ಜಿಲ್ಲೆಯಲ್ಲಿ 3.11 ಲಕ್ಷ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಗುರಿ : ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ

BI ಬಿಜಾಪುರ : ರಾಷ್ಟ್ರೀಯ ಫಲ್ಸ್ ಪೋಲಿಯೋ ಅಂಗವಾಗಿ ಬಿಜಾಪುರ ಜಿಲ್ಲೆಯಲ್ಲಿ 3.11 ಲಕ್ಷ ಮಕ್ಕಳಿಗೆ ಪೋಲಿಯೋ ಹನಿಯನ್ನು ಹಾಕಿಸುವ ಗುರಿಯನ್ನು ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಹೇಳಿದರು.
ರಾಷ್ಟ್ರೀಯ ಫಲ್ಸ್ ಪೋಲಿಯೊ ಕಾರ್ಯಕ್ರಮ ಅಂಗವಾಗಿ ಇಂದು ನಗರದ ಲುಕ್ಮಾನ್ ಆಸ್ಪತ್ರೆಯಲ್ಲಿ 5 ವರ್ಷದೊಳಗಿನ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಜಿಲ್ಲಾ ಮಟ್ಟದ ಪೋಲಿಯೋ ಅಭಿಯಾನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು.
ಇಂದು ಜಿಲ್ಲೆಯ ವಿವಿಧೆಡೆ 1253 ಪೋಲಿಯೋ ಲಸಿಕಾ ಬೂತ್‌ಗಳನ್ನು ಸ್ಥಾಪಿಸಲಾಗಿದೆ. 5 ವರ್ಷದೊಳಗಿನ ಮಕ್ಕಳನ್ನು ಪೋಷಕರು ಪೋಲಿಯೋ ಬೂತ್‌ಗಳಿಗೆ ಕರೆದುಕೊಂಡು ಬಂದು ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು.
ಒಂದೇ ಸುತ್ತಿನ ರಾಷ್ಟ್ರೀಯ ಫಲ್ಸ್ ಪೋಲಿಯೋ ಕಾರ್ಯಕ್ರಮ ಇದಾಗಿರುವುದರಿಂದ ಪಾಲಕರು 5 ವರ್ಷದೊಳಗಿನ ಮಗುವಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಬೇಕು. ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಹನಿ ಹಾಕಿಸಿದ್ದರೂ ಕೂಡ ಈ ಬಾರಿಯೂ ಪೋಲಿಯೋ ಹನಿ ಹಾಕಬೇಕು. ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಿಬ್ಬಂದಿಗಳು ಇದೇ ಜನೇವರಿ ದಿನಾಂಕ 20, 21, ಹಾಗೂ 22 ರಂದು ಮೂರು ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಪೋಲಿಯೋ ಲಸಿಕೆ ಹಾಕುವರು. ಪೋಲಿಯೋ ಲಸಿಕೆ ಹಾಕುವ ಸಿಬ್ಬಂದಿಗಳಿಗೆ ರ್ಸಾಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ನಂತರ ಶಾಂತಿನಗರದ ಅರ್ಬನ್ ಹೆಲ್ತ್ ಸೆಂಟರ್, ಘಿಸಾಡಿ ಕಾಲನಿ, ಬಹಮನಿ ಮಸೀದಿ ಹತ್ತಿರದ ಸಮುದಾಯ ಭವನದಲ್ಲಿ 5 ವರ್ಷದೊಳಗಿನ ಮಗುವಿಗೆ ಜಿಲ್ಲಾಧಿಕಾರಿಗಳು ಪೋಲಿಯೋ ಹನಿ ಹಾಕಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪ್ಸೆ,ಜಿಲ್ಲಾ ನೋಡಲ್ ಅಧಿಕಾರಿ ಡಾ.ಜಯರಾಮ, ತಾಲೂಕಾ ಆರೋಗ್ಯಾಧಿಕಾರಿ ಕವಿತಾ, ಜಿಲ್ಲಾ ಮಲೇರಿಯಾ ಅಧಿಕಾರಿ ಶ್ರೀಮತಿ ಬೀಳಗಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಮಹೇಶ ನಾಗರಬೆಟ್ಟ, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಆರ್.ಬಾಗವಾನ, ಸಿಕ್ಯಾಬ್ ಸಂಸ್ಥೆಯ ನಿರ್ದೇಶಕ ಸಲಾವುದ್ದಿನ್ ಪುಣೇಕರ, ಸಿಕ್ಯಾಬ್ ಸಂಸ್ಥೆಯ ಕಾರ್ಯದರ್ಶಿ ಎ.ಎಸ್.ಪಾಟೀಲ, ಸಮಾಜ ಮುಖಂಡರಾದ ಸಜ್ಜಾದೆ ಪೀರಾ ಮುಷರಿಪ್, ಪೀಟರ್ ಅಲೆಕ್ಸಾಂಡರ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

error: Content is protected !!