ಕೊರೊನಾ : ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಶಾಸಕ ಎಂ.ಬಿ.ಪಾಟೀಲ್‍ರವರ ಸಭೆ

BI ಬಬಲೇಶ್ವರ : ಕೊವಿಡ್-19 ಕೊರೊನಾ ಕಾಯಿಲೆ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಇಂದು ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡಿರುವ ಮುನ್ನಚ್ಚರಿಕೆ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಸ್ತೃತ ಸಭೆ ಜರುಗಿಸಿದರು.

ಬಿ.ಎಲ್.ಡಿ.ಇ ಸಂಸ್ಥೆ ಆಡಳಿತ ಕಛೇರಿಯಲ್ಲಿ ನಡೆದ ಇಂದಿನ ಸಭೆಯಲ್ಲಿ ಬಬಲೇಶ್ವರ ಹಾಗೂ ತಿಕೋಟಾ ತಾಲೂಕುಗಳ ಎಲ್ಲಾ ಹಳ್ಳಿಗಳ ಮಾಹಿತಿ ಪಡೆದ ಎಂ.ಬಿ.ಪಾಟೀಲ್‍ರವರು ಹೊರದೇಶಗಳಲ್ಲದೇ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಗೆ ದುಡಿಯಲು ಹೋಗಿರುವ ನೂರಾರು ಕಾರ್ಮಿಕರು ಸ್ವ ಗ್ರಾಮಗಳಿಗೆ ಮರಳಿದ್ದು, ಆರೋಗ್ಯದ ದೃಷ್ಠಿಯಿಂದ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ಆರೋಗ್ಯ ತಪಾಸಣೆಗೆ ಒಳಪಡಬೇಕು. ಈ ಕುರಿತು ಗ್ರಾಮಸ್ಥರು ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳು ಹೆಚ್ಚಿನ ಗಮನ ವಹಿಸಬೇಕು ಎಂದು ತಾಲೂಕಾ ಆರೋಗ್ಯ ಅಧಿಕಾರಿ ಡಾ.ಕವಿತಾ ದೊಡಮನಿ ಅವರಿಗೆ ಹೇಳಿದರು.

ರೈತರ ಕೃಷಿ ಉತ್ಪನ್ನಗಳು, ತೋಟಗಾರಿಕೆ ಬೆಳೆಗಳನ್ನು ಶೇಖರಿಸಲು ಜಿಲ್ಲೆಯಲ್ಲಿರುವ ಕೋಲ್ಡ್‍ಸ್ಟೋರೆಜ್‍ಗಳು ಸಾಕಾಗುವದಿಲ್ಲ. ಹೊರ ರಾಜ್ಯಗಳಿಗೆ ಸಾಗಿಸುವದು ಅನಿವಾರ್ಯವಾಗಿರುವ ಕಾರಣ ಆ ರೈತರಿಗೆ ಪೊಲೀಸ್ ಇಲಾಖೆಯಿಂದ ಬೆಂಗಳೂರಿನಲ್ಲಿ ನೀಡಿರುವಂತೆ ಪಾಸ್‍ಗಳನ್ನು ನೀಡಬೇಕು. ಹೊರರಾಜ್ಯಗಳಿಗೆ, ಹೊರಜಿಲ್ಲೆಗಳಿಗೆ ಹೋಗಿ ಬರುವ ಚಾಲಕರು, ಕ್ಲಿನರ್ ಹಾಗೂ ರೈತರು ವಾಪಸ್ ಬರುವಾಗ ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಪಡಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಡಿಎಸ್ಪಿ ಲಕ್ಷ್ಮೀನಾರಾಯಣ ಅವರಿಗೆ ಸೂಚಿಸಿದರು.

ರೈತರಿಗೆ ಕೃಷಿ ಬೀಜ, ಗೊಬ್ಬರ, ಔಷಧ ಖರೀದಿಗೆ ಅನಕೂಲವಾಗುವಂತೆ ಫರ್ಟಿಲೈಸರ್ ಅಂಗಡಿಗಳನ್ನು ತೆರೆಯುವಂತೆ ಕೃಷಿ ಅಧಿಕಾರಿ ಹನಮಂತ ಪಡಸಲಗಿ, ತೋಟಗಾರಿಕೆ ಅಧಿಕಾರಿ ಶಾಲಿನಿ ತಳಕೇರಿ ಅವರಿಗೆ ಸೂಚಿಸಿದರು.

ಮನೆ-ಮನೆ ತಪಾಸಣೆಗೆ ತೆರಳುವ ಅಂಗನವಾಡಿ ಸಿಬ್ಬಂದಿ, ಆಶಾ ಕಾರ್ಯಕರ್ತರಿಗೆ ಮಾಸ್ಕ್ ಸಿಗುತ್ತಿಲ್ಲ ಎಂಬ ಅಧಿಕಾರಿಗಳ ಅಳಲಿಗೆ ಸ್ಪಂಧಿಸಿದ ಎಂ.ಬಿ.ಪಾಟೀಲ್‍ರು ಬಿ.ಎಲ್.ಡಿ.ಇ ಆಸ್ಪತ್ರೆಯಿಂದ ಎಲ್ಲಾ ಆರೋಗ್ಯ ಸಿಬ್ಬಂದಿಗೆ ಈ ಕೂಡಲೇ ಮಾಸ್ಕ್ ಒದಗಿಸುವದಾಗಿ ತಿಳಿಸಿದರು.

