ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವರ ಅನಿರೀಕ್ಷಿತ ಭೇಟಿ, ಕೈಗೊಂಡ ಕಾರ್ಯಗಳ ಕುರಿತು ಪರಿಶೀಲನೆ

BI NEWS, ಬಿಜಾಪುರ : ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯ ಆರೋಗ್ಯ ಖಾತೆ ಸಚಿವರಾದ ಶಿವಾನಂದ ಎಸ್.ಪಾಟೀಲ ಅವರು ಹೇಳಿದರು. ಜಿಲ್ಲಾಸ್ಪತ್ರೆಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಜಿಲ್ಲಾ ಆಸ್ಪತ್ರೆಯಲ್ಲಿ ಅನೇಕ ಪ್ರಗತಿಪರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಂತೆ ನುರಿತ ಶಸ್ತ್ರ ಚಿಕಿತ್ಸಕ ವೈದ್ಯರು ಲಭ್ಯವಾಗುತ್ತಿದ್ದು, ಆಸ್ಪತ್ರೆಗೆ ಅವಶ್ಯಕವಿರುವ ಸಾಧನ-ಸಲಕರಣೆಗಳ ಸವಲತ್ತುಗಳ ಸಹ ಪೂರೈಸಲಾಗುತ್ತಿದೆ ಎಂದು ಹೇಳಿದರು. ಅದರಂತೆ ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ಸಾಧನ-ಸಲಕರಣೆಗಳಿಗಾಗಿ ಹಾಗೂ ಅರ್ಥೋಪಿಡಿಕ್, ಸರ್ಜಿಯನ್ ಸೇರಿದಂತೆ ವಿವಿಧ ವಿಭಾಗಗಳಿಗೆ ಅವಶ್ಯಕವಿರುವ ಸವಲತ್ತುಗಳಿಗಾಗಿ ಎನ್‍ಟಿಪಿಸಿಯಿಂದ 1.50 ಕೋಟಿ ರೂ. ಸಹ ನೆರವು ನೀಡಲಾಗುತ್ತಿದೆ ಎಂದು ಹೇಳಿದರು. ಜಿಲ್ಲಾಸ್ಪತ್ರೆ ಸೇರಿದಂತೆ ಆಸ್ಪತ್ರೆ ಆವರಣ, ಆಂತರಿಕ ಹಾಗೂ ಹೊರ ರಸ್ತೆಗಳ ಸುಧಾರಣೆ 2 ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಜಿಲ್ಲಾಸ್ಪತ್ರೆ ಆವರಣದಲ್ಲಿ 3500 ಸಸಿ ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದ್ದು, ಈಗಾಗಲೇ 1500 ಸಸಿಗಳನ್ನು ನೆಡಲಾಗಿದ್ದು, ತಾಜ್‍ಬಾವಡಿಯಿಂದ ನೀರು ಸರಬರಾಜು ಕ್ರಮಕ್ಕೆ ಟೆಂಡರ್ ಸಹ ಕರೆಯಲಾಗಿದೆ ಎಂದು ಹೇಳಿದರು. ಜಿಲ್ಲಾಸ್ಪತ್ರೆಯ ಆವರಣದಲ್ಲಿ 32 ಲಕ್ಷ ರೂ. ವೆಚ್ಚದಲ್ಲಿ ಹೈಮಾಸ್ಕ್ ವಿದ್ಯುತ್ ವ್ಯವಸ್ಥೆ ಸೇರಿದಂತೆ ಆವರಣದಲ್ಲಿ ಉದ್ಯಾನವನ ರೂಪದಲ್ಲಿ ಸುಧಾರಣಾ ಕ್ರಮಗಳಿಗಾಗಿ 5 ಕೋಟಿ ರೂ. ವೆಚ್ಚದಲ್ಲಿ ಹಲವಾರು ಅಭಿವೃದಿಪರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾ ಆಸ್ಪತ್ರೆ ವ್ಯಾಪ್ತಿಯಲ್ಲಿ ಬರುವ 156 ಎಕರೆ ಜಮೀನಿನ ವ್ಯಾಪ್ತಿಯಲ್ಲಿ ಈಗಾಗಲೇ ವಿವಿಧ ರಸ್ತೆ ಅಭಿವೃದ್ದಿ ಕಾರ್ಯಗಳನ್ನು ಹಾಕಿಕೊಳ್ಳಲಾಗಿದೆ. ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯ ಮೊದಲನೇ ಅಂತಸ್ತು ಮುಂದಿನ ಐದು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಬೆಂಗಳೂರು ಹೊರತುಪಡಿಸಿ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿಯೇ ಆರಂಭಿಸಲಾಗಿರುವ ಸಂಜಯಗಾಂಧಿ ಟ್ರಾಮಾ ಸೆಂಟರ್ ಕೂಡ ಸ್ಥಾಪಿಸಲಾಗುತ್ತಿದೆ. ಜಿಲ್ಲೆಯ ವಿವಿಧ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ರೋಗಿಗಳಿಗೆ ಉತ್ತಮ ಸೇವೆ ಕಲ್ಪಿಸಲು ಅಂಬ್ಯೂಲೆನ್ಸ್‍ಗಳ ನಿರ್ವಹಣೆಯನ್ನು ಅತ್ಯುತ್ತಮವಾಗಿ ಕೈಗೊಳ್ಳುವಂತೆಯೂ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಈ ಹಿಂದಿನ ವರ್ಷದಲ್ಲಿ 400 ಹೆರಿಗೆ ಮಾತ್ರಗಳಾಗಿದ್ದವು. ಜಿಲ್ಲಾಸ್ಪತ್ರೆಯಲ್ಲಿ ಕೈಗೊಳ್ಳಲಾದ ವಿವಿಧ ಸುಧಾರಣಾ ಕ್ರಮ ಹಾಗೂ ಉತ್ತಮ ಚಿಕಿತ್ಸೆಯಿಂದಾಗಿ ಈ ವರ್ಷ 850ಕ್ಕೂ ಹೆಚ್ಚು ಯಶಸ್ವಿ ಹೆರಿಗೆಗಳಾಗಿವೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿಪರ ಚಟುವಟಿಕೆಗಳು ಆಸ್ಪತ್ರೆಯ ವ್ಯಾಪ್ತಿಯಲ್ಲಿ ನಡೆಯಲಿವೆ ಎಂದು ಹೇಳಿದರು. ಇಂದು ಮುಖ್ಯಮಂತ್ರಿಗಳು ಹಾಗೂ ತಾವು ಮಾಡಿಕೊಂಡ ಮನವಿಯನ್ನು ಸ್ಪಂದಿಸಿ ಸರ್ಕಾರದ ವಿನಂತಿ ಮೇರೆಗೆ ಮುಷ್ಕರವನ್ನು ತಾತ್ಕಾಲಿಕ ರೀತಿಯಲ್ಲಿ ನಡೆಸುವ ಮೂಲಕ ಒಳ ಹಾಗೂ ಹೊರರೋಗಿಗಳಿಗೆ ವೈದ್ಯರು ನೆರವಾಗಿದ್ದಾರೆ. ಸರ್ಕಾರದ ಮನವಿಗೆ ಸ್ಪಂದಿಸಿ ಸಾಂಕೇತಿಕವಾಗಿ ಮುಷ್ಕರ ನಡೆಸುವುದರ ಮೂಲಕ ಸಹಕಾರ ನೀಡಿದ್ದಕ್ಕಾಗಿ ವೈದ್ಯರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. ಅದರಂತೆ ಆರೋಗ್ಯ ಸಿಬ್ಬಂದಿಗಳು ಹಾಗೂ ಸಂಘ-ಸಂಸ್ಥೆಗಳು ಕೂಡ ಸಹಕಾರ ನೀಡಿದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪ್ಸೆ ಸೇರಿದಂತೆ ಆರೋಗ್ಯ ಇಲಾಖೆ, ಜಿಲ್ಲಾ ಆಸ್ಪತ್ರೆ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!