ಉನ್ನತ ಮಟ್ಟದ ನೂತನ ತಾಂತ್ರಿಕ ಕಾಲೇಜ್ ನಿರ್ಮಾಣಕ್ಕೆ ಭೂಮಿಪೂಜೆ

BI ಬಿಜಾಪುರ : ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ನೂತನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್‌ನ್ನು ಸ್ಥಾಪಿಸಲಾಗುತ್ತಿದೆ ಎಂದು ಬಸವನಬಾಗೇವಾಡಿ ಶಾಸಕರು ಹಾಗೂ ಮಾಜಿ ಸಚಿವರಾದ ಶಿವಾನಂದ ಎಸ್.ಪಾಟೀಲ ಅವರು ಹೇಳಿದರು.
ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ 4 ಎಕರೆ ವಿಸ್ತೀರ್ಣದ ವಿಶಾಲವಾದ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗಾಗಿ ಉನ್ನತ ಮಟ್ಟದ ನೂತನ ತಾಂತ್ರಿಕ ಕಾಲೇಜಿನ ಅಡಿಗಲ್ಲು ಸಮಾರಂಭಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೊಲ್ಹಾರ ಪಟ್ಟಣ ಸರ್ವಾಂಗೀಣ ಅಭಿವೃದ್ದಿಗಾಗಿ ಈಗಾಗಲೇ ಪಟ್ಟಣದಲ್ಲಿ 24/7 ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿಗಳನ್ನು ಅಭಿವೃದ್ದಿಪಡಿಸಲಾಗುತ್ತದೆ. ಈಗಾಗಲೇ ಸುಮಾರು 50 ಕೋಟಿ ರೂ. ಮಂಜೂರಾಗಿದ್ದು ನಗರದ ಎಲ್ಲ ರಸ್ತೆಗಳನ್ನು ಅಭಿವೃದ್ದಿಪಡಿಸಲು ಉಪಯೋಗಿಸಲಾಗುವುದು. ತಾಂತ್ರಿಕ ಕಾಲೇಜು ಸ್ಥಾಪನೆಯಿಂದ ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ತಾಲೂಕಿನ ಸುತ್ತಮುತ್ತಲು ಸಕ್ಕರೆ ಕಾರ್ಖಾನೆ, ಎನ್‌ಟಿಪಿಸಿ ಇದ್ದು ಹಾಗೂ ಇತರೆ ಸರ್ಕಾರಿ ಇಲಾಖೆಗಳಲ್ಲಿ ತ್ವರಿತವಾಗಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅನುಕೂಲವಾಗಲಿದೆ. ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಕೊಲ್ಹಾರದಿಂದ ಗರಸಂಗಿ ಮಾರ್ಗವಾಗಿ ರೋಣಿಹಾಳ ಹೆದ್ದಾರಿವರೆಗಿನ ರಸ್ತೆ ಅಭಿವೃದ್ದಿಪಡಿಸಲಾಗುತ್ತದೆ. 15 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಉರ್ದು ಶಾಲೆಯ ಕಂಪೌಂಡನ್ನು ನಿರ್ಮಿಸಲಾಗುತ್ತದೆ. ಒಟ್ಟಾರೆ ಕೊಲ್ಹಾರ ಪಟ್ಟಣವು ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಅತಿ ದೊಡ್ಡ ಮುಳುಗಡೆ ಗ್ರಾಮವಾಗಿದ್ದು, ಅಭಿವೃದ್ದಿಪಡಿಸಿ ಒಂದು ಮಾದರಿ ಪಟ್ಟಣವಾಗಿ ಅಭಿವೃದ್ದಿಪಡಿಸಲಾಗುವುದು ಎಂದು ಹೇಳಿದರು.
ಬಳೂತಿ ಹಣಮಾಪುರ ರಸ್ತೆಯನ್ನು 7.80 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುತ್ತದೆ. ಈಗಾಗಲೇ ಅನುದಾನ ಲಭ್ಯವಾಗಿದೆ ಎಂದು ಅವರು ಹೇಳಿದರು.
