳವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಪರೀಕ್ಷಾ ನಿಯಮವನ್ನು ಉಲ್ಲಂಘಿಸಿದಲ್ಲಿ ಅಂತಹ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮಜರುಗಿಸಲಾಗುವುದೆಂದು ಎಚ್ಚರಿಸಿದರು. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಶಾಂತಿಯುತವಾಗಿ ನಡೆದಿರುವುದನ್ನು ಗಮನಿಸಿ ಹರ್ಷವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಐಚ್ಛಿಕ ಕನ್ನಡ ವಿಷಯಕ್ಕೆ ಒಟ್ಟು 274 ವಿದ್ಯಾರ್ಥಿಗಳು ರಜಿಸ್ಟರ್ ಮಾಡಿಸಿಕೊಂಡಿದ್ದು, 267 ವಿದ್ಯಾರ್ಥಿಗಳು ಹಾಜರಾಗಿದ್ದು, 07 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಲೆಕ್ಕಶಾಸ್ತ್ರ ವಿಷಯಕ್ಕೆ 4694 ವಿದ್ಯಾರ್ಥಿಗಳು ರಜಿಸ್ಟರ್ ಮಾಡಿಸಿಕೊಂಡಿದ್ದು, 4512 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 182 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಗಣಿತ ವಿಷಯಕ್ಕೆ 7720 ವಿದ್ಯಾರ್ಥಿಗಳು ರಜಿಸ್ಟರ್ ಮಾಡಿಸಿಕೊಂಡಿದ್ದು, 7530 ವಿದ್ಯಾರ್ಥಿಗಳು ಹಾಜರಾಗಿದ್ದು, 190 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಪಿಯು ಬೋರ್ಡ್ನ ಜಿಲ್ಲಾ ಉಪನಿರ್ದೇಶಕ ಜೆ.ಎಸ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!