ಛತ್ರಪತಿ ಶಿವಾಜಿ ಮಹಾರಾಜ ಅವರ ತತ್ವಾದರ್ಶಗಳು ವಿಶ್ವಕ್ಕೆ ಮಾದರಿ : ಜಿಲ್ಲಾಧಿಕಾರಿ ವೈ ಎಸ್

BI ಬಿಜಾಪುರ : ಶಿವಾಜಿ ಮಹಾರಾಜರು ಕೇವಲ ಒಂದು ಜಿಲ್ಲೆ, ನಾಡು, ರಾಜ್ಯಕ್ಕೆ ಸೀಮಿತವಾಗಿಲ್ಲ, ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ ಅಂತಹ ಶ್ರೇಷ್ಠ ಮಹಾವೀರನ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ಅವರು ತಿಳಿಸಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಎಲ್ಲ ಯೋಧ ಮಹನೀಯರಿಗಿಂತ, ಶಿವಾಜಿ ಮಹಾರಾಜರು ವಿಭಿನ್ನ ಮತ್ತು ವಿಶೇಷತೆವುಳ್ಳವರಾಗಿದ್ದರು. ಧೈರ್ಯ, ಶೌರ್ಯ, ಸಾಹಸ ಹೊಂದಿದ್ದರು. ರಾಣಾಪ್ರತಾಪರ ರೌದ್ರತೆಯ ಜೊತೆಗೆ ಚಾಣಕ್ಯನ ನೀತಿಯನ್ನೂ ಹೊಂದಿದ್ದರಿಂದ ಅದರ ಪ್ರತೀಕವಾಗಿಯೇ ಏಕ್ ಮಾರಾಠಾ, ಲಾಕ್ ಮಾರಾಠಾ ಎಂಬ ಮಾತು ಪ್ರಚಲಿತದಲ್ಲಿದೆ ಎಂದು ಅವರು ಹೇಳಿದರು.

ಅಫ್ಜಲ್‌ಖಾನ್ ಮತ್ತು ಶಿವಾಜಿ ನಡುವೆ ಯುದ್ಧದ ಸಂದರ್ಭದಲ್ಲಿಯೇ ಅವರು ಗುಂಡು ನಿರೋಧಕ ಜಾಕೆಟ್ ಧರಿಸಿ ಶಕ್ತಿ ಮತ್ತು ಯುಕ್ತಿಗೆ ಹೆಸರಾಗಿದ್ದರು. 17 ನೇ ಶತಮಾನದಲ್ಲಿಯೇ ನೌಕಾಪಡೆಯ ವ್ಯವಸ್ಥೆಯನ್ನು ಸೃಷ್ಟಿಸಿ, ಭಾರತದ ನೌಕಾಪಡೆಯ ಪಿತಾಮಹರಾಗಿದ್ದಾರೆ. ಗೆರಿಲ್ಲಾಯುದ್ಧವನ್ನು ಅವರು ಪರಿಚಯಿಸಿದ್ದಾರೆ. ಅವರ ಯುದ್ಧನೀತಿಗಳು ಇಂದಿಗೂ ಪ್ರಸ್ತುತವಾಗಿವೆ. ಮಹಾರಾಜರ ಸಂಪೂರ್ಣ ಜೀವನ ಚರಿತ್ರೆ, ಶೌರ್ಯ, ಪಾಂಡಿತ್ಯ, ವಿಚಾರಗಳನ್ನು ಅರಿತುಕೊಂಡು ಪರಿಪೂರ್ಣ ವ್ಯಕ್ತಿತ್ವವನ್ನು ಇಂದಿನ ಯುವಜನತೆ ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಯುದ್ಧ ನಡೆಯುವ ಯಾವುದೇ ಸಂದರ್ಭದಲ್ಲಿ ಮಹಿಳೆ ಹಾಗೂ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಬೇಟಿ ಬಚಾವೋ ಬೇಟಿ ಪಡಾವೋ ಎಂಬವುದನ್ನು ಶಿವಾಜಿ ಮಹಾರಾಜರು ಆಗಿನ ಕಾಲದಲ್ಲಿಯೇ ತಿಳಿಸಿದ್ದಾರೆ. ಹಾಗಾಗಿ ಮಹಿಳೆಯರಿಗೆ ಗೌರವ ನೀಡುವುದರ ಜೊತೆಗೆ ರಕ್ಷಣೆಯನ್ನು ಮಾಡುತ್ತಿದ್ದರು. ತಾಯಿ ಜೀಜಾಬಾಯಿ ಯಂತೆ ಶಿವಾಜಿಯವರಿಗೆ ಭೊಧಿಸಿದ ಪೌರಾಣಿಕ ಕಥೆಗಳನ್ನು ಇಂದಿನ ಪೋಷಕರು ತಾವು ತಿಳಿದುಕೊಳ್ಳುವುದರ ಜೊತೆಗೆ ತಮ್ಮ ಮಕ್ಕಳಿಗೂ ತಿಳಿಸಬೇಕಾಗಿದೆ ಎಂದು ಅವರು ಹೇಳಿದರು.


