ಕಾಂಗ್ರೆಸ್ ಪಕ್ಷವನ್ನು ಬೇರುಮಟ್ಟದಿಂದ ಪುನರ್ ಸಂಘಟಿಸುವ ಅಗತ್ಯತೆ ಇದೆ : ಶಾಸಕ ಎಂ.ಬಿ.ಪಾಟೀಲ್

BI ಬಿಜಾಪುರ : ಕಾಂಗ್ರೆಸ್ ಪಕ್ಷವನ್ನು ಬೇರುಮಟ್ಟದಿಂದ ಪುನರ್ ಸಂಘಟಿಸುವ ಅಗತ್ಯತೆ ಇದೆ ಆ ಜವಾಬ್ದಾರಿಯನ್ನು ಪಕ್ಷದ ಕಾರ್ಯಕರ್ತರು ತೆಗೆದುಕೊಂಡು ತಳಮಟ್ಟದಿಂದ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಲು ಮುಂದಾಗಬೇಕು ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಹೇಳಿದರು.

ವಿಜಯಪುರದಲ್ಲಿ ನಿನ್ನೆ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ದೀರ್ಘವಾದ ಇತಿಹಾಸವಿದೆ. ಭಾರತದ ವಿವಿಧತೆಯನ್ನು, ಜಾತ್ಯಾತೀತ ತಳಹದಿಯ ಮೇಲೆ ಅಖಂಡತೆಯನ್ನು ಸಾರುವ ಕಾಂಗ್ರೆಸ್ ಪಕ್ಷ ಸಂವಿಧಾನಗಳ ಆಶಯಗಳಿಗೆ ಬದ್ಧವಾಗಿರುವ ಪಕ್ಷವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ, ವಿರೋಧ ಪಕ್ಷಗಳಲ್ಲಿ ಕಾರ್ಯನಿರ್ವಹಿಸುವದು ಅನಿವಾರ್ಯ. ಕಾಂಗ್ರೆಸ್ ಪಕ್ಷಕ್ಕೆ ಸದ್ಯದ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಇದೆ. ಪಕ್ಷದ ಕಾರ್ಯಕರ್ತರು ತಳಮಟ್ಟದಿಂದಲೇ ಪುನರ್ ಸಂಘಟಿಸಲು ಮುಂದಾಗಬೇಕು ಎಂದರು.

ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮಾಡಿರುವ ಜನಪರ ಕಾರ್ಯಗಳು ಮತದಾರರ ಮೆಚ್ಚುಗೆಗೆ ಪಾತ್ರವಾಗಿವೆ. ಆದರೆ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳು ಕೆಳಹಂತದ ದುರ್ಬಲರಿಗೆ, ಅರ್ಹರಿಗೆ ಮಾತ್ರ ದೊರೆಯಬೇಕು ಈ ಕುರಿತು ಕಾರ್ಯಕರ್ತರು ಜಾಗೃತಿ ವಹಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್, ಮಾಜಿ ಶಾಸಕ ವಿಠ್ಠಲ ಕಟಕದೊಂಡ, ಈರಗೊಂಡ ಬಿರಾದಾರ, ಸಿದ್ದು ಗೌಡನವರ, ನಂದಿ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಕುಮಾರ ದೇಸಾಯಿ, ತಮ್ಮಣ್ಣ ಹಂಗರಗಿ, ಸೋಮನಾಥ ಬಾಗಲಕೋಟ, ವಿ.ಎಸ್.ಪಾಟೀಲ್, ಬಸವರಾಜ ದೇಸಾಯಿ, ಅರ್ಜುನ ರಾಠೋಡ, ಸಿದ್ದಣ್ಣ ಸಕ್ರಿ, ಬಾಪುಗೌಡ ಪಾಟೀಲ್, ಸಂಗಮೇಶ ಬಬಲೇಶ್ವರ ಸೇರಿದಂತೆ ನೂರಾರು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!