ಜಾತ್ರೆಯ ಬದಲು ವಿಪತ್ತು ನಿಧಿಗೆ ಹಣ

BI ಬಿಜಾಪುರ : ವಿಜಯಪುರ ತಾಲೂಕಿನ ಸುಕ್ಷೇತ್ರ ಕತಕನಹಳ್ಳಿಯಲ್ಲಿರುವ ಶ್ರೀ ಗುರುಚಕ್ರವರ್ತಿ ಸದಾಶಿವ ಶಿವಯೋಗೇಶ್ವರ ಸ್ವ-ಸಹಾಯ ಸಂಘದ ಸದಸ್ಯರು ಪ್ರತಿವರ್ಷ ಉಳಿತಾಯ ಮಾಡಿದ ಹಣವನ್ನು ಕತಕನಹಳ್ಳಿಯ ಶ್ರೀ ಗುರುಚಕ್ರವರ್ತಿ ಸದಾಶಿವಮಠದ ಜಾತ್ರಾ ಮಹೋತ್ಸವಕ್ಕೆ ಅರ್ಪಿಸುತ್ತಿದ್ದರು. ಆದರೆ ಈ ಬಾರಿ ಕತಕನಹಳ್ಳಿ ಶ್ರೀಮಠದ ಶ್ರೀ ಶಿವಯ್ಯ ಮಹಾಸ್ವಾಮಿಗಳು ಜಾತ್ರೆಗೆ ನೀಡುವ ಉಳಿತಾಯ ಹಣವನ್ನು ಈ ಬಾರಿ ಪ್ರಧಾನಮಂತ್ರಿಗಳ ವಿಪತ್ತು ನಿಧಿಗೆ ಅರ್ಪಿಸಿ, ಕೊರೊನಾ ನಿಯಂತ್ರಣ ಕಾರ್ಯಚಟುವಟಿಕೆಗಳಿಗೆ ಕೈಜೋಡಿಸಿ ಎಂದು ನಿರ್ದೇಶನ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರ ನೇತೃತ್ವದಲ್ಲಿ ಸ್ವ-ಸಹಾಯ ಸಂಘದ ಸದಸ್ಯರು 1 ಲಕ್ಷ ರೂ.ಗಳ ಚೆಕ್‌ನ್ನು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಕೊರೊನಾ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ತಲ್ಲಣಗೊಂಡಿದೆ, ಈ ನಿಟ್ಟಿನಲ್ಲಿ ಕೊರೊನಾ ನಿಯಂತ್ರಣ ಕಾರ್ಯಚಟುವಟಿಕೆಗಳಿಗೆ ಕೈ ಜೋಡಿಸಬೇಕಾಗಿದೆ. ಈ ಆಶಯದೊಂದಿಗೆ ಕತಕನಹಳ್ಳಿಯ ಪೂಜ್ಯ ಶ್ರೀ ಶಿವಯ್ಯ ಮಹಾಸ್ವಾಮಿಗಳು ಜಾತ್ರಾ ಮಹೋತ್ಸವದ ಬದಲು ಈ ಹಣವನ್ನು ವಿಪತ್ತು ನಿಧಿಗೆ ಅರ್ಪಣೆ ಮಾಡಿ ಎಂಬ ಸಂದೇಶ ನೀಡಿದ್ದಾರೆ, ಅವರ ಸಂದೇಶದಂತೆ ಈಗಾಗಲೇ ಚೆಕ್‌ನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದ್ದೇವೆ ಎಂದು ವಿವರಿಸಿದರು.

ಸ್ವ-ಸಹಾಯ ಸಂಘದ ಸದಸ್ಯರಾದ ಅನೀಲ ಕೋಟ್ಯಾಳ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಂಯುಕ್ತಾ ಪಾಟೀಲ, ಆನಂದ ಮೋದಿ, ಚೇತನ ಕೋಟ್ಯಾಳ, ಸಂಗು ಬಬಲೇಶ್ವರ, ವಿಜಯ ಜೋಶಿ, ಸಂಜು ದಿವಾನಜಿ, ಪ್ರಶಾಂತ ರಾವ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!