ಗುಮ್ಮಟನಗರಿ ಜನರಿಗೆ ವಿಮಾನವೇರುವ ಕನಸು ನನಸಾಗುವ ಸ್ಪಷ್ಟ ಲಕ್ಷಣ

ವಿಜಯಪುರ 27. ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಿಜಯಪುರದಲ್ಲಿ ವಿಮಾನ ನಿಲ್ದಾಣ ಆರಂಭಿಸುವ ಕುರಿತು ಚರ್ಚೆ ನಡೆದಿದ್ದು, ಗೃಹ ಸಚಿವ ಎಂ.ಬಿ.ಪಾಟೀಲ್ ಮಾಡಿದ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹಮತ ವ್ಯಕ್ತಪಡಿಸಿ, ಪ್ರಥಮ ಆಧ್ಯತೆಯ ಮೇಲೆ ವಿಜಯಪುರ ವಿಮಾನ ನಿಲ್ದಾಣ ಕೈಗೆತ್ತಿಕೊಳ್ಳಲು ಮೂಲಭೂತ ಸೌಕರ್ಯ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗಳಿಗೆ ಸೂಚಿಸಿರುವುದು ಗುಮ್ಮಟನಗರಿ ಜನರಿಗೆ ವಿಮಾನವೇರುವ ಕನಸು ನನಸಾಗುವ ಸ್ಪಷ್ಟ ಲಕ್ಷಣಗಳು ಗೋಚರವಾಗಿವೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಸನದಲ್ಲಿ ನೋಫ್ರಿಲ್-ಗ್ರೀನ್‍ಫಿಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ವಿಷಯ ಕಾರ್ಯಸೂಚಿಯಲ್ಲಿತ್ತು. ಈ ಕುರಿತು ಚರ್ಚೆ ಆರಂಭವಾದಾಗ ಮಧ್ಯ ಪ್ರವೇಶಿಸಿದ ಗೃಹ ಸಚಿವ ಎಂ.ಬಿ.ಪಾಟೀಲ್ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲಾ ಕೇಂದ್ರ, ಹಲವಾರು ಐತಿಹಾಸಿಕ ಸ್ಥಳಗಳ ಆಕರ್ಷಣೀಯ ಪ್ರವಾಸಿ ತಾಣ ವಿಜಯಪುರ ನಗರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಜಮೀನು ಇದ್ದರೂ, ಈ ಹಿಂದೆ ಗುತ್ತಿಗೆ ಪಡೆದಿದ್ದ ಕಂಪನಿ ಯೋಜನೆ ಕೈಬಿಟ್ಟಿದ್ದು, ಹಲವಾರು ಬಾರಿ ಕೇಂದ್ರ ವಿಮಾನಯಾನ ಇಲಾಖೆಗೆ ಪತ್ರ ಬರೆದು ಒತ್ತಾಯಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ವಿಮಾನ ನಿಲ್ದಾಣ ಇಲ್ಲದೇ ಇರುವದರಿಂದ ದೇಶ-ವಿದೇಶಗಳಿಂದ ಬರುವ ಪ್ರವಾಸಿಗಳಿಗೆ, ಜಿಲ್ಲೆಯಲ್ಲಿ ಬೆಳೆಯುವ ಗುಣಮಟ್ಟದ ಹಣ್ಣು, ತರಕಾರಿ ರಫ್ತಿಗೆ ತೊಂದರೆಯಾಗಿದ್ದು, ಇದರಿಂದ ಪ್ರವಾಸೋದ್ಯಮ, ಕೃಷಿ, ತೋಟಗಾರಿಕೆ ಕ್ಷೇತ್ರಗಳಿಗೆ ಭಾರಿ ಹಿನ್ನಡೆಯಾಗಿ, ಜಿಲ್ಲೆಯಲ್ಲಿ ವ್ಯಾಪಾರ ಹಾಗೂ ಅಭಿವೃದ್ಧಿ ಆಗುತ್ತಿಲ್ಲ. ಎಷ್ಟು ದಿನ ಇದು ಹೀಗೆ ಮುಂದುವರೆಯುವದು? ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಖಾರವಾಗಿ ಪ್ರಶ್ನಿಸಿದರು ಎಂದು ತಿಳಿದುಬಂದಿದೆ. ಈ ಚರ್ಚೆಗೆ ಸಹಮತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಜಯಪುರದಲ್ಲಿ ವಿಮಾನ ನಿಲ್ದಾಣ ಆರಂಭಿಸುವ ಎಂ.ಬಿ.ಪಾಟೀಲ್‍ರ ಪ್ರಸ್ತಾಪ ಸೂಕ್ತವಾಗಿದ್ದು, ತಕ್ಷಣ ಈ ಕುರಿತು ಕ್ರಮ ಜರುಗಿಸಲು ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾರವರಿಗೆ ಸೂಚಿಸಿದರು. ಕೇಂದ್ರ ಸರ್ಕಾರದಿಂದ ಶೇ.51 ರಾಜ್ಯ ಸರ್ಕಾರದಿಂದ ಶೇ.49 ವೆಚ್ಚ ಭರಿಸುವ ಒಪ್ಪಂದದ ಅಡಿ ವಿಮಾನ ನಿಲ್ದಾಣ ಪ್ರಸ್ತಾವನೆ ಕಳುಹಿಸುವಂತೆ ಕೇಂದ್ರ ಸರ್ಕಾರ ಕೋರಿದ್ದು, ಅದರಲ್ಲಿ ವಿಜಯಪುರ ವಿಮಾನ ನಿಲ್ದಾಣವನ್ನೆ ಆಯ್ಕೆ ಮಾಡಿ ಕಳುಹಿಸಲು ಇಂದಿನ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ತಿಳಿದು ಬಂದಿದೆ. ಈ ಕುರಿತು ಬೆಂಗಳೂರಿನಿಂದ ಪ್ರತಿಕ್ರಿಯಿಸಿರುವ ಗೃಹ ಸಚಿವ ಎಂ.ಬಿ.ಪಾಟೀಲ್ ವಿಜಯಪುರದಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಬೇಕೆಂಬುದು ಹಲವಾರು ದಶಕಗಳ ಬೇಡಿಕೆಯಾಗಿದೆ. ಈ ಹಿಂದೆ ಇದಕ್ಕಾಗಿ ಭೂಮಿ ಸ್ವಾಧೀನ ಪಡೆದು ವಿಮಾನ ನಿಲ್ದಾಣ ನಿರ್ಮಿಸಲು ಮಾರ್ಗ್ ಎಂಬ ಕಂಪನಿಗೆ ಗುತ್ತಿಗೆ ಪಡೆದಾಗಲೂ, ಆ ಕಂಪನಿ ಹಿಂದೆ ಸರಿದಿದ್ದರಿಂದ ನಿಲ್ದಾಣ ನಿರ್ಮಿಸುವ ಯೋಜನೆ ನೆನೆಗುದಿಗೆ ಬಿದ್ದಿತ್ತು. ಈ ಕುರಿತು ಹಲವಾರು ಸಭೆಗಳನ್ನು ಅಧಿಕಾರಿಗಳ ಮಟ್ಟದಲ್ಲಿ ಈ ಹಿಂದೆ ಕೂಡ ನಾನು ಮಾಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗಿತ್ತು. ಇದೀಗ ಕೇಂದ್ರ ಶೇ.51 ಹಾಗೂ ರಾಜ್ಯ ಶೇ.49 ವೆಚ್ಚ ಭರಿಸುವ ಒಪ್ಪಂದದಡಿ ವಿಜಯಪುರದಲ್ಲಿ ವಿಮಾನ ನಿಲ್ದಾಣ ಆರಂಭಿಸುವ ಯೋಜನೆ ಆಯ್ಕೆ ಮಾಡಿ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಕಳುಹಿಸಲು ಇಂದಿನ ಸಂಪುಟ ಸಭೆಯಲ್ಲಿ ಸುಧಿರ್ಘವಾಗಿ ಚರ್ಚಿಸಿ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

error: Content is protected !!