“ಕೋವಿಡ್-19 ಮುನ್ನೆಚ್ಚರಿಕೆಯಾಗಿ ಮಹಾರಾಷ್ಟ್ರಕ್ಕೆ ಹೋಗುವ ಹಾಗೂ ಬರುವ ಬಸ್‌ಗಳ ಸಂಪೂರ್ಣ ಸ್ಥಗಿತ” : ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ

BI ಬಿಜಾಪುರ : ಕೊವೀಡ್-19 ನಿಯಂತ್ರಣದ ಉದ್ದೇಶದೊಂದಿಗೆ ಪ್ರಯಾಣಿಕರನ್ನು ಕರೆದೊಯ್ಯುವ ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಸೇರಿದಂತೆ ಇತರೆ ಎಲ್ಲ ವಾಹನಗಳು ಮಹಾರಾಷ್ಟ್ರಕ್ಕೆ ಹೋಗುವುದನ್ನು ಇಂದಿನಿಂದ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ರಾಜ್ಯದ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಕೋವಿಡ್-19 ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಹೋಗುವ ಎಲ್ಲಾ ರೀತಿಯ ಸರ್ಕಾರಿ ಬಸ್, ಇತರೆ ವಾಹನಗಳನ್ನು ಇಂದು ಸಂಜೆ 6 ಗಂಟೆಯಿಂದ ಸ್ಥಗಿತಗೊಳಿಸಲಾಗಿದ್ದು, ವಯಕ್ತಿಕ, ಸ್ವಂತ ವಾಹನಗಳಲ್ಲಿ ಸಂಚರಿಸುವವರು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಪ್ರಯಾಣ ಬೆಳೆಸುವಂತೆ ಅವರು ತಿಳಿಸಿದ್ದಾರೆ.

ಈಗಾಗಲೇ ಕಲಬುರ್ಗಿ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಹೋಗುವ ಹಾಗೂ ಬರುವ ಬಸ್‌ಗಳನ್ನು ನಿರ್ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಯಾಣಿಕರನ್ನು ಹೊತ್ತೊಯ್ಯುವ ವಾಹನಗಳಿಗೆ ನಿರ್ಬಂಧಿಸಲಾಗಿದೆ. ಝಳಕಿ ಮತ್ತು ತಿಕೋಟಾ ಬಸ್‌ನಿಲ್ದಾಣಗಳಲ್ಲಿ ತಕ್ಷಣ ಹೆಲ್ಪ್ಡೆಸ್ಕ್ ಮತ್ತು ಥರ್ಮಲ್ ಸ್ಕ್ಯಾನಿಂಗಗೆ ಸೂಚನೆ ನೀಡಿದ್ದು, ಸಾರ್ವಜನಿಕರು ಕೂಡಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಪ್ರಯಾಣಿಸುವಂತೆ ಅವರು ತಿಳಿಸಿದ್ದು, ವಿಜಯಪುರದಿಂದ
ಕಲಬುರ್ಗಿಗೆ ಬಸ್ ಸಂಪೂರ್ಣ ನಿರ್ಬಂಧದ ಕುರಿತು ಯಾವುದೇ ರೀತಿಯ ನಿರ್ಣಯ ಕೈಗೊಳ್ಳಲಾಗಿಲ್ಲವೆಂದು ಅವರು ಹೇಳಿದ್ದಾರೆ.

ಜಿಲ್ಲೆಯಾದ್ಯಂತ ನೂರಕಿಂತ ಹೆಚ್ಚು ಜನರು ಸೇರುವಂತಹ ಸಭೆ, ಸಮಾರಂಭ ಮತ್ತು ಕಾರ್ಯಕ್ರಮಗಳಿಗೆ ಈಗಾಗಲೇ
ನಿರ್ಬಂಧಿಸಲಾಗಿದೆ. ಇನ್ನು ಮುಂದೆ ನೂರು ಜನರಿಗಿಂತ ಕಡಿಮೆ ಸೇರುವ ಮದುವೆ, ಸಮಾರಂಭ ಮತ್ತು ಇತರೆ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಆಯಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಆಯುಕ್ತರು, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಂದ ಕಡ್ಡಾಯವಾಗಿ ಆಯಾ ಕಲ್ಯಾಣ ಮಂಟಪಗಳ, ಭವನಗಳ ಮಾಲೀಕರು, ಅಡುಗೆಯವರು ಕಡ್ಡಾಯವಾಗಿ ಅನುಮತಿ ಪಡೆಯುವಂತೆ ಇಂದಿನ ಸಭೆಯ ಮೂಲಕ ಅವರು ತಿಳಿಸಿದರು.

