ಕೋವಿಡ್ -19 ಮುನ್ನೆಚ್ಚರಿಕೆಗಾಗಿ ಕಂಟೈನ್ಮೆಂಟ್ ವಲಯದಲ್ಲಿರುವ ಜನರಿಗೆ ಯಾವುದೇ ರೀತಿಯ ಆರೋಗ್ಯ ಸಂಬಂಧಿತ ತೊಂದರೆಗಳಿದ್ದಲ್ಲಿ ತಕ್ಷಣ ಮಾಹಿತಿ ಸಲ್ಲಿಕೆಗೆ ಜಿಲ್ಲಾಧಿಕಾರಿಗಳ ಮನವಿ

BI ಬಿಜಾಪುರ : ನಗರದಲ್ಲಿ ಕೋವಿಡ್-19 ಸೋಂಕಿತರು ಕಂಡುಬಂದ ಹಿನ್ನೆಲೆಯಲ್ಲಿ ಈಗಾಗಲೇ ಘೋಷಿಸಿದ ಕಂಟೈನ್ಮೆಂಟ್ ಜೋನ್‌ದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಯಾವುದೇ ರೀತಿಯ ಆರೋಗ್ಯ ಸಂಬಂಧಿಸಿದಂತೆ ಯಾವುದೇ ರೀತಿಯ ನೆಗಡಿ, ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರು ಅಥವಾ ಜಿಲ್ಲಾಡಳಿತದ ಯಾವುದೇ ಸಿಬ್ಬಂದಿಗಳಿಗೆ ಮಾಹಿತಿ ಒದಗಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಸುದ್ಧಿಗಾರರಿಗೆ ಈ ವಿಷಯ ತಿಳಿಸಿದ ಅವರು ಈಗಾಗಲೇ ಘೋಷಿಸಿರುವ ಕಂಟೈನ್ಮೆಂಟ್ ವಲಯದಲ್ಲಿ ಇರುವಂತಹ ನಿವಾಸಿಗಳಿಗೆ ಯಾವುದೇ ರೀತಿಯ ಆರೋಗ್ಯದಲ್ಲಿ ಏರುಪೇರು ವಿಶೇಷವಾಗಿ ತೀವ್ರ ಉಸಿರಾಟದ ತೊಂದರೆ, ನೆಗಡಿ, ಕೆಮ್ಮು ಅಥವಾ ಜ್ವರ ಕಂಡುಬಂದಲ್ಲಿ ತಕ್ಷಣ ಅಲ್ಲಿ ನಿಯೋಜಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಅಥವಾ ಸರ್ವೇಗಾಗಿ ನಿಯೋಜಿಸಿದ ಸಿಬ್ಬಂದಿಗಳಿಗೆ ಅಥವಾ ಮಾಧ್ಯಮ ಮಿತ್ರರಿಗೆ ಅಥವಾ ಜಿಲ್ಲಾಡಳಿತದಿಂದ ನಿಯೋಜಿಸಿದ ಯಾವುದೇ ಸಿಬ್ಬಂದಿಗಳಿಗೆ ಈ ಕುರಿತು ತಕ್ಷಣ ಮಾಹಿತಿ ಒದಗಿಸಬೇಕು. ಜಿಲ್ಲಾಡಳಿತ ತಮ್ಮ ಬೆಂಬಲಕ್ಕೆ ಇದ್ದು, ತಕ್ಷಣ ಚಿಕಿತ್ಸೆಗಾಗಿ ಸ್ಪಂದಿಸಲಿದೆ ಎಂದು ಹೇಳಿದರು.

