ಕೋವಿಡ್-19 ನಿಯಂತ್ರಿಸಲು – “ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಬೆಂಗಳೂರಿಗೆ ಹೋಗುವ-ಬರುವ ಬಸ್‌ಗಳೂ ಸ್ಥಗಿತ” : ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ

BI ಬಿಜಾಪುರ : ಕೋವಿಡ್-19 ಮುನ್ನೆಚ್ಚರಿಕೆಯಾಗಿ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಬೆಂಗಳೂರಿಗೆ ಹೋಗುವ ಮತ್ತು ಆಗಮಿಸುವ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ಹಾಗೂ ಪ್ರಯಾಣಿಕರನ್ನು ಕರೆದೊಯ್ಯುವ ಎಲ್ಲ ರೀತಿಯ ವಾಹನಗಳನ್ನು ರವಿವಾರ ಸಂಜೆಯಿಂದ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಕೋವಿಡ್ -19 ಅಪಾಯಕಾರಿ ರೀತಿಯಲ್ಲಿ ಹರಡುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಹಾರಾಷ್ಟ್ರ ಮತ್ತು ಕಲಬುರ್ಗಿಗೆ ಪ್ರಯಾಣಿಸುವ ಬಸ್‌ಗಳನ್ನು ಈಗಾಗಲೇ ರದ್ದುಪಡಿಸಲಾಗಿದೆ. ಅದರಂತೆ ದಿನಾಂಕ 22-03-2020 ರ ಸಂಜೆಯಿಂದ ಬೆಂಗಳೂರಿಗೂ ಹೋಗುವ ಮತ್ತು ಬರುವ ಬಸ್‌ಗಳನ್ನು ಮುಂದಿನ ಆದೇಶದವರೆಗೆ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.

ರವಿವಾರದಂದು ಜನತಾ ಕರ್ಫ್ಯೂ ಸ್ವಯಂ ಅನುಸರಣೆ ಕುರಿತು ಈಗಾಗಲೇ ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಗಿದ್ದು, ವೈಜ್ಞಾನಿಕವಾಗಿ ಒಂದು ದಿನ ಕೋವಿಡ್-19 ವೈರಸ್‌ಗೆ ನಿಯಂತ್ರಣ ಹೇರುವ ಮೂಲಕ ಇದರ ವಿಸ್ತಾರ ತಡೆಗಟ್ಟಲು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಜಿಲ್ಲೆಯ ವಿವಿಧ ಸಂಘ, ಸಂಸ್ಥೆಗಳು, ಅಂಗಡಿ ಮಾಲೀಕರು ಸ್ವಯಂ ಪ್ರೇರಣೆಯಿಂದ ಈ ಕರ್ಫ್ಯೂಗೆ ಬೆಂಬಲ ನೀಡಿದ್ದು, ಅಗತ್ಯ ವಸ್ತುಗಳನ್ನು ಹೊರತುಪಡಿಸಿ ವಿಶೇಷವಾಗಿ ಔಷಧಿ ಅಂಗಡಿ, ಹಾಲು ಹಾಗೂ ಪತ್ರಿಕೆಗಳ ಸರಬರಾಜುಗೆ ಯಾವುದೇ ಅಡೆತಡೆ ಇರುವುದಿಲ್ಲ. ಅದರಂತೆ ಜಿಲ್ಲಾಸ್ಪತ್ರೆಯಲ್ಲಿ, ಆಸ್ಪತ್ರೆಗಳ ತುರ್ತು ಸೇವೆಗೆ ಯಾವುದೇ ನಿರ್ಬಂಧನೆ ಇರುವುದಿಲ್ಲ ಎಂದು ಅವರು ತಿಳಿಸಿದರು.

ಜನತಾ ಕರ್ಫ್ಯೂಗೆ ಪಕ್ಷಬೇಧ ಮರೆತು ಸಾರ್ವಜನಿಕರೆಲ್ಲರೂ ಸ್ಪಂದನೆ ನೀಡುವ ಮೂಲಕ ಕೋವಿಡ್-19 ನಿಯಂತ್ರಣಕ್ಕೆ ನೆರವಾಗಲಿದ್ದಾರೆ ಎಂದು ತಿಳಿಸಿರುವ ಅವರು ವಿಜಯಪುರ ಜಿಲ್ಲೆಗೆ ಇಂದು ಪೂರ್ವಾಹ್ನದವರೆಗೆ 272 ಜನರು ವಿದೇಶದಿಂದ ಆಗಮಿಸಿರುವ ಬಗ್ಗೆ ವರದಿಯಾಗಿದೆ. 20 ಜನ 28 ದಿನದ ಹೋಮ್‌ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. 81 ಜನ 15 ರಿಂದ 28 ದಿನಗಳ ಅವಧಿಯಲ್ಲಿ ಹಾಗೂ 171 ಜನ ಹೋಮ್‌ಕ್ವಾರಂಟೈನ್ ಅವಧಿಯಲ್ಲಿದ್ದಾರೆಂದು ಅವರು ತಿಳಿಸಿದರು.