ವಿದೇಶದಿಂದ ಆಗಮಿಸುತ್ತಿರುವವರ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಇಂದು ಹೊಸದಾಗಿ 11 ಜನ ವಿದೇಶದಿಂದ
ಆಗಮಿಸಿದ್ದಾರೆ. ಇಂದು ಪೂರ್ವಾಹ್ನದವರೆಗೆ ಜಿಲ್ಲೆಗೆ 266 ಜನರು ವಿದೇಶದಿಂದ ಆಗಮಿಸಿರುವ ಬಗ್ಗೆ ವರದಿಯಾಗಿದೆ. 85 ಜನ 14 ದಿನದ ಹೋಮ್‌ಕೊರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದು, 10 ಜನರು 28 ದಿನಗಳ ಹೋಮ್‌ಕೊರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. 166 ಜನ ಹೋಮ್‌ಕೊರಂಟೈನ್ ಅವಧಿಯಲ್ಲಿದ್ದಾರೆ. ಅತೀ ಹೆಚ್ಚು ಕೊರೋನಾ ವೈರಸ್ ಸೋಂಕಿತರನ್ನು ಹೊಂದಿರುವ ಹತ್ತು ರಾಷ್ಟ್ರಗಳಿಂದ ಬರುವವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಬಸ್‌ಗಳಲ್ಲಿ ಸ್ವಚ್ಛತೆ ಮತ್ತು ಸ್ಯಾನಿಟೈಜರ್ ಬಳಕೆಗೆ ಈಗಾಗಲೇ ಸೂಚಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ನಡೆಯಲಿರುವ ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆ ಸಂದರ್ಭದಲ್ಲಿ ಅವಶ್ಯಕ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ
ಶಿಕ್ಷಣ ಇಲಾಖೆಯ ಸಿಬ್ಬಂದಿಗಳಿಗೆ ತರಬೇತಿಗೊಳಿಸುತ್ತಿದ್ದು, ಮಕ್ಕಳಿಗೆ ಇವರ ಮೂಲಕ ಸೂಕ್ತ ಮಾಹಿತಿ ಒದಗಿಸಲು ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ಯಾವುದೇ ರೀತಿಯ ಕೊರೋನಾ (ಕೋವಿಡ್-19) ವೈರಸ್‌ಗೆ ಸಂಬಂಧಪಟ್ಟ ದೂರುಗಳಿದ್ದಲ್ಲಿ 1077ಗೆ ದೂರು ನೀಡುವಂತೆ ಕೋರಲಾಗಿದೆ. ವಿಶ್ವದಾದ್ಯಂತ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಮೂರನೇ ವಾರದಲ್ಲಿ ಅತೀ ಹೆಚ್ಚಾಗಿದ್ದು, ಈ ಕುರಿತ ನಿಯಂತ್ರಣಕ್ಕಾಗಿ ಪರಿಣಾಮಕಾರಿ ಕ್ರಮಗಳನ್ನು ಇನ್ನು ಮುಂದೆ ಕೈಗೊಳಲಾಗುವುದು, ಅತ್ಯಂತ ಅವಶ್ಯಕವಾಗಿದ್ದು, ಸಾರ್ವಜನಿಕರು ಕೂಡ ಅವಶ್ಯಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೋಳುವಂತೆ ಅವರು ತಿಳಿಸಿದ್ದಾರೆ.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯತ ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪ್ಸೆ, ಜಿಲ್ಲಾಸ್ಪತ್ರೆ ಸರ್ಜನ್ ಶ್ರೀ ಕಟ್ಟಿ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ ಗಂಗಾಧರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!