ಅಗತ್ಯ ವಸ್ತುಗಳ ವಾಹನಗಳನ್ನು ನಿರ್ಬಂಧಿಸದಿರಲು ಜಿಲ್ಲಾಧಿಕಾರಿಗಳ ಸೂಚನೆ

BI ಬಿಜಾಪುರ : ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಂತರ್‌ರಾಜ್ಯ ಅಗತ್ಯ ವಸ್ತುಗಳ ವಾಹನಗಳಿಗೆ ಜಿಲ್ಲೆಯ ಗಡಿಭಾಗದಲ್ಲಿ ನಿರ್ಬಂಧಿಸದಿರಲು ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ ಅವರು ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿಡಿಯೊ ಸಂವಾದ ನಡೆಸಿದ ಅವರು ಜಿಲ್ಲೆಯ ಗಡಿ ಭಾಗಗಳಿಂದ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಮೂಲಕ ಆಗಮಿಸುವ ಮತ್ತು ನಿರ್ಗಮಿಸುವ ಅತ್ಯಾವಶ್ಯಕ ವಸ್ತುಗಳ ಸಾಗಾಣಿಕೆ ವಾಹನಗಳಿಗೆ ನಿರ್ಭಂಧಿಸದಿರಲು ತಿಳಿಸಿದ ಅವರು ಪ್ರಯಾಣಿಕರ ವಾಹನಗಳಿಗೆ ಸಂಪೂರ್ಣ ನಿರ್ಭಂಧಿಸಲಾಗಿದ್ದು, ಈ ಕುರಿತು ಅಧಿಕಾರಿಗಳು ತೀವ್ರ ನಿಗಾ ಇಡುವಂತೆ ಸೂಚನೆ ನೀಡಿದ್ದಾರೆ.