ಜೀಜಾಬಾಯಿ ಬಾಲಕನಾದ ಶಿವಾಜಿಗೆ ರಾಮಾಯಣ, ಮಹಾಭಾರತ ಕಥೆಗಳನ್ನು ಹಾಗೂ ಭಗವದ್ಗೀತೆ ಬೋಧಿಸುತ್ತಿದ್ದಳು ಅದರಿಂದಲೇ ಶಿವಾಜಿ ಛತ್ರಪತಿ ಮಹಾರಾಜನಾಗಲು ಸಾಧ್ಯವಾಯಿತು. ಪ್ರಸ್ತುತ ದಿನದಲ್ಲಿ ದೇಶದ ಸಂಸ್ಕೃತಿ, ಪರಂಪರೆ, ಸಂಪ್ರದಾಯ, ರಾಮಾಯಣ, ಮಹಾಭಾರತದ ಕಥೆಗಳು ಹಾಗೂ ಭಗವಧ್ಗೀತೆಯ ಸಾರವನ್ನು ಪ್ರತಿಯೊಬ್ಬ ತಾಯಿಯು ತಮ್ಮ ಮಕ್ಕಳಿಗೆ ಹೇಳಿಕೊಡವಬೇಕಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಮಾತನಾಡಿ, ಶಿವಾಜಿಯವರು ಜಾತಿ, ಮತ, ಧರ್ಮ ಎಂಬ ಬೇಧ ಭಾವ ಮಾಡದೆ ತಮ್ಮ ಆಡಳಿತದಲ್ಲಿ ಪ್ರತಿಯೊಬ್ಬರಿಗೂ ಅವರ ಅರ್ಹತೆಗೆ ತಕ್ಕಂತೆ ಹುದ್ದೆಗಳನ್ನು ನೀಡಿದ್ದರು. ಅಲ್ಲದೇ ಅವರು ರೈತರಿಗೂ ಗೌರವವನ್ನು ನೀಡುತ್ತಿದ್ದರು. ಅವರಿಗಾಗಿ ಹಲವಾರು ರೀತಿಯ ಕಂದಾಯ ಸುಧಾರಣೆಗಳನ್ನು ಜಾರಿಗೆ ತಂದು ಉತ್ತಮ ಆಡಳಿತವನ್ನು ನಡೆಸಿದರು. ಹೀಗೆ ಅವರು ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸಿದ್ದಾರೆ. ಯುವಕರು ಅವರ ತತ್ವಾದರ್ಶಗಳನ್ನು ಅರಿತುಕೊಂಡು, ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದರು.
ಕೇವಲ ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಸ್ವಾರ್ಥಕ್ಕಾಗಿ ಬದುಕದೆ ದೇಶಕ್ಕಾಗಿ ಹೋರಾಡಿದ್ದಾರೆ. ಅವರಂತೆ ಯುವಜನತೆ ದೇಶಾಭಿಮಾನವನ್ನು ಬೆಳಸಿಕೊಂಡು ರಾಷ್ಟ್ರಕ್ಕೆ ಗೌರವವನ್ನು ನೀಡುವುದರ ಜೊತೆಗೆ ರಾಷ್ಟ್ರ ರಕ್ಷಣೆಯನ್ನು ಮಾಡಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು.

ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ, ಬಿಸಿಎ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರಾದ ಮಂಜುನಾಥ ಜುನಗೊಂಡ ಅವರು ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿ, ಶಿವಾಜಿ ಹೃದಯ ಸಾಮ್ರಾಟನಾಗಿ ವೀರಾಜಮಾನನಾದ ಮಹಾರಾಜ ಯಾವತ್ತು ಇಸ್ಲಾಂ ಮತವನ್ನು ದ್ವೇಷಿಸಲಿಲ್ಲ ಹೋರಾಟದ ಹಾದಿಯಲ್ಲಿ ಸಿಕ್ಕ ಕುರಾನ್ ಅನ್ನು ಹಾಗೂ ಇಸ್ಲಾಂ ಮಹಿಳೆಯರಿಗೆ ಗೌರವ ಬಕ್ತಯನ್ನು ತೋರಿದ್ದಾರೆ. ಅವರು ಯಾವುದೇ ಜಾತಿ ಬೇಧ ಮಾಡಲಿಲ್ಲ ಅವರು ಸಹಿಷ್ಣುಗಳಾಗಿದ್ದರು 21ನೇ ಶತಮಾನದಲ್ಲಿ ಶಿವಾಜಿ ಮಹಾರಜನಂತಹ ನಾಯಕರ ಅವಶ್ಯಕತೆ ನಾಡಿಗೆ ಇದೆ ಎಂದು ಅವರು ತಿಳಿಸಿದರು.

ಶಿವಾಜಿ ಮಹಾರಾಜರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಮುನ್ನಡೆದರೆ ವಿಶ್ವಗುರು ಭಾರತದ ಕನಸು ನನಸಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಡಿ ಎಚ್ ಕೋಲಾರ , ಮುತ್ತುರಾಜ, ಹನುಮಂತ ಕುಲಕರ್ಣಿ ಮಂಜುಳಾ ಹಿಪ್ಪರಗಿ ಸಂಗಡಿಗರು ಮತೃವಾತ್ಸಲ್ಯದ ಪ್ರತೀಕ ನಾಟಕವನ್ನು ಪ್ರಸ್ತುತಪಡಿಸಿ ನೋಡುಗರ ಮನತಣಿಸಿದರು.

ವಿಜಯಕುಮಾರ ಚವ್ಹಾಣ, ಅರುಣ ಕದಂ, ರಾಮನಗೌಡ ಬಸನಗೌಡ ಪಾಟೀಲ (ಯತ್ನಾಳ), ರಾಜು ಜಾಧವ, ಪರಶುರಾಮ ರಜಪೂತ, ಶಂಕರ ಕನ್ಸೆ, ಶಿವಾಜಿ ಗಾಯಕವಾಡ, ಆನಂದ ಮಾಳೆ, ಜ್ಯೋತಿಬಾ ಸಿಂಧೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿರ್ಮಲಾ ಥೀಟೆ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ ಸ್ವಾಗತಿಸಿದರು. ಎಚ್.ಎ ಮಮದಾಪೂರ ನಿರೂಪಿಸಿ, ವಂದಿಸಿದರು.

error: Content is protected !!