ಹೆಚ್ಚಿನ ದರದಲ್ಲಿ ಅಗತ್ಯ ವಸ್ತು ಮಾರಾಟ ಮಾಡುವ ಸಗಟು-ಚಿಲ್ಲರೆ-ತರಕಾರಿ ವ್ಯಾಪಾರಸ್ಥರ ವಿರುದ್ದ ಕ್ರಿಮಿನಲ್ ಮುಕದ್ದಮೆ : ಜಿ.ಪಂ ಸಿಇಒ. ಗೋವಿಂದ ರೆಡ್ಡಿ

BI ಬಿಜಾಪುರ : ಕೋವಿಡ್-19 ಪರಿಸ್ಥಿತಿಯ ದುರುಪಯೋಗ ಪಡಿಸಿಕೊಂಡು ಎಮ್.ಆರ್.ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಅಗತ್ಯ ವಸ್ತುಗಳ ಮಾರಾಟದಲ್ಲಿ ತೊಡಗಿರುವ ಸಗಟು, ಚಿಲ್ಲರೆ ವ್ಯಾಪಾರಸ್ಥರು ಮತ್ತು ತರಕಾರಿ-ಹಣ್ಣು ಮಾರಾಟಗಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿಯವರು ತಿಳಿಸಿದ್ದಾರೆ.

ನೂತನ ಪ್ರವಾಸ ಮಂದಿರದಲ್ಲಿಂದು ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು ಕೋರೋನಾ ವೈರಸ್ ವಿಸ್ತರಣೆ ಆತಂಕದಲ್ಲಿರುವ ಜನರಿಗೆ ಯಾವುದೇ ರೀತಿಯಲ್ಲಿ ಅನಾನೂಕೂಲತೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ. ಆದಾಗಿಯೂ ಕೆಲವು ಸಗಟು, ಚಿಲ್ಲರೆ ವ್ಯಾಪಾರಸ್ಥರು ಅಗತ್ಯ ವಸ್ತುಗಳು, ಹಣ್ಣು-ತರಕಾರಿ ಹಾಗೂ ಹಾಲುಗಳಂತಹ ಜೀವನಾವಶ್ಯಕ ವಸ್ತುಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ದಿನನಿತ್ಯ ದೂರುಗಳು ಬರುತ್ತಿದ್ದು, ಅಂತಹವರ ಲೈಸನ್ಸ ರದ್ದತಿಗೊಳಿಸುವುದರ ಜೊತೆಗೆ ಕ್ರಿಮಿನಲ್ ಪ್ರಕರಣ ಸಹ ದಾಖಲಿಸಲಾಗುವುದು. ಸೂಪರ್ ಮಾರ್ಕೆಟ್‌ಗಳಲ್ಲಿ ಖರೀದಿಗೆ ಒಳಗೆ ಅವಕಾಶ ನೀಡದೆ, ಹೊರಾಂಗಣದಲೆಯ್ಲೇ ಇದ್ದು ಕೆಲಸಗಾರರಿಗೆ ಅಗತ್ಯ ವಸ್ತುಗಳ ಪಟ್ಟಿಯನ್ನು ಕೊಟ್ಟು, ಖರಿದಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಕೊರೋನಾ ವೈರಸ್ ಹಿರಿಯ ನಾಗರಿಕರಿಗೆ, ಮಕ್ಕಳಿಗೆ ಹಾಗೂ ಸಕ್ಕರೆ ಖಾಯಿಲೆ, ಹೃದಯ ಸಂಬಂಧಿಸಿದ ಖಾಯಿಲೆ ಹೊಂದಿದವರಿಗೆ ಸೋಂಕು ವೇಗವಾಗಿ ತಗಲುವ ಸಾಧ್ಯತೆ ಇರುವುದರಿಂದ ಅಗತ್ಯ ವಸ್ತುಗಳ ಖರೀದಿಗಾಗಿ ಇವರು ಹೊರಗೆ ಬರಬಾರದು. ಮಾರಾಟಗಾರರು ಕೂಡಾ ಇಂತಹವರ ಕುಟುಂಬಸ್ಥರಿಗೆ ಪಾರ್ಸಲ್ ಮೂಲಕ ತಲುಪಿಸಬೇಕು. ಅಗತ್ಯವಿದ್ದಲ್ಲಿ ಹಿರಿಯ ನಾಗರಿಕರಿಗೆ ನೆರೆಹೊರೆಯವರ ಸಹಕಾರ ಪಡೆದು ಅಗತ್ಯ ವಸ್ತುಗಳನ್ನು ಖರೀದಿ ಮಾಡಿಕೊಳ್ಳುವಂತೆ ಅವರು ತಿಳಿಸಿದ್ದಾರೆ.

