ಅಂತರ ಜಿಲ್ಲಾ ಪ್ರಯಾಣಕ್ಕೆ ಪಾಸ್ ಕಡ್ಡಾಯ : ಕಚೇರಿ ಕೆಲಸಕ್ಕೆ ಹಾಜರಾಗುವಂತೆ ಸರ್ಕಾರಿ ಸಿಬ್ಬಂದಿಗಳಿಗೆ ಸೂಚನೆ

BI ಬಿಜಾಪುರ : ಕೇಂದ್ರ ಗೃಹ ಮಂತ್ರಾಲಯದ ಆದೇಶದನ್ವಯ ಕರ್ನಾಟಕ ರಾಜ್ಯ ಸರ್ಕಾರವು ಹೊಸ ಮಾರ್ಗಸೂಚಿ ಜಾರಿಗೊಳಿಸಿ ಮೇ 4 ರಿಂದ ಅನ್ವಯವಾಗುವಂತೆ ಎರಡು ವಾರಗಳ ಕಾಲ ಲಾಕ್‌ಡೌನ್ ವಿಸ್ತರಿಸಿದ್ದು, ಅದರನ್ವಯ ಈ ಕೆಳಗಿನಂತೆ ಮಾರ್ಗಸೂಚಿಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.

ಅದರಂತೆ ಇತರೆ ಜಿಲ್ಲೆಗಳಿಗೆ ಅನುಮತಿಸಲಾದ ಚಟುವಟಿಕೆಗಳಿಗೆ ಅಂತರ ಜಿಲ್ಲೆಗಳ ಸಂಚಾರಕ್ಕಾಗಿ ಪಾಸ್ ಅಗತ್ಯವಿರುತ್ತದೆ. ಇದನ್ನು ಆಯಾ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು. ಅನುಮತಿಸಲಾಗದ ಚಟುವಟಿಕೆಗಳಿಗೆ ಅಂತರ ಜಿಲ್ಲಾ ಪಾಸ್‌ಗಳನ್ನು ನೀಡಲಾಗದು, ಒಂದು ಬಾರಿಯ ಚಲನವಲನಕ್ಕಾಗಿ ಮಾತ್ರ ಸಿಲುಕಿರುವ ವ್ಯಕ್ತಿಗಳಿಗೆ(stranded persons) ನೀಡಬಹುದು.

ಸಂಜೆ 7 ರಿಂದ ಬೆಳಿಗ್ಗೆ 7 ರವೆರೆಗೆ ನಡುವಿನ ರಾತ್ರಿಯ ಅವಧಿಯ ಕರ್ಫ್ಯೂ ಸಮಯಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಕೈಗಾರಿಕೆಗಳು ಮತ್ತು ವಾಣಿಜ್ಯ ಮತ್ತು ಐಟಿ, ಬಿಟಿ ಸೇರಿದಂತೆ ಇನ್ನಿತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪಾಸ್‌ಗಾಗಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು.

ಸರ್ಕಾರದ ಮಾರ್ಗಸೂಚಿಗಳನ್ವಯ ಆರೋಗ್ಯ ಇಲಾಖೆಯು ಕಾಲಕಾಲಕ್ಕೆ ಕೆಂಪು, ಹಸಿರು ಮತ್ತು ಕಿತ್ತಳೆ ವಲಯಗಳನ್ನಾಗಿ ವಿಂಗಡಿಸಿದ್ದು, ಅದರಲ್ಲಿ ವಿಜಯಪುರ ಜಿಲ್ಲೆಯು ಕಿತ್ತಳೆ ವಲಯದಲ್ಲಿ ಬರುತ್ತಿದ್ದು, ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಶೇ 100 ರಷ್ಟು ಗ್ರೂಪ್ ಎ.ಬಿ,ಸಿ,ಡಿ ವೃಂದದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

error: Content is protected !!