ಆಯುರ್ವೇದ ವೈದ್ಯ ಪದ್ದತಿ ವಿಶ್ವದಲ್ಲಡೆ ಮಾನ್ಯವಾಗುವತ್ತಿದೆ : ಡಾ.ಯು.ಕೆ ಕೃಷ್ಣ

BI ಬಿಜಾಪುರ : ಜಗತ್ತಿನ ವೈದ್ಯಕೀಯ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಆಯುರ್ವೇದ ವೈದ್ಯ ಪದ್ದತಿ ವಿಶ್ವದಲ್ಲಡೆ ಮಾನ್ಯವಾಗುವತ್ತಿದೆ. ಆ ನಿಟ್ಟಿನಲ್ಲಿ ಭಾರತೀಯ ಆಯುರ್ವೇದ ವೈದ್ಯರು ಜಗತ್ತಿನ ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುವಲ್ಲಿ ಸನ್ನದ್ಧರಾಗಬೇಕಿದೆ ಎಂದು ಜಪಾನ, ಟೋಕಿಯೊ ನಗರದ ನಿಪ್ಪೋನ್ ಆಯುರ್ವೇದ ಸ್ಕೂಲ್ ನಿರ್ದೇಶಕ ಡಾ.ಯು.ಕೆ ಕೃಷ್ಣ ಹೇಳಿದರು.
ಬಿ.ಎಲ್.ಡಿ.ಇ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಕಳೆದ 34ವರ್ಷಗಳಿಂದ ನಾನು ಜಪಾನನಲ್ಲಿ ಆಯುರ್ವೇದ ವೈದ್ಯ ಪದ್ದತಿಯನ್ನು ಪ್ರಸಾರ ಮಾಡುತ್ತಿದ್ದು, ಅಲ್ಲಿನ ಸರ್ಕಾರ ಇದು ಭಾರತೀಯ ವೈದ್ಯ ಪರಂಪರೆಯ ಶ್ರೇಷ್ಠ ವೈದ್ಯ ಪದ್ದತಿ ಎಂದು ನಮಗೆ ಮನ್ನಣೆ ನೀಡಿಲ್ಲ. ಬದಲಾಗಿ ಆಯುರ್ವೇದ ಭವಿಷ್ಯತ್ತಿನಲ್ಲಿ ಪರ್ಯಾಯ ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಗಳಿಸುವ ಸಂಭವವಿದೆ. ಆ ಕಾರಣಕ್ಕಾಗಿ ಈಗಿನಿಂದಲೆ ಅವರು ಆಯುರ್ವೇದ ವೈದ್ಯ ಪದ್ದತಿಯನ್ನು ಪೋಷಿಸುತ್ತಿದ್ದಾರೆ ಎಂದರು.
ಆಧುನಿಕ ವೈದ್ಯ ಪದ್ದತಿಗೆ ಪರ್ಯಾಯವಾಗಿ ನಾವು ಆಯುರ್ವೇದವನ್ನು ನೋಡುವದು ಸಲ್ಲದು. ಬದಲಾಗಿ ಆಧುನಿಕ ವೈದ್ಯ ಪದ್ದತಿಗಳಲ್ಲಿ ಅಲಭ್ಯವಿರುವ ಕೆಲವು ವಿಶಿಷ್ಟ ಚಿಕಿತ್ಸೆಗಳನ್ನು ನಾವು ಆರ್ಯುವೇದದಿಂದ ಗುಣಪಡಿಸಬಹುದಾಗಿದೆ. ಈ ದೃಷ್ಠಿಯಲ್ಲಿ ನಾವು ಆಲೋಚಿಸಬೇಕಿದೆ ಎಂದರು.