ಅದರಂತೆ ಈ ವಲಯದಲ್ಲಿ ವಾಸಿಸುವಂತಹ 50 ವರ್ಷ ವಯಸ್ಸು ಮೇಲ್ಪಟ್ಟವರು ಟಿ.ಬಿ, ಕ್ಯಾನ್ಸರ್, ಡಯಾಲಿಸಿಸ್, ಅಸ್ತಮಾ ಇದ್ದವರು ಕೂಡ ತಕ್ಷಣ ವರದಿ ಮಾಡಿಕೊಂಡಿದ್ದಲ್ಲಿ ತಕ್ಷಣ ಮತ್ತು ತುರ್ತುಚಿಕಿತ್ಸೆಗೆ ನೆರವಾಗುವ ಜೊತೆಗೆ ಬರುವ ಅಪಾಯವನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದ ಅವರು ದಿನದ 24 ಗಂಟೆಗಳ ಕಾಲ ವೈದ್ಯರು, ಇತರೆ ಸಿಬ್ಬಂದಿಗಳನ್ನು ನೇಮಿಸಿದ್ದು, ತಕ್ಷಣ ಇವರ ನೆರವು ಪಡೆಯುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಈಗಾಗಲೇ ಯಾವುದೇ ರೀತಿಯ ದೂರುಗಳನ್ನು ಸ್ವೀಕರಿಸಲು ಜಿಲ್ಲಾಡಳಿತದ ವತಿಯಿಂದ ಸಹಾಯವಾಣಿ 1077 ಸಹ ಲಭ್ಯವಿದ್ದು, ದಿನಸಿ ಸೇರಿದಂತೆ ಅಗತ್ಯ ವಸ್ತುಗಳು ಪೂರೈಸುವವರು, ತಮಗೆ ಪರಿಚಯವಿರುವ ಯಾವುದೇ ಸಿಬ್ಬಂದಿಗಳಾಗಲಿ ಅಥವಾ ಮಾಧ್ಯಮ ಮಿತ್ರರಾಗಲಿ ತಕ್ಷಣ ಸ್ಪಂದಿಸಿ ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ತಕ್ಷಣ ವರದಿ ಮಾಡಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಈಗಾಗಲೇ ಘೋಷಿಸಿರುವ ಕಂಟೈನ್ಮೆಂಟ್ ವಲಯದಲ್ಲಿ 40-50 ವೈದ್ಯರು, ನರ್ಸ್ಗಳು, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಇನ್ನಿತರ ಸಿಬ್ಬಂದಿಗಳು ತಮ್ಮ ಜೀವದ ಹಂಗನ್ನು ತೊರೆದು ಕುಟುಂಬದಿಂದ ದೂರವಿದ್ದು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದು, ಅವರೆಲ್ಲರಿಗೂ ಪ್ರೋತ್ಸಾಹಿಸುವಂತೆ ಮನವಿ ಮಾಡಿದ ಅವರು ಪ್ರತಿ ವಾರಕ್ಕೊಮ್ಮೆ ವೈದ್ಯರನ್ನು ಬದಲಾವಣೆ ಮಾಡಿ ಅವರ ಗಂಟಲು ದ್ರವ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸುವ ಜೊತೆಗೆ 14 ದಿನಗಳ ಹೋಮ್‌ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಅದರಂತೆ ರೋಗಿಗಳ ಅನುಕೂಲಕ್ಕಾಗಿ ವಯಕ್ತಿಕವಾಗಿ ಮತ್ತು ಪ್ರತ್ಯೇಕವಾಗಿಡಲು ಲಾಡ್ಜ್ಗಳನ್ನು ಸಹ ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.

ನಗರದ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದ ಹಿನ್ನೆಲೆಯಲ್ಲಿ ಡಯಾಲಿಸಿಸ್ ರೋಗಿಗಳು ಸೇರಿದಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ಒದಗಿಸಲು ಜಿಲ್ಲೆಯ 24 ಖಾಸಗಿ ಆಸ್ಪತ್ರೆಗಳ ನೆರವನ್ನು ಸಹ ಪಡೆಯಲಾಗುತ್ತಿದ್ದು, ಈ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳು ಅದರಂತೆ ಆರೋಗ್ಯ ಸಂಬಂಧಿತ ಚಿಕಿತ್ಸೆಯಲ್ಲಿ ತೊಡಗಿರುವವರಿಗೆ ಕೊರೋನಾ ನಿಯಂತ್ರಣದ ಸಮರೋಪಾದಿಯ ಈ ಸಮಯದಲ್ಲಿ ಎಲ್ಲರೂ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಕೋವಿಡ್ -19 ಸೋಂಕಿತರ ಚಿಕಿತ್ಸೆಗೆ ಟೆಲಿಕಾನ್ಫರನ್ಸಿಂಗ್ – ಸಂಪರ್ಕ ಗುರುತಿಸಲು ವಿಶೇಷ ಆ್ಯಪ್ ಅಭಿವೃದ್ಧಿ

ಪ್ರಥಮ ಬಾರಿಗೆ ಕೋವಿಡ್-19 ರೋಗಿಗಳೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕ ಹೊಂದಿದವರನ್ನು ಗುರುತಿಸಲು ಪ್ರಾದೇಶಿಕ ಆಯುಕ್ತರಾದ ಆದಿತ್ಯ ಆಮ್ಲನ್ ಬಿಸ್ವಾಸ್ ಅವರ ನಿರ್ದೇಶನದ ಮೇರೆಗೆ ಜಿಲ್ಲಾಡಳಿತದ ವತಿಯಿಂದ ವಿಶೇಷವಾದ ಆ್ಯಪ್‌ವೊಂದನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಕೋವಿಡ್-19 ಗೆ ತುತ್ತಾಗಿರುವ ರೋಗಿಯನ್ನು ವಿಶೇಷ ರೀತಿಯಲ್ಲಿ ಮತ್ತು ನಿರಂತರ ನಿಗಾ ಇಡುವಂತಹ ವ್ಯವಸ್ಥೆ ಇದಾಗಿದ್ದು, ರೋಗಿಯ ಆರೋಗ್ಯದ ಪ್ರತಿಯೊಂದು ಸ್ಥಿತಿಗತಿಗಳ ಬಗ್ಗೆ ನಿಗದಿತ ಸಮಯಕ್ಕೆ ಚಿಕಿತ್ಸೆಗೆ ಒಳಪಡಿಸುವ ಕ್ರಮ ಇದಾಗಿದ್ದು, ಇದಕ್ಕಾಗಿ 10 ಜನರನ್ನು ಒಳಗೊಂಡ ತಜ್ಞ ವೈದ್ಯರ ಸಮಿತಿಯನ್ನು ಸಹ ರಚಿಸಲಾಗಿದೆ. ಕಾಲಕಾಲಕ್ಕೆ ವೈದ್ಯರು ರೋಗಿಯ ಆರೋಗ್ಯದ ಮೇಲೆ ಸೂಕ್ತ ನಿಗಾ ಇಡಲಿದ್ದು, ಅವಶ್ಯಕ ಸಂದರ್ಭದಲ್ಲಿ ರಾಜ್ಯ ಮಟ್ಟದ ವೈದ್ಯರ ಸಹಾಯವನ್ನೂ ಪಡೆಯಲಾಗುತ್ತದೆ ಎಂದು ಹೇಳಿದರು.