ತಿಕೋಟಾ ತಾಲೂಕಿನಲ್ಲಿ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಪ್ರತಿ ಪಂಚಾಯತ್ ಸಿಬ್ಬಂದಿಗಳಿಗೆ ಸೈನಿಟೈಸರ್‍ಗಳನ್ನು ವೈಯಕ್ತಿಕವಾಗಿ ನೀಡುವುದಾಗಿ ತಿಳಿಸಿದ ಎಂ.ಬಿ.ಪಾಟೀಲ್‍ರು “ಎಲ್ಲರೂ ಮಾಸ್ಕ್ ಧರಿಸುವ ಅಗತ್ಯ ಇಲ್ಲ. ಆರೋಗ್ಯ ಕಾರ್ಯಕರ್ತರು, ವೈದ್ಯರು, ರೋಗಿಗಳು, ಶಂಕಿತರು ಈ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕಿದೆ. ಆತಂಕಕ್ಕೊಳಗಾಗಿ ಮಾಸ್ಕ್‍ಗಳನ್ನು ಹೆಚ್ಚು ಖರೀದಿಸಿ, ಬಳಸುತ್ತಿರುವದರಿಂದ ದೇಶದೆಲ್ಲಡೆ ಗುಣಮಟ್ಟದ ಮಾಸ್ಕ್‍ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿಲ್ಲ. ಕಾಳಸಂತೆಕೋರರು, ನಕಲಿ ಮಾಸ್ಕ್‍ಗಳನ್ನು ತಯಾರಿಸಿ, ಮಾರುತ್ತಿದ್ದಾರೆ. ನಿಜವಾದ ಮಾಸ್ಕ್ ದೊರೆಯದೆ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ವೈದ್ಯರು ರೇನ್‍ಕೊಟ್ ಧರಿಸಿ, ಹೆಲ್ಮೆಟ್ ಹಾಕಿ ತಪಾಸಣೆ ಮಾಡುತ್ತಿದ್ದಾರೆ. ಈ ಕುರಿತು ನಿನ್ನೆ ಎನ್‍ಡಿಟಿವಿ ಯಲ್ಲಿ ವರದಿ ಪ್ರಸಾರವಾಗಿದೆ ಎಂದು ಶಾಸಕ ಎಂ.ಬಿ.ಪಾಟೀಲ್ ಸಭೆಗೆ ತಿಳಿಸಿ, ನನ್ನ ಕ್ಷೇತ್ರದಲ್ಲಿ ಹಲವಾರು ಜನ ಮಾಸ್ಕ್ ನೀಡುವಂತೆ ವಿನಂತಿಸಿದ್ದು, ಆದರೆ ಎಲ್ಲರೂ ಇದನ್ನು ಧರಿಸುವ ಅಗತ್ಯವಿಲ್ಲ. ಗುಣಮಟ್ಟದ ಅಸಲಿ ಮಾಸ್ಕ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಇದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ಎಂದರು.

ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಯಾವುದೇ ಹಳ್ಳಿಗಳಲ್ಲಿ ಬೇಸಿಗೆ ಬರುತ್ತಿರುವದರಿಂದ ಶುದ್ಧ ಕುಡಿಯುವ ನೀರಿನ ತೊಂದರೆ ಆಗದಂತೆ ತಹಶೀಲ್ದಾರಗಳು ನೋಡಿಕೊಳ್ಳಬೇಕು ಎಂದ ಎಂ.ಬಿ.ಪಾಟೀಲ್‍ರು ಬೆಳ್ಳುಬ್ಬಿ ಸೇರಿದಂತೆ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯ ಆಗಿರುವದಕ್ಕೆ ಹೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲೆಯ 113ಖರೀದಿ ಕೇಂದ್ರಗಳಿಂದ 7,56,036 ಕ್ವಿಂಟಾಲ್ ತೋಗರಿ ಖರೀದಿಸಿದ್ದು, ರೈತರಿಗೆ ಬಿಡುಗಡೆಯಾಗಬೇಕಿದ್ದ 461ಕೋಟಿ ಮೊತ್ತದಲ್ಲಿ ಕೇವಲ 110ಕೋಟಿ ಮಾತ್ರ ಬಿಡುಗಡೆಯಾಗಿದೆ. ಬಾಕಿ 351ಕೋಟಿ ನಮ್ಮ ಜಿಲ್ಲೆಗೆ ಬಿಡುಗಡೆಯಾದರೆ ರೈತರಿಗೆ ಹಣಕಾಸಿನ ಅನಕೂಲವಾಗುತ್ತದೆ. ಈ ಕುರಿತು ವಿಶೇಷ ಕಾಳಜಿ ವಹಿಸಿ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲರಿಗೆ ದೂರವಾಣಿ ಮುಖಾಂತರ ತಿಳಿಸಿದರು.

ತಿಕೋಟಾ ತಹಶೀಲ್ದಾರ ಸಂತೋಷ ಮ್ಯಾಗೇರಿ, ಬಬಲೇಶ್ವರ ತಹಶೀಲ್ದಾರ ಮಲ್ಲಿಕಾರ್ಜುನ ಅರಕೇರಿ, ಸಿಪಿಐ ಮಹಾಂತೇಶ ಧ್ಯಾಮಣ್ಣವರ, ಪಿಎಸೈ ಸಂಜಯ ಕಲ್ಲೂರ, ಸಿಡಿಪಿಒ ಗೀತಾ ಗುತ್ತರಗಿಮಠ ಮತ್ತಿತರರು ಸಭೆಯಲ್ಲಿ ತಮ್ಮ ವ್ಯಾಪ್ತಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳನ್ನು ಶಾಸಕರ ಮುಂದೆ ಚರ್ಚಿಸಿದರು.

error: Content is protected !!