ಜಿಲ್ಲಾಧಿಕಾರಿಗಳಿಂದ ಅನಿರೀಕ್ಷಿತ ಭೇಟಿ : ಮಕ್ಕಳ ಕುಂದು ಕೊರತೆ ವಿಚಾರಣೆ

BI NEWS, ಬಿಜಾಪುರ : ನಗರದ ಜಿಲ್ಲಾ ಪಂಚಾಯತ್ ಮಾರ್ಗದಲ್ಲಿರುವ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಬಾಲಮಂದಿರದಲ್ಲಿ ಮಕ್ಕಳಿಗೆ ಕಲ್ಪಿಸಲಾಗುತ್ತಿರುವ ಸೌಲಭ್ಯಗಳ ಪರಿಶೀಲಿಸುವ ಜೊತೆಗೆ ಮಕ್ಕಳ ಕುಂದು ಕೊರತೆಗಳನ್ನು ಆಲಿಸಿದರು.

ಶುಕ್ರವಾರ ಸಂಜೆ ನಗರದ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಮಕ್ಕಳಿಗೆ ನೀಡಲಾಗುತ್ತಿರುವ ಊಟ, ಇತರೆ ಮೂಲಸೌಕರ್ಯಗಳ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದರು. ಮಕ್ಕಳಿಗೆ ಯಾವುದೇ ರೀತಿಯ ತೊಂದರೆಗಳಿದ್ದಲ್ಲಿ ತಕ್ಷಣ ಅಪರ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ ಮೋಹನ ಕುಮಾರಿ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸುವಂತೆ ಹೇಳಿದ ಅವರು, ಮಕ್ಕಳಿಗೆ ಸುರಕ್ಷತೆಗೆ ಸಂಬಂಧಪಟ್ಟಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಅವಶ್ಯಕ ಕ್ರಮಕ್ಕೆ ಸೂಚಿಸಲಾಗುವುದೆಂದರು.

ಅದರಂತೆ ಬಾಲಕಿಯರ ಬಾಲಮಂದಿರದಿಂದ ಈ ಹಿಂದೆ ಆಗಿರುವ ಮಕ್ಕಳ ನಾಪತ್ತೆ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಿದರು. ಅದರಂತೆ ಬಾಲಮಂದಿರದಲ್ಲಿರುವ ಬೋಧನಾ ವ್ಯವಸ್ಥೆ, ಗ್ರಂಥಾಲಯ ವ್ಯವಸ್ಥೆ, ಇತರೆ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದ ಅವರು, ಸ್ನಾನದ ಕೋಣೆ ದುರಸ್ತಿಗೆ ಅವಶ್ಯಕ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಆರೋಗ್ಯ, ಉಪಹಾರ, ಇತರೆ ಸಮಸ್ಯೆಗಳಿದ್ದಲ್ಲಿ ತಕ್ಷಣ ವಿದ್ಯಾರ್ಥಿಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ವಿಶೇಷ ಭೂಸ್ವಾಧೀನಾಧಿಕಾರಿ ಸುರೇಖಾ, ತಹಶೀಲ್ದಾರ ಶ್ರೀಮತಿ ಮೋಹನಕುಮಾರಿ ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಶ್ರೀಮತಿ ನಿರ್ಮಲಾ ಸುರಪುರ ಅವರು ವಿದ್ಯಾರ್ಥಿಗಳಿಗೆ ಕಲ್ಪಿಸಲಾದ ಸೌಲಭ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಅವಶ್ಯಕ ಮಾಹಿತಿ ನೀಡಿದರು. ಸಂಸ್ಥೆಯ ಅಧೀಕ್ಷಕ ದೀಪಾಕ್ಷಿ ಜಾನಕಿ ಸೇರಿದಂತೆ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!