ಜೀವನಾವಶ್ಯಕ ವಸ್ತು ಮಾರಾಟ – ಸಾಗಾಣಿಕೆಗೆ ನಿರ್ಭಂಧ ಇಲ್ಲ : ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್

BI ಬಿಜಾಪುರ : ದೇಶ ಹಾಗೂ ರಾಜ್ಯದಾದ್ಯಂತ ಲಾಕ್‌ಡೌನ್ ಅನ್ವಯ ನಿರ್ಭಂಧ ಇದ್ದು, ಜಿಲ್ಲೆಯಾದ್ಯಂತ ಜೀವನಾವಶ್ಯಕ ವಸ್ತು ಮತ್ತು ಸರಬರಾಜುವಿಗೆ ಯಾವುದೇ ನಿರ್ಭಂಧ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಅವರು ತಿಳಿದ್ದಾರೆ.

ನಗರದ ನೂತನ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಜಿಲ್ಲಾದ್ಯಂತ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ವಸ್ತುಗಳ ಮಾರಾಟಮತ್ತು ಸಾಗಾಣಿಕೆಗೆ ಯಾವುದೇ ನಿರ್ಬಂಧ ಇರುವುದಿಲ್ಲ. ತರಕಾರಿ, ದಿನಸಿ ಅಂಗಡಿಗಳು(ಕೀರಾಣಿ ಅಂಗಡಿ)ಗಳಿಗೆ ಮತ್ತು ಹಣ್ಣು, ಹೂ ಮಾರಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಈಗಾಗಲೇ ತಳ್ಳುವ ಗಾಡಿಗಳ ಮೂಲಕ ಮಾತ್ರ ಮಾರಾಟಕ್ಕೆ ಅವಕಾಶ ಕಲ್ಪಸಲಾಗಿದ್ದು, ಇನ್ನು ಮುಂದೆ ನಗರದಾದ್ಯಂತ ತೋಟಗಾರಿಕೆ ಇಲಾಖೆ ಮೇಲ್ವಿಚಾರಣೆಯಲ್ಲಿ ನಗರದ 10 ಭಾಗಗಳಲ್ಲಿ ಹಾಪ್‌ಕಾಮ್ಸ್ ಹಣ್ಣು ಮತ್ತು ತರಕಾರಿ ಮಾರಾಟಕ್ಕೆ ಮಳಿಗೆಗಳ ಮೂಲಕ ಮಾರಾಟಕ್ಕೂ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಅದರಂತೆ ತೋಟಗಾರಿಕೆ ಇಲಾಖೆ ವ್ಯಾಪ್ತಿಯ 2 ಸುಜಲಾ ವಾಹನಗಳ ಮೂಲಕವು ನಗರದ ಆಯ್ಕೆ ಮಾಡಿದ ಬಡಾವಣೆಗಳಲ್ಲಿ ತರಕಾರಿ, ಹಣ್ಣು ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು, ಸಾರ್ವಜನಿಕರು ಕೂಡಾ ಗುಂಪು ಗುಂಪಾಗಿ ಬರದೆ ಸರಳ ರೀತಿಯಲ್ಲಿ ವಸ್ತುಗಳನ್ನು ಪಡೆಯಬಹುದಾಗಿದೆ. ಅದರಂತೆ ನಗರದಲ್ಲಿ ಅಗತ್ಯ ವಸ್ತುಗಳ ಮಾರಾಟದಲ್ಲಿ ತೋಡಗಿರುವ ವಾಹನಗಳಿಗೆ ಯಾವುದೇ ನಿರ್ಭಂಧ ಇರುವುದಿಲ್ಲ.

ನಗರದ 35 ವಾರ್ಡುಗಳ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆಯ ವಾರ್ಡವಾರು ತಲಾ ಇಬ್ಬರು ನೋಡಲ್ ಅಧಿಕಾರಿಗಳ ಸಮನ್ವಯತೆಯಿಂದ ಹಾಗೂ ಜಿಲ್ಲೆಯ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ಕೂಡಾ ತಲಾ ಇಬ್ಬರು ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಯಾವುದೇ ಆರೋಗ್ಯ ಸಂಬಂಧಿತ ಮತ್ತು ತುರ್ತು ಸೇವೆ ಸಂಬಂಧಿಸಿದ ದೂರುಗಳನ್ನು ಸಾರ್ವಜನಿಕರು ನೀಡಬಹುದಾಗಿದೆ. ಈ ಅಧಿಕಾರಿಗಳು 108 ಅಂಬೂಲೆನ್ಸ್ ಹಾಗೂ 1077 ಆರೋಗ್ಯ ಸಹಾಯವಾಣಿಗೆ ಮಾಹಿತಿ ನೀಡಿ ಸೌಲಭ್ಯ ಕಲ್ಪಿಸಲಿದ್ದಾರೆ ಎಂದು ಅವರು ಹೇಳಿದರು.

ಎ.ಪಿ.ಎಮ್.ಸಿ, ಹಾಕ್‌ಕಾಮ್ಸ್, ತೋಟಗಾರಿಕೆ ಇಲಾಖೆ, ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳಿಯ ಸಂಸ್ಥೆಗಳಿಗೆ ಅಧಿಕಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ ಅವರು ತುರ್ತು ಸಂದರ್ಭದಲ್ಲಿ 108 ಅಂಬುಲೆನ್ಸ್ ಸೌಲಭ್ಯ ಕಲ್ಪಿಸಲು ನಿರಾಕರಿಸುವ ಅಥವಾ ನಿರ್ಲಕ್ಷಿಸುವ ಸಿಬ್ಬಂಧಿಗಳ ವಿರುದ್ಧವು ಕ್ರಿಮಿನಲ್ ಮುಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಇಂದು ಪೂರ್ವಾಹ್ನವರೆಗೆ 309 ಜನ ವಿದೇಶದಿಂದ ಬಂದಿರುವ ಬಗ್ಗೆ ವರದಿಯಾಗಿದೆ. ಇದರಲ್ಲಿ 28 ಜನ 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 140 ಜನ 15 ರಿಂದ 28 ದಿನಗಳ ಅವಧಿಯಲ್ಲಿದ್ದು 141 ಜನ ಹೋಮ್‌ಕ್ವಾರಂಟೈನ್‌ದಲ್ಲಿದ್ದಾರೆ. ಈ ವರೆಗೆ 7 ಪ್ರಕರಣಗಳ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಅವರು ಸಭೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಅವರು ಅಗತ್ಯ ವಸ್ತುಗಳ, ಮಾರಾಟ ಮತ್ತು ಸಾಗಾಣಿಕೆ ವಾಹನಗಳಿಗೆ ಯಾವುದೇ ನಿರ್ಭಂಧ ಇರುವುದಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಸಿದ್ಧಿ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶಟ್ಟಿ, ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಡಿ.ವೈ.ಎಸ್.ಪಿ ಲಕ್ಷ್ಮಿ ನಾರಾಯಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಮುಕುಂದ ಗಲಗಲಿ, ಜಿಲ್ಲಾಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ ಗಂಗಾಧರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!