ಅದರಂತೆ ಕೋರೋನಾ ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಗುರುತಸಲು ಇದು ಸಹಕಾರಿಯಾಗಲಿದ್ದು, ರೋಗಿಯೊಂದಿಗೆ ಸಂದರ್ಶನ ನಡೆಸಿ ಅವಶ್ಯಕ ಮಾಹಿತಿ ಪಡೆಯಲು ನೆರವಾಗಲಿದೆ. ಐ-6 ಸಂಸ್ಥೆಯ ಸಹಕಾರದೊಂದಿಗೆ ಈ ಆ್ಯಪ್ ಅಭಿವೃದ್ಧಿ ಪಡೆಸಿದ್ದು, ಪರಿಣಾಮಕಾರಿಯಾದ ಚಿಕಿತ್ಸೆಗೆ ಸಂಪರ್ಕ ಪತ್ತೆಗೆ ಅತ್ಯಂತ ಸಹಕಾರಿಯಾಗಲಿದೆ ಎಂದು ಹೇಳಿದರು.

ಈ ಆ್ಯಪ್ ಮೂಲಕ ಕೊರೋನಾ ಸೋಂಕಿತ ರೋಗಿಯೊಂದಿಗೆ ನಡೆಸುವ ಸಂದರ್ಶನದ ಆಡಿಯೋ ಮತ್ತು ವಿಡಿಯೋ ರೇಕಾರ್ಡಿಂಗ್ ಸಹ ಆಗಲಿದ್ದು, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಗಳ ಮಾಹಿತಿ ಪಡೆಯಲು ನೆರವಾಗಲಿದೆ.
ಅದರಂತೆ ರೋಗಿ ಸ್ನೇಹಿ ಆ್ಯಪ್ ಇದಾಗಲಿದ್ದು, ವೈದ್ಯರು ಟೆಲಿಕಾನ್ಫರನ್ಸಿಂಗ್ ಮೂಲಕವೇ ಪರಿಣಾಮಕಾರಿಯಾದ ಚಿಕಿತ್ಸಾ ವಿಧಾನಕ್ಕೆ ಇದು ಸಹಕಾರಿಯಾಗಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಈವರೆಗೆ ವಿದೇಶ ಮತ್ತು ಇತರೆ ಕಡೆಗಳಿಂದ ಬಂದ 780 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. 335 ಜನರು 28 ದಿನಗಳನ್ನು ಪೂರ್ಣಗೊಳಿಸಿದ್ದಾರೆ. 445 ಜನರು ಸರ್ಕಾರಿ, ಖಾಸಗಿ, ಕೋವಿಡ್ ಆಸ್ಪತ್ರೆ ಸೇರಿದಂತೆ ಹೋಮ್‌ಕ್ವಾರಂಟೈನ್‌ಲ್ಲಿದ್ದಾರೆ. ಈವರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದ 474 ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿಯಲ್ಲಿ 430 ಗಂಟಲು ದ್ರವಗಳ ಮಾದರಿ ಪರೀಕ್ಷಾ ವರದಿ ಬಂದಿದ್ದು, 19 ಪಾಸಿಟಿವ್ 411 ನೆಗೆಟಿವ್ ವರದಿ ಬಂದಿದೆ. ಉಳಿದ 44 ವರದಿಗಳು ಬರಬೇಕಾಗಿದೆ ಎಂದು ಅವರು ತಿಳಿಸಿದ್ದು, ಕೊರೋನಾ ಸೋಂಕಿತರೊಂದಿಗೆ ಸಂಪರ್ಕದಲ್ಲಿದವರನ್ನು ಪತ್ತೆ ಹಚ್ಚುವ ಕಾರ್ಯ ತೀವ್ರಗತಿಯಲ್ಲಿ ನಡೆದಿದೆ ಎಂದು ಅವರು ತಿಳಿಸಿದರು.

error: Content is protected !!