ಅದರಂತೆ ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈಗಾಗಲೇ ನಗರಾದ್ಯಂತ 35 ವಾರ್ಡಗಳಲ್ಲಿ ಮತ್ತು ಜಿಲ್ಲೆಯ ನಗರ ಸ್ಥಳಿಯ ವ್ಯಾಪ್ತಿಯಲ್ಲಿಯೂ ಸಿಬ್ಬಂಧಿಗಳನ್ನು ನಿಯೋಜಿಸಿದ್ದು, ಅವರ ನೆರವನ್ನು ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

ಜಿಲ್ಲಾದ್ಯಂತ ಕೋವಿಡ್-19 ತಡೆಗಟ್ಟಲು ಈಗಾಗಲೇ ನಿಯೋಜಿಸಲಾದ ಎಲ್ಲಾ ಅಧಿಕಾರಿ ಸಿಬ್ಬಂಧಿಗಳು ಕರ್ತವ್ಯ ನಿರ್ಲಕ್ಷತೊರಬಾರದು. ವಿಶೇಷವಾಗಿ ವೈದ್ಯಕೀಯ ಸಿಬ್ಬಂಧಿಗಳು ಕೇಂದ್ರ ಸ್ಥಾನದಲ್ಲಿದ್ದು ಸಾರ್ವಜನಿಕರಿಗೆ ನೆರವಾಗಬೇಕು. ಹೋಮ್ ಕ್ವಾರಂಟೈನ್ ಸೇರಿದಂತೆ ವಿವಿಧ ತಪಾಸಣಾ ಕಾರ್ಯದಲ್ಲಿರುವ ಸಿಬ್ಬಂದಿಗಳ ವಿರುದ್ದ ಯಾವುದೇ ರೀತಿಯ ದೂರುಗಳು ಬಂದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು. ವಿಜಯಪುರ ಜಿಲ್ಲಾ ಆಸ್ಪತ್ರೆಗೆ ತುರ್ತು ವೈದ್ಯಕೀಯ ಸೇವೆ ಬೇಕಾದಾಗ ಮಾತ್ರ ಬೇಟಿ ನೀಡಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಕರ್ತವ್ಯದಲ್ಲಿರುವ ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂಧಿಗಳಿಗೆ ಮಾಸ್ಕ್, ಸೈನೆಟೈಸರ್ ಮತ್ತು ಇತರೇ ಪರಿಕರಗಳನ್ನು ಆದ್ಯತೆ ಮೇಲೆ ಪೂರೈಕೆಯಾಗುವಂತೆ ಮತ್ತು ಕೊರತೆಯಾಗದಂತೆ ನೋಡಿಕೊಳ್ಳಲು ಅವರು ಸೂಚಿಸಿದರು.

ಹೋಮ್ ಕ್ವಾರಂಟೈನ್‌ದಲ್ಲಿರುವವರ ಮನೆಗಳಿಗೆ ಪೋಸ್ಟರ್ ಅಂಟಿಸುವುದು, ಪರಿಣಾಮಕಾರಿಯಾದ ಸೀಲ್ ಹಾಕುವ ವ್ಯವಸ್ಥೆ, ಗ್ರಾಮೀಣ ಮಟ್ಟದಲ್ಲಿ ಗ್ರಾಮ ಸಮಿತಿಗಳ ಚುರುಕು ಕಾರ್ಯಾಚರಣೆ, ಮೈಕ್‌ಗಳ ಮೂಲಕ ಜಾಗೃತಿ ಹೆಚ್ಚಿಸಬೇಕು. ಸಾಮಾಜಿಕ ಅಂತರಗಳ ಬಗ್ಗೆ ತೀವ್ರ ನಿಗಾದೊಂದಿಗೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ, ಗ್ರಾಮ ಪಂಚಾಯತ್ ಕಟ್ಟೆಗಳ ಮೇಲೆ ಗ್ರಾಮಸ್ಥರು ಗುಂಪು-ಗುಂಪಾಗಿ ಕುಳಿತುಕೊಳ್ಳದಿರಲು ಪಂಚಾಯತ ಕಟ್ಟೆಗಳ ಮೇಲೆ ಸುಟ್ಟ ಎಣ್ಣೆ, ಸುಟ್ಟ ಡಾಂಬರ್ ಅನ್ನೂ ತಪ್ಪದೇ ಹಾಕಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಪೂರ್ವಾಹ್ನವರೆಗೆ 330 ಜನರು ವಿದೇಶದಿಂದ ಬಂದಿರುವ ಬಗ್ಗೆ ವರದಿಯಾಗಿದೆ. 46 ಜನ 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 196 ಜನ 15 ರಿಂದ 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. 88 ಜನ ಹೋಮ್‌ಕ್ವಾರಂಟೈನ್‌ದಲ್ಲಿದ್ದಾರೆ. ಈವರೆಗೆ ಕಳುಹಿಸಿದ 11 ಪ್ರಕರಣಗಳಲ್ಲಿ 11 ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಜಾನುವಾರುಗಳ ಅನುಕೂಲಕ್ಕಾಗಿ ತಾಲೂಕಾವಾರು ನೋಡೆಲ್ ಅಧಿಕಾರಿಗಳ ನೇಮಕ:

ಜಿಲ್ಲೆಯಲ್ಲಿ ಜಾನುವಾರುಗಳ ಅನುಕೂಲಕ್ಕಾಗಿ 7 ಮೇವು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಯಾವುದೇ ರೀತಿಯಲ್ಲಿ ಮೇವಿನ ಕೊರತೆ ಇರುವುದಿಲ್ಲ. ನಗರದ ಗಾಂಧಿಚೌಕ್ ಟಾಂಗಾ ಸ್ಟಾಂಡ್‌ಹತ್ತಿರ ದನಕರುಗಳ ಅನುಕೂಲಕ್ಕಾಗಿ ತೊಟ್ಟಿಗೆಗೆ ನೀರು ತುಂಬಿಸಲು, ಇನ್ನಿತರ ಎರಡು-ಮೂರು ಕಡೆ ಕುಡಿಯುವ ನೀರಿನ ತೊಟ್ಟಿಗಳನ್ನು ತುಂಬಿಸಲು ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಚಿಸಿದ್ದು, ಮೇವಿಗೆ ಸಂಬಂಧಪಟ್ಟಂತೆ ಬರುವ ದೂರುಗಳಿಗೆ ಸ್ಪಂದಿಸಲು ಪ್ರತಿ ತಾಲೂಕಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಪಶು ಸಂಗೋಪನಾ ಇಲಾಖೆಯಯ ಕಚೇರಿಯಲ್ಲಿಯೇ ಕಂಟ್ರೋಲ್‌ರೋಮ್ ಸ್ಥಾಪಿಸಲಾಗಿದೆ.

ಪ್ರತಿ ತಾಲೂಕಿಗೆ ನೋಡಲ್ ಅಧಿಕಾರಿಗಳ ಹೆಸರು ಹಾಗೂ ದೂರವಾಣಿ ಸಂಖ್ಯೆ ಈ ಮುಂದಿನಂತೆ ಡಾ.ಬಿ.ಎಸ್ ಕನಮಡಿ ಮುಖ್ಯ ಪಶು ವೈದ್ಯಾಧಿಕಾರಿಗಳು ಪಶು ಸಂಗೋಪನಾ ಇಲಾಖೆ ವಿಜಯಪುರ ದೂ.ಸಂ: 80352-251028 ಮೋ.ಸಂ; 9535333925, ಡಾ. ಪಂಚಾಕ್ಷರಿ ಸಂಖ ಮುಖ್ಯ ವೈದ್ಯಾಧಿಕಾರಿಗಳು ತಾಲೂಕು ಆಡಳಿತ ಕಚೇರಿ ದೂ ಸಂ; 08352-250243 ಮೋ,ಸಂ; 944872181, ಡಾ.ರಾಜಕುಮಾರ ಅಡಕಿ ಮುಖ್ಯ ಪಶು ವೈದ್ಯಾಧಿಕಾರಿಗಳು ಪಶು ಆಸ್ಪತ್ರೆ ಇಂಡಿ ದೂ ಸಂ; 08359-225172 ಮೋ,ಸಂ; 9972042463, ಡಾ.ಎಸ್.ಎಂ ಬಿರಾದಾರ ಪಶು ವೈದ್ಯಾಧಿಕಾರಿಗಳು ಪಶು ಆಸ್ಪತ್ರೆ ಬ.ಬಾಗೇವಾಡಿ ದೂ,ಸಂ: 08358-245258 ಮೋ,ಸಂ; 9480031575, ಡಾ. ಮಾರುತಿ ತಡ್ಲಗಿ ಪಶು ವೈದ್ಯಾಧಿಕಾರಿಗಳು ಪಶು ಆಸ್ಪತ್ರೆ ದೂ,ಸಂ; 08488-221557 ಮೋಸಂ; 8073821169 ಗೆ ಕರೆ ಮಾಡಬಹುದು ಎಂದರು.

ಸಭೆಯಲ್ಲಿ ಡಾ. ಔದ್ರಾಮ್, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಮುಕುಂದ ಗಲಗಲಿ, ಜಿಲ್ಲಾಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ, ತಂಬಾಕು ನಿಯಂತ್ರಣಾ ಕೋಶದ ಜಿಲ್ಲಾ ಸರ್ವೆಕ್ಷಣಾಧಿಕಾರಿ ಮಲ್ಲನಗೌಡ ಬಿರಾದಾರ, ಕುಷ್ಟರೋಗ ನಿಯಂತ್ರಾಧಿಕಾರಿ ಸಂಪತಕುಮಾರ ಗುಣಾರಿ, ಡಾ. ಧಾರವಾಡಕರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!