ಪಟ್ಟಣ ಪಂಚಾಯತ್ ಸದಸ್ಯರಾದ ಅಲ್ಲಾಬಕ್ಷ ಬಿಜಾಪುರ ಅವರು ಮಾತನಾಡಿ, ಶಾಸಕರು ಕೊಲ್ಹಾರ ಪಟ್ಟಣದ ಅಭಿವೃದ್ದಿಗಾಗಿ ಹಗಲು ಇರುಳು ಶ್ರಮಿಸುತ್ತಿದ್ದಾರೆ. ಅವರ ಅವಧಿಯಲ್ಲಿ ಪಟ್ಟಣದಲ್ಲಿ ಹೈಸ್ಕೂಲ್, ಡಿಗ್ರಿ ಕಾಲೇಜ್ ಮಂಜೂರು ಮಾಡಿಸಿದ್ದಾರೆ. ಪಟ್ಟಣದ ಮಕ್ಕಳು ಬೇರೆ ಕಡೆ ವಿದ್ಯಾಭ್ಯಾಸಕ್ಕಾಗಿ ಹೋಗುವುದನ್ನು ತಪ್ಪಿಸಲು ಈಗ ತಾಂತ್ರಿಕ ಕಾಲೇಜ್‌ನ್ನು ಸಹ ಇಲ್ಲಿ ತಂದು ಇಂದು ಭೂಮಿ ಪೂಜೆ ನೆರವೇರಿಸಿದ್ದಾರೆ. ಇಲ್ಲಿಯ ಮಕ್ಕಳು ಕೂಡ ಉನ್ನತ ಶಿಕ್ಷಣ ಪಡೆದು ಹೆಚ್ಚು ಹೆಚ್ಚು ಉದ್ಯೋಗ ಒದಗಿಸಿಕೊಳ್ಳಬೇಕೆಂದು ಹೇಳಿದರು.
ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಆರ್.ಬಿ.ಪವಾರ ಅವರು ಮಾತನಾಡಿ, ಪಟ್ಟಣದ ವಿದ್ಯಾರ್ಥಿಗಳಿಗಾಗಿ ಈ ತಾಂತ್ರಿಕ್ ಕಾಲೇಜಿನಲ್ಲಿ ಇಂಜಿನೀಯರಿಂಗ್, ಮೆಕ್ಯಾನಿಕಲ್ ಇಂಜಿನೀಯರಿಂಗ್, ಸಿವ್ಹಿಲ್ ಇಂಜಿನೀಯರಿಂಗ್ ಹಾಗೂ ವಿದ್ಯುತ್ ಇಂಜಿನೀಯರಿಂಗ್ ಒಟ್ಟು 4 ವಿಭಾಗಗಳನ್ನು ಸ್ಥಾಪಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕಲ್ಲಿನಾಥ ಮಹಾಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ.ಸಿ.ಪಟ್ಟಣಶೆಟ್ಟಿ, ಸಂತೋಷ ಕರಿಗಾರ, ರಫೀಕ ಪಕಾಲಿ, ಪ.ಪಂ.ಸದಸ್ಯರಾದ ಬಾಲಗೊಂಡ ಹಾಗೂ ಸದಸ್ಯರು, ಸಿ.ಪಿ.ಪಾಟೀಲ, ಭರತ ಅಗರವಾಲ, ಶೇಖರಗೌಡ ಪಾಟೀಲ, ತಹಶೀಲ್ದಾರ ಎಂ.ಎ.ಎಸ. ಬಾಗವಾನ, ಪಟ್ಟಣ ಪಂಚಾಯತ್ ಸದಸ್ಯರು, ಗ್ರಾಮದ ಹಿರಿಯರು, ಶಾಲಾ ಮಕ್ಕಳು ಹಾಗೂ ಇತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ಆರ್.ಬಿ.ಪವಾರ ವಂದಿಸಿದರು.

error: Content is protected !!