ಬಿ.ಎಲ್.ಡಿ.ಇ ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಅರವಿಂದ ಪಾಟೀಲ್ ಮಾತನಾಡಿ 75ವರ್ಷ ಇತಿಹಾಸದ ಈ ಕಾಲೇಜು ಒಂದು ವಿಶ್ವವಿದ್ಯಾಲಯವನ್ನಾಗಿ ಮಾಡುವ ಕಾರ್ಯವನ್ನು ಮಾಡಿದೆ. ಹಲವಾರು ಕಾಲೇಜುಗಳ ಸ್ಥಾಪಕರು, ಪ್ರಾಚಾರ್ಯರು, ವೈದ್ಯರು ಈ ಕಾಲೇಜಿನಿಂದ ಹೊರಹೊಮ್ಮಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೂ ಆಧುನಿಕ ವೈದ್ಯ ಪದ್ದತಿ ಜ್ಞಾನ ದೊರಕಿಸುವ ನಿಟ್ಟಿನಲ್ಲಿ ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿಯೂ ಸಹ ತರಬೇತಿ ನೀಡಲಾಗುವದು ಎಂದರು.
ಮುಂದಿನ ದಿನಗಳಲ್ಲಿ ಈ ಭಾಗದ ರೋಗಿಗಳ ಅನುಕೂಲಕ್ಕಾಗಿ ಬಿ.ಎಲ್.ಡಿ.ಇ ಆಸ್ಪತ್ರೆ ವತಿಯಿಂದ ಹೊರಚಿಕಿತ್ಸಾ ಘಟಕವನ್ನು ಇಲ್ಲಿ ಆರಂಭಿಸಲಾಗುವದು ಎಂದರು.
ಡಾ.ಮಹಾಂತೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ ಆಯುರ್ವೇದ ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ನಿಜವಾದ ಅರ್ಥದಲ್ಲಿ ಆರೋಗ್ಯ ಕ್ಷೇತ್ರದ ರಕ್ಷಕರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸದಾ ತಾರತಮ್ಯ ನೀತಿ ಅನುಸರಿಸಿ, ಆಯುರ್ವೇದ ವೈದ್ಯರನ್ನು ಕಡೆಗಣಿಸಿವೆ. ಹಲವಾರು ವರ್ಷಗಳಿಂದ ಗುತ್ತಿಗೆ ಆಧಾರದಮೇಲೆ ಉತ್ತಮ ಸೇವೆ ಸಲ್ಲಿಸುತ್ತಿರುವ ಆಯುಷ್ ವೈದ್ಯರಿಗೆ ಯಾವುದೇ ಸೇವಾ ಭದ್ರತೆ ಒದಗಿಸಿಲ್ಲ. ಈ ತಾರತಮ್ಯ ಹೋಗಲಾಡಿಸಿ ಆಯುಷ್ ವೈದ್ಯರಿಗೆ ಸರ್ಕಾರಗಳು ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಾವೆಲ್ಲ ಹೆಚ್ಚು ಸಂಘಟನೆ ಆಗಬೇಕಿದೆ ಎಂದರು.
ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಡಾ.ಶ್ರೀಶೈಲ ಪಾಟೀಲ್ ಸ್ವಾಗತಿಸಿದರು. ಅಧ್ಯಕ್ಷ ಡಾ.ಬಿ.ಬಿ.ಪಾಟೀಲ್ ವೇದಿಕೆಯಲ್ಲಿದ್ದರು. ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾದ ಡಾ.ಜೆ.ಎಸ್.ಹಿರೇಮಠ, ಡಾ.ಎಚ್.ವಿ.ಕರಿಗೌಡರ, ಡಾ.ಕರಡಿ, ಡಾ.ಜಿ.ಬಿ.ಪಾಟೀಲ್, ಡಾ.ಕರ್ಪೂರಮಠ, ಡಾ.ಅನುರಾದ ಚಂಚಲಕರ, ಡಾ.ಸಿ.ಪಿ.ಕುಪ್ಪಿ ಅವರಿಗೆ ಶ್ರೇಷ್ಠ ಸಾಧನೆಗಾಗಿ ಆಯುರ್ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

error: Content is protected !!