ಕೆರೆ ತುಂಬುವ ಯೋಜನೆಗಾಗಿ 20 ಕೋಟಿ ರೂಪಾಯಿ ಮಂಜೂರು : ಶಾಸಕ ಸೋಮನಗೌಡ ಪಾಟೀಲ ಸಾಸನೂರ

BI ಬಿಜಾಪುರ : ದೇವರಹಿಪ್ಪರಗಿ : ನೀರಾವರಿಗಾಗಿ ಪ್ರಥಮಾಧ್ಯತೆ ನೀಡಿದ್ದು, ದೇವರಹಿಪ್ಪರಗಿ ಮತಕ್ಷೇತ್ರದಲ್ಲಿನ ಕೆರೆ ತುಂಬುವ ಯೋಜನೆಗಾಗಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ವತಿಯಿಂದ ಸುಮಾರು 20 ಕೋಟಿ ರೂಪಾಯಿ ಮಂಜೂರಾಗಿದ್ದು ಕೆಲ ದಿನಗಳಲ್ಲಿ ಟೆಂಡರ್ ಪ್ರಕ್ರೀಯೆ ಪ್ರಾರಂಭವಾಗಲಿದೆ ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ತಿಳಿಸಿದ್ದಾರೆ.
ಶನಿವಾರ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಮಗ್ರ ನೀರಾವರಿ ನಮ್ಮ ಕನಸಾಗಿದ್ದು ಸುಮಾರು 1 ವರ್ಷ ದಿಂದ ಕ್ಷೇತ್ರದ ಕೆರೆಗಳನ್ನು ತುಂಬಿಸುವ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಸತತ ಪ್ರಯತ್ನ ಮಾಡುತ್ತಿದ್ದು ಹುಣಶ್ಯಾಳ, ಕುದರಗೊಂಡ, ದೇವರಹಿಪ್ಪರಗಿ ಹಾಗೂ ಹೂವಿನ ಹಿಪ್ಪರಗಿ (ಅಗಸಬಾಳ) ಕೆರೆಗಳಿಗೆ ಅನುದಾನ ಮಂಜೂರಾಗಿದೆ. ಸುಮಾರು 6 ತಿಂಗಳ ಸತತ ಪ್ರಯತ್ನದ ಫಲವಾಗಿ ಹೂವಿನ ಹಿಪ್ಪರಗಿ (ಅಗಸಬಾಳ) ಕೆರೆ ತುಂಬವ ಯೋಜನೆಗಾಗಿ 8.70 ಕೋಟಿ, ಹುಣಶ್ಯಾಳ ಕೆರೆ ತುಂಬವ ಯೋಜನೆ ಸಲುವಾಗಿ 5.02 ಕೋಟಿ, ಹಾಗೇಯೇ ಕುದರಗೊಂಡ ಕೆರೆ ತುಂಬುವ ಯೋಜನೆಗಾಗಿ 4.58 ಕೋಟಿ, ದೇವರಹಿಪ್ಪರಗಿ ಸೈಟ್-3ರ ಕೆರೆ ತುಂಬುವ ಯೋಜನೆಗಾಗಿ 1.40 ಕೋಟಿ ರೂಪಾಯಿ ಮಂಜೂರಾಗಿದೆ.
ಈಗಾಗಲೇ ಕ್ಷೇತ್ರದ 28 ಕೆರೆಗಳಲ್ಲಿ ಸುಮಾರು 23 ಕೆರೆಗಳಿಗೆ ಕಾಲುವೆಗಳ ಮುಖಾಂತರ ನೀರು ಹರಿಸಿ ಅನುಕೂಲ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಆದಷ್ಟು ಬೇಗನೆ ಸಾದ್ಯವಾದ ಮಟ್ಟಿಗೆ ಎಲ್ಲ ಕೆರೆಗಳನ್ನು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ಕುಡಿಯುವ ನೀರಿನ ಸಲುವಾಗಿ ವಿಶೇಷ ಆಸಕ್ತಿ ವಹಿಸಿ ಕ್ರಮ ವಹಿಸಲಾಗಿದೆ.
ಇದರ ಜೊತೆಯಲ್ಲಿ ಕ್ಷೇತ್ರದ ತುಂಬೆಲ್ಲ ಕುಡಿಯುವ ನೀರಿಗಾಗಿ ಸಾಕಷ್ಟು ಅನುದಾನ ಮಂಜೂರಾಗಿದ್ದು, ಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದಲ್ಲಿ ಬಹುಹಳ್ಳಿಗಳ ಕುಡಿಯುವ ನೀರಿನ ಯೋಜನೆ ಮೂಲಕ ಪರಿಹಾರ ಕ್ರಮ ಕೈಕೊಳ್ಳಲಾಗುವುದು. ಬಹುಹಳ್ಳಿಗಳ ಕುಡಿಯುವ ನೀರಿನ ಯೋಜನೆಗಾಗಿ ಸುಮಾರು 100 ಕೋಟಿ ರೂ. ಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲವೇ ದಿನಗಳಲ್ಲಿ ಮಂಜೂರಾತಿ ದೊರೆಯುವ ವಿಶ್ವಾಸವಿದೆ. ಈಗ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಿದ್ದು, ಶಾಸ್ವತ ಕುಡಿಯುವ ನೀರಿನ ಅನುಕೂಲಕ್ಕಾಗಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇಡೀ ಕ್ಷೇತ್ರವು ಮೂರು ತಾಲೂಕುಗಳಿಂದ ಕೂಡಿದ್ದು, ಪ್ರಗತಿಗೋಸ್ಕರ ಶ್ರಮಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆಗಳ ಸುಧಾರಣೆ, ನೀರಾವರಿಗಾಗಿ ಹೆಚ್ಚಿನ ಸಮಯ ಮೀಸಲಿಟ್ಟು ಶ್ರಮಿಸುತ್ತೇನೆ. ಸಾರ್ವಜನಿಕರು ಅಭಿವೃದ್ಧಿ ಯೋಜನೆಯಲ್ಲಿ ಸಹಕಾರ ನೀಡಿ ಕ್ಷೇತ್ರದ ಪ್ರಗತಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ದೇವರಹಿಪ್ಪರಗಿ ಮಂಡಲ ಬಿಜೆಪಿ ಅಧ್ಯಕ್ಷ ಭೀಮನಗೌಡ ಸಿದರೆಡ್ಡಿ, ಬಾಬುಗೌಡ ಬಿರಾದಾರ, ರಾಮನಗೌಡ ನಾವದಗಿ, ಮೋಹನಗೌಡ ಹಿರೇಗೌಡ ಶೇಕರಗೌಡ ಪಡೇಕನೂರ ಸೇರಿದಂತೆ ಮತ್ತೀತರರು ಇದ್ದರು.

error: Content is protected !!