ಕೋವಿಡ್-19 ಇದರ ಮುನ್ನೆಚ್ಚರಿಕೆಯಾಗಿ ಎನ್ 95 ಹಾಗೂ ಥ್ರಿ ಲೇಯರ್ ಮಾಸ್ಕ್ಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಅದರಂತೆ ಸ್ಯಾನಿಟೈಜರ್‌ಗಳ ಬಗ್ಗೆಯೂ ಅವಶ್ಯಕ ಕ್ರಮ ಕೈಗೊಳ್ಳುವಂತೆ ಹಾಗೂ ರವಿವಾರದಂದು ಇರುವಂತಹ ಜನತಾ ಕರ್ಫ್ಯೂ ಅಂಗವಾಗಿ ಪ್ರತಿಯೊಂದು ಖಾನಾವಳಿ, ರೆಸ್ಟೊರೆಂಟ್, ಹೊಟೇಲ್‌ಗಳ ಮೂಲಕ ಸಾರ್ವಜನಿಕರಿಂದ ಪಾರ್ಸಲ್ ಪಡೆಯಲು ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಇಂದು ಸಂಜೆ 4.00 ಗಂಟೆಯಿAದ ಎಮ್.ಎಸ್.ಐ.ಎಲ್ ಹಾಗೂ ವೈನ್‌ಶಾಪ್‌ಗಳ ಮೂಲಕ ಪಾರ್ಸಲ್ ಮೂಲಕ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಅವಕಾಶ ಕಲ್ಪಿಸಲಾಗುತ್ತದೆ. ವಾಪಾಸಾಗುವ ಯಾತ್ರಾರ್ಥಿಗಳಿಗೆ ಕೋವಿಡ್-19 ಮುನ್ನೆಚ್ಚರಿಕೆ ಕುರಿತು ಮಾಹಿತಿ ಒದಗಿಸಬೇಕು. ಸೋಲಾಪೂರ, ಕಲಬುರ್ಗಿ ಹಾಗೂ ಬಾಗಲಕೋಟಗಳಿಂದ ಆಗಮಿಸುವ ಪ್ರಯಾಣಿಕರ ಒಳಗೊಂಡ ಬಸ್‌ಗಳ ಮೇಲೆ ತೀವ್ರ ನಿಗಾಕ್ಕೆ ಜಿಲ್ಲೆಯ ಪ್ರವೇಶ ಭಾಗಗಳಲ್ಲಿ ಸಿಸಿ ಕ್ಯಾಮರಾಗಳೊಂದಿಗೆ ಪೊಲೀಸ್ ಮತ್ತು ಇತರೆ ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸಲು ಸಹ ಚಿಂತನೆಯಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ವಿಶ್ವದಾದ್ಯಂತ ತಲ್ಲಣಗೊಳಿಸಿರುವ ಕೋವಿಡ್-19 ಕುರಿತಂತೆ ಸಾಮಾಜಿಕ ಜಾಲತಾಣಗಳಾದ ವಾಟ್ಸ್ಪ್, ಫೇಸ್‌ಬುಕ್, ಇನ್ಸ್ಟಾಗ್ರಾಮ್, ಟ್ವೀಟರ್ ಸೇರಿದಂತೆ ಇನ್ನಿತರ ಸಾಮಾಜಿಕ ಮಾಧ್ಯಮಗಳ ಮೂಲಕ ಯಾವುದೇ ರೀತಿಯ ಸುಳ್ಳುಸುದ್ಧಿ ಬಿತ್ತರಿಸುವುದಾಗಲಿ ಅಥವಾ ಹಬ್ಬಿಸುವದಾಗಲಿ ಮಾಡಿದಲ್ಲಿ ಅಂತಹವರ ವಿರುದ್ಧ ಕಾನೂನಿನ ರೀತ್ಯ ಸೂಕ್ತಕ್ರಮ ಕೈಗೊಳ್ಳಲಾಗುವುದು. ಅದರಂತೆ ಕೋವಿಡ್-19 ಕುರಿತಂತೆ ಯಾವುದೇ ರೀತಿಯ ವದಂತಿಯಂತಹ ಸುದ್ಧಿಗಳನ್ನು ಸಹ ಸಾರ್ವಜನಿಕರು ನಂಬದಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಜನತಾ ಕರ್ಫ್ಯೂ ಅಂಗವಾಗಿ ವಿವಿಧ ರೆಸ್ಟೊರೆಂಟ್, ಹೊಟೇಲ್, ಖಾನಾವಳಿಗಳಿಂದ ಪಾರ್ಸಲ್ ಮೂಲಕ ಗ್ರಾಹಕರಿಗೆ ಸೇವೆ ಕಲ್ಪಿಸಬೇಕು. ಇದನ್ನು ಉಲ್ಲಂಘಿಸಿದ್ದಲ್ಲಿ ಸಂಬಂಧಪಟ್ಟ ಹೊಟೇಲ್ ಲೈಸೆನ್ಸ್ ಸಹ ರದ್ದತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಸಿದ್ಧಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಮುಕುಂದ ಗಲಗಲಿ, ಜಿಲ್ಲಾಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ ಗಂಗಾಧರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!