ಹೊರ ರಾಜ್ಯಗಳಿಂದ ಕೆಲಸಕ್ಕಾಗಿ ಆಗಮಿಸಿ ಇಲ್ಲಿಯೇ ಉಳಿದಿರುವ ಕಾರ್ಮಿಕರಿಗೆ ಮಾನವಿಯತೆಯ ನಲೆಯ ಮೇಲೆ ವಸತಿ ಮತ್ತು ಆಹಾರದ ಸೌಲಭ್ಯ ಕಲ್ಪಿಸಬೇಕು. ಈ ಕುರಿತು ಆಯಾ ಗುತ್ತಿಗೆದಾರರು ಕ್ರಮಕೈಗೊಳ್ಳಲು ತಿಳಿಸಿದ ಅವರು ಯಾವುದೇ ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಉಪವಾಸ ಇರದಂತೆ ನೋಡಿಕೊಳ್ಳಬೇಕು. ಅದರಂತೆ ಯಾವುದೇ ನಿರ್ಗತಿಕರ ಬಗ್ಗೆ ನಿರ್ಲಕ್ಷ ತೋರುವಂತಹ ಒಂದೇ ಒಂದು ದೂರು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಕೋವಿಡ್-19 ನಿಯಂತ್ರಣದ ಮಹತ್ವಾಕಾಂಕ್ಷ್ಷೆಯೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಷ್ಟ್ರದಾದ್ಯಂತ ಲಾಕ್‌ಡೌನ್‌ಗೆ ಸೂಚಿಸಿವೆ. ಅಧಿಕಾರಿಗಳು ಅಪಾಯಕಾರಿಯಾದ ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟಲು ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಚಕ್‌ಪೋಸ್ಟಗಳಲ್ಲಿ ಹಾದು ಹೋಗುವ ಪ್ರತಿಯೊಂದು ವಾಹನದ ಮೇಲೆ ಸಿಸಿ ಕ್ಯಾಮೆರಾದೊಂದಿಗೆ ನಿಗಾ ಇಡಲಾಗಿದ್ದು, 24*7 ನಿಗಾ ಇಟ್ಟು ವಾಹನಗಳ ಮಾಹಿತಿಯನ್ನು ನೀಡಬೇಕು. ಆಯಾ ನಗರ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳು ದಿನಸಿ, ಕಿರಾಣಿ ಅಂಗಡಿಗಳ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳುವಂತಹ ಬಣ್ಣಬಳಿದ ಬಾಕ್ಸ್ಗಳನ್ನು ಚಿತ್ರಿಸಬೇಕು. ಅದರಂತೆ ಅದು ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಆಯಾ ತಾಲೂಕುಗಳ ವ್ಯಾಪ್ತಿಯಲ್ಲಿ ತಹಶಿಲ್ದಾರ, ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ, ಸಿ.ಪಿ.ಐ, ಕೃಷಿ ಇಲಾಖೆ, ನಗರ-ಸ್ಥಳಿಯ ಸಂಸ್ಥೆಯ ಮುಖ್ಯಾಧಿಕಾರಿಗಳು, ಪಶು ಸಂಗೋಪನೆ, ಸಿ.ಡಿ.ಪಿ.ಓ ಒಳಗೊಂಡ ಸಮನ್ವಯ ಸಮಿತಿ ರಚಿಸಿಕೊಂಡು ತರಕಾರಿ, ಹಣ್ಣು ಕುರಿತು ಸೂಕ್ತ ಯೋಜನೆ ರೂಪಿಸಿ ಅಗತ್ಯ ವಸ್ತುಗಳ ತೊಂದರೆಯಾಗದಂತೆ ನಿಗಾ ವಹಿಸಬೇಕು. ಅಗತ್ಯ ವಸ್ತುಗಳ ವ್ಯಾಪ್ತಿಯಲ್ಲಿ ಮೇವು ಕೂಡಾ ಬರಲಿದ್ದು, ಮೇವಿನ ಅಭಾವ ಆಗದಂತೆ ಆಮದು ಮಾಡಿಕೊಳ್ಳಲು ತೊಂದರೆಯಾಗದಂತೆ ವಿಶೇಷವಾಗಿ ತಾಳಿಕೋಟಿ, ಮುದ್ದೇಬಿಹಾಳ, ಸಿಂದಗಿ, ಇಂಡಿ, ಬಸವನಬಾಗೆವಾಡಿ ಪಟ್ಟಣಗಳಲ್ಲಿ ಹೆಚ್ಚಿನ ಗಮನ ನೀಡುವಂತೆ ಅವರು ಸೂಚಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಮಾತನಾಡಿ ಪ್ರತಿ ಗ್ರಾಮಮಟ್ಟದಲ್ಲಿ ಗ್ರಾಮ ಸಮಿತಿಗಳನ್ನು ಆಯಾ ಗ್ರಾಮಪಂಚಾಯತಿ ಅಧ್ಯಕ್ಷರ ನೇತೃತ್ವದಲ್ಲಿ ರಚಿಸಿ ಪ್ರತಿದಿನ ಕೋವಿಡ್-19 ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ಪಂಚಾಯತ ಕಟ್ಟೆಮೇಲೆ, ಮರದ ಕೆಳಗೆ ಗುಂಪು-ಗುಂಪಾಗಿ ಗ್ರಾಮಸ್ಥರು ಸೇರದಂತೆ ನಿಗಾವಹಿಸಬೇಕು. ಈ ಕುರಿತು ಪೊಲೀಸ್ ಸಿಬ್ಬಂದಿಯಿಂದ ನಿಗಾ ಇಡುವುದರ ಜೊತೆಗೆ ದಂಡ ವಿಧಿಸಲು ಮತ್ತು ಡಂಗೂರ ಸಾರುವಂತೆ ತಿಳಿಸಿದ ಅವರು ತರಕಾರಿ ಮಾರಾಟಕ್ಕೆ ತಳ್ಳುವ ಗಾಡಿಗಳಿಗೆ ಅನುಮತಿ ನೀಡಬೇಕು, ನಾಗರಿಕರಿಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ ಅವರು ಗಡಿ ಭಾಗದ ಚಕ್‌ಪೊಸ್ಟಗಳಲ್ಲಿ ಪೊಲೀಸ್ ಅಧಿಕಾರಿಗಳು ತೀವ್ರ ಕಟ್ಟೆಚ್ಚರ ವಹಿಸಬೇಕು, ಬೇಸಿಗೆ ರಜೆ ಇಲ್ಲದ ಕೋವಿಡ್-19 ನಿಯಂತ್ರಣಕ್ಕೆ ಸರ್ಕಾರಗಳು ಲಾಕ್‌ಡೌನ್ ಮಾಡಿದ್ದು, ಗುಂಪು-ಗುಂಪಾಗಿ ಯುವಕರು ಕ್ರಿಕೇಟ್ ಮತ್ತು ವಿವಿಧ ಕ್ರೀಡಾ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾ ಇಡುವಂತೆ ಅವರು ಸೂಚನೆ ನೀಡಿದರು.

ವಿಡಿಯೊ ಸಂವಾದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್, ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ರಾಮ್ ಅರಿಸಿದ್ದಿ, ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಡಿ.ವೈ.ಎಸ್.ಪಿ ಲಕ್ಷ್ಮಿ ನಾರಾಯಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಮುಕುಂದ ಗಲಗಲಿ, ಜಿಲ್ಲಾಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!