ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆಯ ದಕ್ಷಿಣ ಕಾಲುವೆಗೆ ನೀರು ಹರಿಯವ ಆರಂಭ

BI ಬಿಜಾಪುರ : ಮಾಜಿ ಸಚಿವ ಎಂ.ಬಿ.ಪಾಟೀಲ್‍ರ ಕನಸಿನ ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆಯ ದಕ್ಷಿಣ ಕಾಲುವೆಗೆ ನೀರು ಹರಿಸಲು ಗುರುವಾರದಿಂದ ಆರಂಭಿಸಲಾಗಿದ್ದು, ಜೀವನದಲ್ಲಿಯೇ ಪ್ರಥಮಬಾರಿಗೆ ಕಾಲುವೆ ನೀರು ನೋಡಿದ ಈ ಭಾಗದ ಜನ ಗುಲಾಲು ಎರಚಿ, ಮಾತೆಯರು ಗಂಗಾ ಪೂಜೆ ಸಲ್ಲಿಸಿ ಸಂಭ್ರಮಿಸಿದರು.

ಕೃಷ್ಣಾನದಿಯ ನೀರು ಕವಟಗಿಯ ಹತ್ತಿರ ಲಿಫ್ಟ್ ಮೂಲಕ ನದಿಯಿಂದ 165ಮೀ. ಎತ್ತರದ ತಿಕೋಟಾ ಪ್ರದೇಶಕ್ಕೆ ಮೇಲೆತ್ತಿ, ಅಲ್ಲಿಂದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ನಾಲ್ಕು ಕಾಲುವೆಗಳ ಮೂಲಕ ಯತ್ನಾಳ, ಇಟ್ಟಂಗಿಹಾಳ, ಕನಮಡಿ, ಕಣಮುಚನಾಳ ಈ ನಾಲ್ಕು ದಿಕ್ಕಿನಲ್ಲಿ ಕಾಲುವೆಗಳನ್ನು ನಿರ್ಮಿಸಲಾಗಿದ್ದು, ಕಳೆದ ವಾರ ಯತ್ನಾಳ ಉತ್ತರ ಕಾಲುವೆಗೆ ನೀರು ಹರಿಸಲಾಗಿದ್ದು, ಇದೀಗ ದಕ್ಷಿಣ ಕಣಮುಚನಾಳ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಈ ಕಾಲುವೆ ತಿಕೋಟಾ-ಕಣಮುಚನಾಳ ಡೋಣಿವರೆಗೆ 19ಕಿ.ಮೀ. ಉದ್ದವಿದ್ದು, ತಿಕೋಟಾ, ರತ್ನಾಪುರ, ತಾಜಪುರ, ಧನ್ಯಾಳ, ಕಣಮುಚನಾಳ ಗ್ರಾಮಗಳಿಗೆ ನೀರಾವರಿ ಸೌಕರ್ಯ ದೊರೆಯುವದಲ್ಲದೇ ನಂತರ ಡೋಣಿ ನದಿ ಸೇರುವದು.

“ನೀರಾವರಿ ಎನ್ನುವದು ಗಗನ ಕುಸುಮವಾಗಿದ್ದ ಈ ಪ್ರದೇಶದಲ್ಲಿ ಬೋರವೆಲ್‍ಗಳಿಗೆ ಆಶ್ರಿತವಾಗಿ ಅಲ್ಪನೀರಿನಲ್ಲಿಯೇ ದ್ರಾಕ್ಷಿ, ದಾಳಿಂಬೆಯಂತಹ ತೋಟಗಾರಿಕೆಗಳಿಗೆ ಪ್ರಸಿದ್ದಿ ಹೊಂದಿದೆ. ಕಳೆದ ವರ್ಷವೇ ಇಲ್ಲಿ ಕಾಲುವೆ ನಿರ್ಮಿಸಲು ಆರಂಭಿಸಿದ್ದರು. ಇನ್ನೂ ಕಾಲುವೆ ಕೆಲಸವೇ ಮುಗಿದಿಲ್ಲ. ಅದಾಗಲೇ ನೀರು ಹರಿಸಿದ್ದು, ಬರಗಾಲದಿಂದ ಕಂಗೆಟ್ಟಿದ್ದ ನಮಗೆ ಇದರಿಂದ ನಮಗೆ ಬಾರಿ ಉಪಯೋಗವಾಗಿದೆ. ಕೇವಲ ಕಾಲುವೆಗೆ ನೀರು ಹರಿಸುವದಲ್ಲದೇ, ಸುತ್ತಲಿನ ಕೆರೆ, ಬಾಂದಾರಗಳು, ಹಳ್ಳಗಳಿಗೂ ನೀರು ಹರಿಸಿದ್ದು, ಬೇಸಿಗೆಯಲ್ಲಿ ಈ ಬಾರಿ ನಮಗೆ ನೀರಿನ ತೊಂದರೆ ಆಗುವದಿಲ್ಲ ಎನ್ನುವ ಭರವಸೆ ಇದೆ” ಎಂದು ಈ ಭಾಗದ ರೈತ ಮುಖಂಡರಾದ ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಜಕ್ಕಪ್ಪ ಎಡವೆ, ಆರ್.ಜಿ.ಯರನಾಳ, ಅನಿಲ ಹಿರೇಮಠ, ರಾಮಜಿ ಮಿಸಾಳ, ಗುರು ಮುಚ್ಚಂಡಿ, ಶ್ರೀಶೈಲ ಆಲಳ್ಳಿ, ಗೌಸಪೀರ ಮೊಕಾಶಿ, ನಿಂಗನಗೌಡ ಬಿರಾದಾರ, ಮಹೇಶ ಪಾಟೀಲ್, ಪರಮಾನಂದ ಕಲಬೀಳಗಿ, ಅಶೋಕ ಸಾವಳಸಂಗ, ಉಮೇಶ ಯರನಾಳ, ಅಡಿವೆಪ್ಪ ಬಿರಾದಾರ, ಮತ್ತಿತರರು ಸಂಭ್ರಮ ವ್ಯಕ್ತಪಡಿಸಿದರು.

error: Content is protected !!